Home ದಾವಣಗೆರೆ ದಾವಣಗೆರೆಯಲ್ಲಿ ಬಿಜೆಪಿ ವಿಜಯೋತ್ಸವ: ಕಾಂಗ್ರೆಸ್ ಸರ್ಕಾರದ ವಿರುದ್ಧ ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್ ಸಮರ್ಥ ಹೋರಾಟ – ರಾಜನಹಳ್ಳಿ ಶಿವಕುಮಾರ್ ವಿಶ್ವಾಸ!
ದಾವಣಗೆರೆಬೆಂಗಳೂರು

ದಾವಣಗೆರೆಯಲ್ಲಿ ಬಿಜೆಪಿ ವಿಜಯೋತ್ಸವ: ಕಾಂಗ್ರೆಸ್ ಸರ್ಕಾರದ ವಿರುದ್ಧ ರಘು ಕೌಟಿಲ್ಯ, ಲಿಂಗರಾಜ್ ಪಾಟೀಲ್ ಸಮರ್ಥ ಹೋರಾಟ – ರಾಜನಹಳ್ಳಿ ಶಿವಕುಮಾರ್ ವಿಶ್ವಾಸ!

Share
ದಾವಣಗೆರೆ
Share

ದಾವಣಗೆರೆ: ವಿಧಾನ ಪರಿಷತ್ ಚುನಾವಣೆಯಲ್ಲಿ ರಘು ಕೌಟಿಲ್ಯ ಹಾಗೂ ಲಿಂಗರಾಜ್ ಪಾಟೀಲ್ ಅವರು ಆಯ್ಕೆಯಾದ ಹಿನ್ನೆಲೆಯಲ್ಲಿ ನಗರದ ಕೆ. ಬಿ. ಬಡಾವಣೆಯಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯ ಮುಂದೆ ವಿಜಯೋತ್ಸವ ಆಚರಿಸಲಾಯಿತು. ಸಿಹಿ ತಿನ್ನಿಸಿ, ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದರು.

ಈ ವೇಳೆ ಮಾತನಾಡಿದ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಾಗೂ ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಅವರು, ಬಿಜೆಪಿಯು ಸಾಮಾನ್ಯ ಅಭ್ಯರ್ಥಿಗಳಿಗೆ ವಿಧಾನ ಪರಿಷತ್ ಚುನಾವಣೆಯಲ್ಲಿ ಟಿಕೆಟ್ ನೀಡಿದೆ. ಸಾಮಾನ್ಯ ಕಾರ್ಯಕರ್ತರಿಗೆ ವಿಧಾನ ಪರಿಷತ್ ಟಿಕೆಟ್ ನೀಡುವ ಮೂಲಕ ಗೆಲ್ಲಿಸಿದೆ. ಇಬ್ಬರೂ ಅಭಿನಂದಾರ್ಹರು ಎಂದು ತಿಳಿಸಿದರು.

ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ಹಲವಾರು ಯೋಜನೆಗಳನ್ನು ನೀಡಿದೆ. ಎಲ್ಲಾ ವರ್ಗದವರಿಗೂ ಆದ್ಯತೆ ನೀಡಿದೆ. ಕೇವಲ ಹಣವಿದ್ದವರಿಗೆ ಮಾತ್ರ ವಿಧಾನ ಪರಿಷತ್ ಟಿಕೆಟ್ ನೀಡುವ ಸಂಪ್ರದಾಯಕ್ಕೆ ಬ್ರೇಕ್ ಹಾಕಿದ್ದೇ ಬಿಜೆಪಿ. ರಾಜ್ಯಸಭೆ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಪಕ್ಷಕ್ಕಾಗಿ ಹಗಲಿರುಳು ದುಡಿದವರಿಗೆ ಮನ್ನಣೆ ನೀಡುತ್ತದೆ. ದೇಶದಲ್ಲಿ ಬೇರೆ ಯಾವ ಪಕ್ಷಗಳಲ್ಲಿಯೂ ಈ ಸಂಪ್ರದಾಯ ಇಲ್ಲ. ದೇಶದ ಜನರು ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಒಪ್ಪಿರುವುದು ಎಂದು ಹೇಳಿದರು.

ರಘು ಕೌಟಿಲ್ಯ ಹಾಗೂ ಲಿಂಗರಾಜ್ ಪಾಟೀಲ್ ಅವರು ಪಕ್ಷದ ಸಂಘಟನೆಗೆ ಅವಿರತ ಶ್ರಮ ವಹಿಸಿದ್ದಾರೆ. ಪಕ್ಷ ವಹಿಸಿದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಪಕ್ಷ ನಿಷ್ಠೆ, ಸಂಘಟನೆ ಸೇರಿದಂತೆ ಎಲ್ಲಾ ಆಯಾಮಗಳಲ್ಲಿಯೂ ಚಿಂತಿಸಿ ಟಿಕೆಟ್ ನೀಡಿದ್ದು, ಗೆದ್ದಿರುವ ಇಬ್ಬರೂ ಅಭ್ಯರ್ಥಿಗಳು ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ಅಕ್ರಮ, ಭ್ರಷ್ಟಾಚಾರ, ಜನವಿರೋಧಿ ನೀತಿಗಳ ಬಗ್ಗೆ ಸಮರ್ಥವಾಗಿ ಧ್ವನಿ ಎತ್ತುತ್ತಾರೆ ಎಂಬ ವಿಶ್ವಾಸ ಇದೆ ಎಂದು ತಿಳಿಸಿದರು.

ಸಂಭ್ರಮಾಚರಣೆ ವೇಳೆ ಬಿಜೆಪಿ ಜಿಲ್ಲಾ ಒಬಿಸಿ ಘಟಕದ ಅಧ್ಯಕ್ಷ ಮಹೇಂದ್ರ ಹೆಬ್ಬಾಳ್, ಅಣಜಿ ಗುಡ್ಡೇಶ್, ಕಿಶೋರ್ ಕುಮಾರ್, ಶಿವಾನಂದ, ಬಾಲರಾಜ್ ಶ್ರೇಷ್ಠಿ, ರಾಮಚಂದ್ರ, ನವೀನ್ ಕುಮಾರ್, ಹೆಚ್. ಬಿ. ದುಗ್ಗೇಶ್ ಮತ್ತಿತರರು ಪಾಲ್ಗೊಂಡಿದ್ದರು.

Share

Leave a comment

Leave a Reply

Your email address will not be published. Required fields are marked *