Home ದಾವಣಗೆರೆ ದಾವಣಗೆರೆಯಲ್ಲಿ ಗನ್ ಹಿಡಿದು ಶಿಸ್ತು ಕಲಿಯಲಿರುವ 70 ಮಹಿಳೆಯರು ಸೇರಿದಂತೆ 280 ನಾಗರಿಕರು!
ದಾವಣಗೆರೆಕ್ರೈಂ ನ್ಯೂಸ್ಬೆಂಗಳೂರು

ದಾವಣಗೆರೆಯಲ್ಲಿ ಗನ್ ಹಿಡಿದು ಶಿಸ್ತು ಕಲಿಯಲಿರುವ 70 ಮಹಿಳೆಯರು ಸೇರಿದಂತೆ 280 ನಾಗರಿಕರು!

Share
ದಾವಣಗೆರೆ
Share

ದಾವಣಗೆರೆ: ಸಾರ್ವಜನಿಕರ ಆತ್ಮರಕ್ಷಣೆ ಹಾಗೂ ತುರ್ತು ಸಂದರ್ಭಗಳಲ್ಲಿ ದೇಶದ ಸೈನಿಕರಿಗೆ ನೆರವಾಗುವ ನಿಟ್ಟಿನಲ್ಲಿ ದಾವಣಗೆರೆ ಜಿಲ್ಲಾ ಪೊಲೀಸ್ ವತಿಯಿಂದ ಹಮ್ಮಿಕೊಳ್ಳಲಾಗಿರುವ 34 ನೇ “ನಾಗರಿಕ ಬಂದೂಕು ತರಬೇತಿ ಶಿಬಿರ”ಕ್ಕೆ ಇಂದು ಅಧಿಕೃತ ಚಾಲನೆ ದೊರೆತಿದೆ.

ನಗರದ ಡಿಎಆರ್ ಕವಾಯತು ಮೈದಾನದ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕ ಶೇಖರ್ ಹೆಚ್.ಟಿ  ಅವರು ಶಿಬಿರವನ್ನು ಉದ್ಘಾಟಿಸಿದರು.

ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಎಸ್ಪಿ ಶೇಖರ್ ಹೆಚ್.ಟಿ ಅವರು, “ನಾಗರಿಕರ ಸ್ವಯಂ ರಕ್ಷಣೆಗಾಗಿ ಹಾಗೂ ತುರ್ತು ಕರೆ ಬಂದಾಗ ದೇಶ ಕಾಯುವ ಸೈನಿಕರಿಗೆ ನೆರವಾಗುವ ದೂರದೃಷ್ಟಿಯಿಂದ ಈ ತರಬೇತಿಯನ್ನು ನೀಡಲಾಗುತ್ತಿದೆ. ಪೊಲೀಸ್ ಇಲಾಖೆಯ ಸಶಸ್ತ್ರ ಮೀಸಲು ಪೊಲೀಸ್ ಮತ್ತು ಸ್ವಯಂ ಸೇವಾ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ನಡೆಯುವ ಈ ಶಿಬಿರವು ಸಾರ್ವಜನಿಕರು ಮತ್ತು ಪೊಲೀಸರ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸಲಿದೆ. ಆಯುಧಗಳ ಪರಿಚಯ, ಅವುಗಳ ಬಳಕೆ ಮತ್ತು ಕಾನೂನು ಅರಿವು ಮೂಡಿಸಲು ಇದು ಸಹಕಾರಿಯಾಗಿದೆ” ಎಂದರು.

280 ಶಿಬಿರಾರ್ಥಿಗಳಿಂದ ನೋಂದಣಿ:

ಪ್ರಸ್ತುತ 34 ನೇ ತಂಡದ ತರಬೇತಿಯು ಜೂನ್ 8, 2026 ರಿಂದ ಜೂನ್ 14, 2026 ರವರೆಗೆ ನಡೆಯಲಿದ್ದು, ಒಟ್ಟು 280 ಜನರು (210 ಪುರುಷರು ಹಾಗೂ 70 ಮಹಿಳೆಯರು) ಅರ್ಜಿ ಸಲ್ಲಿಸಿ ಪಾಲ್ಗೊಂಡಿದ್ದಾರೆ. ಶಿಬಿರಾರ್ಥಿಗಳು ಅತ್ಯಂತ ಶಿಸ್ತಿನಿಂದ ಪಾಲ್ಗೊಂಡು ಬಂದೂಕು ನಿರ್ವಹಣೆ ಮತ್ತು ಕಾನೂನುಗಳ ಬಗ್ಗೆ ಮಾಹಿತಿ ಪಡೆದು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಎಸ್ಪಿ ತಿಳಿಸಿದರು.

ಈವರೆಗಿನ ಸಾಧನೆ:

ದಾವಣಗೆರೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 33 ತಂಡಗಳಿಂದ 1998 ಪುರುಷರು ಹಾಗೂ 480 ಮಹಿಳೆಯರು ಸೇರಿದಂತೆ ಒಟ್ಟು 2,478 ಸಾರ್ವಜನಿಕರಿಗೆ ಯಶಸ್ವಿಯಾಗಿ ತರಬೇತಿ ನೀಡಲಾಗಿದೆ. ಈ ಶಿಬಿರದಲ್ಲಿ ಜನಪ್ರತಿನಿಧಿಗಳು, ರೈತರು, ವ್ಯಾಪಾರಿಗಳು, ವಿದ್ಯಾರ್ಥಿಗಳು, ವೈದ್ಯರು, ವಕೀಲರು ಹಾಗೂ ಪತ್ರಕರ್ತರು ಸೇರಿದಂತೆ ಸಮಾಜದ ವಿವಿಧ ರಂಗಗಳ ಆಸಕ್ತರು ತರಬೇತಿ ಪಡೆದಿರುವುದು ವಿಶೇಷವಾಗಿದೆ.

ಕಾರ್ಯಕ್ರಮದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಪರಮೇಶ್ವರ ಹೆಗಡೆ, ಡಿಎಆರ್ ಡಿವೈಎಸ್ಪಿ ಜಿ.ಎಂ. ತಿಪ್ಪೇಸ್ವಾಮಿ, ಪೊಲೀಸ್ ನಿರೀಕ್ಷಕ ಕಿರಣ್ ಕುಮಾರ್,  ಪ್ರಶಾಂತ್ ಮತ್ತು ನೂರಾರು ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

Share

Leave a comment

Leave a Reply

Your email address will not be published. Required fields are marked *