SUDDIKSHANA KANNADA NEWS/ DAVANAGERE/ DATE:06-01-2024
ದಾವಣಗೆರೆ (Davanagere): ಭದ್ರಾ ಡ್ಯಾಂ ನೀರು ಅವಲಂಬಿಸಿರುವ ಶೇಕಡಾ 70 ರಷ್ಟು ಇರುವುದು ದಾವಣಗೆರೆ ಜಿಲ್ಲೆಯಲ್ಲಿ. ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಈ ನೀರು ನಂಬಿ ದ್ವಿದಳ ಧಾನ್ಯ, ಭತ್ತ ಸೇರಿದಂತೆ ಇತರೆ ಬೆಳೆ ಬೆಳೆಯುತ್ತಾರೆ. ಶಿವಮೊಗ್ಗದ ಮಲವಗೊಪ್ಪದಲ್ಲಿ ನಡೆದ ನೀರಾವರಿ ಸಲಹಾ ಸಮಿತಿಯ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರಕ್ಕೆ ದಾವಣಗೆರೆ ಜಿಲ್ಲೆಯ ರೈತ ಮುಖಂಡರು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಅವರು ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಪಾಡಿದ್ರು. ಆದ್ರೆ, ಅವರ ಪುತ್ರರೂ ಆದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರು ಹಿತಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಇದು ಅವೈಜ್ಞಾನಿಕ ಎಂದು ರೈತ ಮುಖಂಡರು ಆರೋಪಿಸಿದ್ದಾರೆ. ತೀವ್ರ ಬರಗಾಲ ಬಂದಾಗ ದಾವಣಗೆರೆ ಜಿಲ್ಲೆಯ ರೈತರಿಗೆ ನೀರಿನ ಸೌಲಭ್ಯ ದೊರಕಿಸಿಕೊಟ್ಟಿದ್ದರು. ಆದ್ರೆ, ಅವರ ಪುತ್ರ ಮಧು ಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲೆಯ ರೈತರ ಹಿತ ಕಾಯುವಂತೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಬಂಗಾರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ 148 ಅಡಿ ನೀರು ಇದ್ದರೂ ಭದ್ರಾ ಡ್ಯಾಂನಿಂದ ದಾವಣಗೆರೆ ಜಿಲ್ಲೆಯ ರೈತರ ಹಿತ ಗಮನದಲ್ಲಿಟ್ಟುಕೊಂಡು ನೀರು ನೀಡುವಂತೆ ಕ್ರಮ ಕೈಗೊಂಡಿದ್ದರು. ಆದ್ರೆ, ಅವರ ಪುತ್ರ ಮಧು ಬಂಗಾರಪ್ಪ ಅವರು ಶಿವಮೊಗ್ಗ ಜಿಲ್ಲೆಯ ರೈತರ ಹಿತ ಮಾತ್ರ ಗಮನದಲ್ಲಿಟ್ಟುಕೊಂಡು ನಿರ್ಧಾರ ತೆಗೆದುಕೊಂಡಿದ್ದಾರೆ. ದಾವಣಗೆರೆ ಜಿಲ್ಲೆಯ ರೈತರ ಹಿತ ಗಮನದಲ್ಲಿಟ್ಟುಕೊಂಡು ತೀರ್ಮಾನ ತೆಗೆದುಕೊಂಡಿಲ್ಲ ಎಂಬ ಆರೋಪ ರೈತ ಮುಖಂಡರದ್ದು.
Read Also This Story:
ಮತ್ತೆ ಆನ್ ಅಂಡ್ ಆಫ್, ಎಡದಂಡೆ ನಾಲೆಗೆ ಜ.10, ಬಲದಂಡೆ ನಾಲೆಗೆ ಭದ್ರಾ ಜ.20 ರಿಂದ ನೀರು
ಕೈಗಾರಿಕೆ, ಕುಡಿಯುವ ನೀರು ಸೇರಿದಂತೆ ಇತರೆ ಕಾರಣ ನೀಡಲಾಗುತ್ತಿದೆ. ಕೈಗಾರಿಕೆಗೆ ನೀರು ಮೀಸಲಿಡಲಾಗಿದೆ, ನೀಡಲಾಗುತ್ತಿದೆ ಎಂಬ ಮಾಹಿತಿ ಕೊಡಲಾಗುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿ ಭತ್ತ ಪ್ರಮುಖ ಬೆಳೆ. ದ್ವಿದಳ ಧಾನ್ಯ, ತರಕಾರಿ ಬೆಳೆಯಲಾಗುತ್ತಿದೆ. ಈ ನಿರ್ಧಾರದಿಂದ ದ್ವಿದಳ ಧಾನ್ಯ, ಭತ್ತ ಬೆಳೆಯಲು ಸಾಧ್ಯವಾಗುವುದಿಲ್ಲ. ಭದ್ರಾ ಡ್ಯಾಂ ಅನ್ನೇ ನಂಬಿರುವ ಅಚ್ಚುಕಟ್ಟುದಾರ ಕೊನೆ ಪ್ರದೇಶಗಳಿಗೆ ನೀರು ಸಿಗುವುದಿಲ್ಲ ಎಂಬ ಆತಂಕವೂ ಇದೆ.
ಕಾಡಾ ನಿರ್ಧಾರ ಏನು…?
ಭದ್ರಾ ಜಲಾಶಯದ ಎಡದಂಡ ನಾಲೆಗೆ ಜ.10 ರಿಂದ ಮತ್ತು ಬಲದಂಡ ನಾಲೆ ಜ.20 ರಿಂದ ನೀರು ಹರಿಸಲು ನಿರ್ಧರಿಸಲಾಗಿದೆ. ಶಿವಮೊಗ್ಗದ ಮಲವಗೊಪ್ಪದ ಭದ್ರಾ ಅಚ್ಚುಕಟ್ಟು ಅಭಿವೃದ್ದಿ ಪ್ರಾಧಿಕಾರ ಕಚೇರಿಯಲ್ಲಿ ಏರ್ಪಡಿಸಲಾಗಿದ್ದ 2023-24 ನೇ ಸಾಲಿನ ಭದ್ರಾ ಯೋಜನಾ ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರದಿಂದ ದಾವಣಗೆರೆ ರೈತರಿಗೆ ಅನ್ಯಾಯವಾಗಿದೆ ಎಂಬ ಆರೋಪ ರೈತರದ್ದು.
ಈ ಸುದ್ದಿಯನ್ನೂ ಓದಿ:
ಧೂಳೆಬ್ಬಿಸುತ್ತಿದೆ ವಿನಯ ಪಾದಯಾತ್ರೆ, ಕಾಲ್ನಡಿಗೆಗೆ ಸಿಗುತ್ತಿದೆ ಜನರ ಭಾರೀ ಸ್ಪಂದನೆ, ಪ್ರೀತಿ: ಕಾಂಗ್ರೆಸ್ ಯುವ ನಾಯಕ ಬೆಳೆದು ಬಂದ ರೋಚಕ ಸ್ಟೋರಿ…!
ಎಡದಂಡ ನಾಲೆಗೆ ಜ.10 ರಿಂದ ನೀರು ಹರಿಸಲಾಗುತ್ತಿದ್ದು, ಆನ್ ಮತ್ತು ಆಫ್ ಮಾದರಿ ಅನುಸರಿಸಲಾಗುವುದು. ಜ.10 ರಿಂದ 16 ದಿನ ಆನ್ ಮತ್ತು 15 ದಿನ ಆಫ್, ನಂತರ 17 ದಿನ ಆನ್, 15 ದಿನ ಆಫ್, 18 ದಿನ ಆನ್ 15 ದಿನ ಆಫ್ ಮತ್ತು 20 ದಿನ ಆನ್, 15 ದಿನ ಆಫ್ ಇರುತ್ತದೆ.
ಬಲದಂಡ ನಾಲೆಗೆ ಜ.20 ರಿಂದ ನೀರು ಹರಿಸಲಾಗುತ್ತಿದ್ದು ಮೊದಲಿಗೆ 12 ದಿನ ಆನ್, 20 ದಿನ ಆಫ್, 12 ದಿನ ಆನ್ 20 ದಿನ ಆಫ್, 14 ದಿನ ಆನ್ 20 ದಿನ ಆಫ್ ಮತ್ತು 15 ದಿನ ಆನ್ 20 ದಿನ ಆಫ್ ಇರುತ್ತದೆ. ಇದು ಅವೈಜ್ಞಾನಿಕ ಎಂಬುದು ರೈತರ ಆರೋಪ.
ಡ್ಯಾಂನಲ್ಲಿ ಎಷ್ಟಿದೆ ನೀರು..?
ನಿರೀಕ್ಷಿಸಿದಷ್ಟು ಮಳೆಯಾಗದ ಕಾರಣ ಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದೆ. ಜಲಾಶಯದ ಗರಿಷ್ಟ ನೀರಿನ ಸಂಗ್ರಹಣಾ ಮಟ್ಟ 186 ಅಡಿ. ಪ್ರಸ್ತುತ 35.370 ಅಡಿ ಸಂಗ್ರಹವಿದೆ. ಪ್ರಸ್ತುತ ಜಲಾಶಯದಲ್ಲಿ ನೀರಾವರಿ ಬಳಕೆಗೆ ಬರುವ 12.50 ಟಿಎಂಸಿ ಪ್ರಮಾಣದ ನೀರನ್ನು ಬಲದಂಡ ನಾಲೆಗೆ 2650 ಕ್ಯೂಸೆಕ್ಸ್ ಮತ್ತು ಎಡದಂಡ ನಾಲೆಗೆ 380 ಕ್ಯೂಸೆಕ್ಸ್ ಮತ್ತು ಗೊಂದಿ ನಾಲೆ ಸೇರಿದಂತೆ ಪ್ರತಿದಿನ 0.27 ಟಿಎಂಸಿ ನೀರು ಹರಿಸಿದಲ್ಲಿ ಒಟ್ಟು 47 ದಿನಗಳಿಗೆ ನೀರು ಹರಿಸಬಹುದು.
ಭತ್ತ ಬೆಳೆಯದಿದ್ದರೆ ಒಳಿತು
ಪ್ರಸ್ತುತ ಚಳಿ ಇದ್ದು ವಾತಾವರಣ ತಂಪಿದೆ. ಮಾರ್ಚ್ ನಂತರ ಬೇಸಿಗೆ ಹೆಚ್ಚಲಿದ್ದು, ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆ ಉಳಿಸಿಕೊಳ್ಳಲು ಕಷ್ಟವಾಗಬಹುದು. ಆದ್ದರಿಂದ ಕಟ್ಟಕಡೆಯ ಅಚ್ಚುಕಟ್ಟುದಾರರ ಅನುಕೂಲವನ್ನೂ ಪರಿಗಣಿಸಿ ಈಗ ಸ್ವಲ್ಪ ತಡವಾಗಿ ನೀರು ಹರಿಸುವ ಬಗ್ಗೆ ಅಧಿಕಾರಿಗಳು, ರೈತರು ತಮ್ಮ ಸಲಹೆ-ಸೂಚನೆಗಳನ್ನು ನೀಡಬೇಕು. ನೀರಿನ ಅಭಾವವಿರುವ ಕಾರಣ ಪ್ರಸ್ತುತ ರೈತರು ಭತ್ತ ಬೆಳೆದಿದ್ದರೆ ಒಳಿತು ಎಂಬುದು ಕಾಡಾದಲ್ಲಿ ಚರ್ಚೆಯಾದ ವಿಷಯ.
ದಾವಣಗೆರೆ ಜಿಲ್ಲಾಧಿಕಾರಿ ಏನಂದ್ರು…?
ಪ್ರಸ್ತುತ ಜಲಾಶಯದಲ್ಲಿರುವ ನೀರನ್ನು ಕುಡಿಯುವ ನೀರು ಮತ್ತು ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು ಸಂರಕ್ಷಣೆ ಮಾಡಿಕೊಳ್ಳಬಹುದಾಗಿದ್ದು, ಜಿಲ್ಲೆಯಲ್ಲಿ ಭತ್ತ ಬೆಳೆಯದಿರುವಂತೆ ರೈತರಿಗೆ ಸೂಚನೆ ನೀಡಲಾಗಿದೆ
ಎಂಬುದು ದಾವಣಗೆರೆ ಜಿಲ್ಲಾಧಿಕಾರಿ ವೆಂಕಟೇಶ್ ಮಾತು.
ರೈತರ ವಿರೋಧಿ
ಜನವರಿ 20 ರಿಂದ 12 ದಿನ ನೀರು ಹರಿಸುವುದು ಮತ್ತು 20 ದಿನ ನೀರು ನಿಲ್ಲಿಸುವುದು ಎಂದು ಭದ್ರಾ ನೀರಾವರಿ ಸಲಹಾ ಸಮಿತಿ ನಿರ್ಣಯ ಸಂಪೂರ್ಣ ಅವೈಜ್ಞಾನಿಕವಾಗಿದ್ದು, ದಾವಣಗೆರೆ ಜಿಲ್ಲೆಯ ರೈತರ ವಿರೋಧಿಯಾಗಿದೆ ಎಂದು ರೈತ ಮುಖಂಡ ಕೊಳೇನಹಳ್ಳಿ ಬಿ ಎಂ ಸತೀಶ್ ಹೇಳಿದ್ದಾರೆ.
ಪ್ರಸ್ತುತ ಜಲಾಶಯದಲ್ಲಿ 21.54 ಟಿ.ಎಂ.ಸಿ ನೀರಿನ ಲಭ್ಯತೆ ಇದೆ. ಇಷ್ಟು ನೀರನ್ನು 72 ದಿನಗಳ ಕಾಲ ಹರಿಸಬಹುದಾಗಿದೆ. ಆದರೆ 6.90 ಟಿ.ಎಂ.ಸಿ ನೀರನ್ನು ಕುಡಿಯುವ ನೀರಿಗಾಗಿ ಎಂದು ಮೀಸಲಿಡಲಾಗಿದೆ ಮತ್ತು 2.40 ಟಿ.ಎಂ.ಸಿ ನೀರು ಆವಿಯಾಗುತ್ತದೆ ಎಂದು ಲೆಕ್ಕ ಹಾಕಲಾಗಿದೆ. ಇದು ತಲೆ ಬುಡವಿಲ್ಲದ ಲೆಕ್ಕಾಚಾರ. ದಾವಣಗೆರೆ ಜಿಲ್ಲೆಯ ರೈತರನ್ನು ಸಂಕಷ್ಟಕ್ಕೆ ದೂಡುವ ಕುತಂತ್ರ ಎಂದು ಆರೋಪಿಸಿದ್ದಾರೆ.
ಎಸ್. ಎಸ್. ಮಲ್ಲಿಕಾರ್ಜುನ್ ಸಭೆಗೆ ಬರಲಿಲ್ಲ
ಜಿಲ್ಲೆಯಲ್ಲಿ ರೈತರು ನೀರಿನ ಹಾಹಕಾರದಿಂದ ರೈತರು ಪರಿತಪಿಸುತ್ತಿದ್ದಾರೆ. ಆದ್ರೂ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನರವರು ಸಭೆಗೆ ಗೈರು ಹಾಜರಾಗಿರುವುದು ಜಿಲ್ಲೆಯ ರೈತರ ಹಿತಾಸಕ್ತಿ ಕಾಪಾಡುವಲ್ಲಿ ದಿವ್ಯ ನಿರ್ಲಕ್ಷ್ಯ ಧೋರಣೆ ಹೊಂದಿರುವುದು ಸ್ಪಷ್ಟವಾಗಿದೆ.
ಭದ್ರಾ ನೀರು ನಮ್ಮ ಹಕ್ಕು. ಡ್ಯಾಂನಲ್ಲಿ 72 ದಿನಗಳ ಅವಧಿಗೆ ನೀರು ಇರುವುದರಿಂದ ನೀರು ಬಿಡಿ ಎಂದು ಕೇಳಲಾಗುತ್ತಿದೆ. ರೈತರ ಕೂಗಿಗೆ ಕಿಂಚಿತ್ತೂ ಬೆಲೆ ಕೊಡದ ದಾವಣಗೆರೆ ಜಿಲ್ಲೆಯ ಜನ ಪ್ರತಿನಿಧಿಗಳು ರೈತರಿಗೆ ವಂಚನೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ಅಪ್ಪ ರೈತರ ಪರ, ಪುತ್ರ ವಿರೋಧಿ:
ಈ ಹಿಂದೆ ಎಸ್ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಡ್ಯಾಂನಲ್ಲಿ 148 ಅಡಿ ನೀರು ಇದ್ದಾಗಲೂ ಭತ್ತ ಬೆಳೆಯಲು ನೀರು ಕೊಟ್ಟರು. ಆದರೆ ಅವರ ಮಗ ಮಧು ಬಂಗಾರಪ್ಪನವರು ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು ಕೊಡದೆ ವಂಚಿಸಿದ್ದಾರೆ ಎಂದು ಹಳ್ಳಿಗಳಲ್ಲಿ ರೈತರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ
ಎಂದು ಬಿ. ಎಂ. ಸತೀಶ್ ಹೇಳಿದ್ದಾರೆ.
ಶಾಮನೂರು ಲಿಂಗರಾಜ್ ಹೇಳೋದೇನು…?
ಭದ್ರಾ ಡ್ಯಾಂ ದಾವಣಗೆರೆ ಜಿಲ್ಲೆಯ ರೈತರ ಜೀವನಾಡಿ, ಜೀವಸೆಲೆ. ಆನ್ ಅಂಡ್ ಆಫ್ ಪದ್ಧತಿಯಂತೆ ನೀರು ಹರಿಸಿದರೆ ಕೊನೆ ಭಾಗದ ಅಚ್ಚುಕಟ್ಟು ಪ್ರದೇಶದ ರೈತರಿಗೆ ಸಿಗುವುದಿಲ್ಲ. ದ್ವಿದಳ ಧಾನ್ಯ, ತರಕಾರಿ ಬೆಳೆಯಲು ಸಾಧ್ಯವಾಗದು. ಈಗ ತೆಗೆದುಕೊಂಡಿರುವ ತೀರ್ಮಾನ ಪುನರ್ ಪರಿಶೀಲಿಸಬೇಕು. ಎಸ್. ಬಂಗಾರಪ್ಪ
ಅವರು ಮುಖ್ಯಮಂತ್ರಿಯಾಗಿದ್ದಾಗ ದಾವಣಗೆರೆ ಜಿಲ್ಲೆಯ ರೈತರ ಹಿತ ಗಮನದಲ್ಲಿಟ್ಟುಕೊಂಡು ಶಿವಮೊಗ್ಗ ಜಿಲ್ಲೆಯ ರೈತರಿಗೂ ತೊಂದರೆಯಾಗದಂತೆ ಕ್ರಮ ಕೈಗೊಂಡಿದ್ದರು. ಆದ್ರೆ, ಮಧು ಬಂಗಾರಪ್ಪ ಅವರು ಮುಂಬರುವ ಲೋಕಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ತೆಗೆದುಕೊಂಡಿರುವ ನಿರ್ಧಾರ ಎಂದು
ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದು ರೈತ ಮುಖಂಡರೂ ಆದ ಭಾರತೀಯ ರೈತ ಒಕ್ಕೂಟದ ಪ್ರಮುಖ ಶಾಮನೂರು ಲಿಂಗರಾಜ್ ಹೇಳಿದ್ದಾರೆ.
ಒಟ್ಟಿನಲ್ಲಿ ದಾವಣಗೆರೆ ಜಿಲ್ಲೆಯ ರೈತರಿಗೆ ನೀರು ಸಿಗುತ್ತದೆಯಾದರೂ ಅಡಿಕೆ ಬೆಳೆಗಾರರ ಹಿತ ಕಾಪಾಡುವ ಉದ್ದೇಶವಾಗಿದೆ. ದ್ವಿದಳ ಧಾನ್ಯ, ತರಕಾರಿ, ಭತ್ತ ನಂಬಿಕೊಂಡು ಬದುಕುತ್ತಿರುವ ರೈತರ ಪಾಡೇನು..? ಇದನ್ನು ನಂಬಿಕೊಂಡು ಬದುಕುತ್ತಿರುವ ಕೃಷಿ ಕಾರ್ಮಿಕರು ಬದುಕಿಗೆ ಏನು ಮಾಡಬೇಕು ಎಂಬ ಪ್ರಶ್ನೆ ಹುಟ್ಟಿದೆ. ಶಿವಮೊಗ್ಗ ಜಿಲ್ಲೆಯ ರೈತರಿಗೂ ಅನಾನುಕೂಲವಾಗದಂತೆ, ದಾವಣಗೆರೆ ಜಿಲ್ಲೆಯ ರೈತರಿಗೂ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು. ಈಗ ತೆಗೆದುಕೊಂಡಿರುವ ನಿರ್ಧಾರ ಪುನರ್ ಪರಿಶೀಲಿಸಿ ಮತ್ತೆ ಕಾಡಾ ಸಭೆ ಕರೆದು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.