ದಾವಣಗೆರೆ: ಜಿಲ್ಲೆಯಲ್ಲಿ ಆಡಿ ಹಾಗೂ ಶ್ರಾವಣ ಮಾಸಗಳಲ್ಲಿ ನಿರೀಕ್ಷಿತ ಮಳೆಯಾಗದ ಕಾರಣ ತೀವ್ರ ಅಭಾವ ಎದುರಾಗಿದ್ದು, ಭದ್ರಾ ಬಲದಂಡೆ ನಾಲೆಯ ವ್ಯಾಪ್ತಿಯ ಮಲೆಬೆನ್ನೂರು, ದಾವಣಗೆರೆ ಶಾಖಾ ನಾಲೆ ಸೇರಿದಂತೆ ವಿವಿಧ ವಿತರಣಾ ನಾಲೆಗಳಿಗೆ ತಕ್ಷಣವೇ 10 ದಿನಗಳ ಕಾಲ ನೀರು ಹರಿಸುವಂತೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರು ಭಾರಿ ಮತ್ತು ಮಧ್ಯಮ ನೀರಾವರಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ದಿನಾಂಕ 11-09-2026 ರಂದು ರೈತ ಮುಖಂಡರು ಮತ್ತು ಸಾರ್ವಜನಿಕರು ಶಾಂತಿಸಾಗರದಲ್ಲಿ ಪ್ರತಿಭಟನೆ ನಡೆಸಿ, ಮಲೆಬೆನ್ನೂರು, ಸೂಳೆಕೆರೆ ಬಸವನಾಲೆ, ಸಿದ್ದನಾಲೆ ಹಾಗೂ ದಾವಣಗೆರೆ ಶಾಖಾ ನಾಲೆಯ ವಲಯಗಳಿಗೆ ನೀರು ಹರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದರು. ಅಲ್ಲದೆ, ಸೆಪ್ಟೆಂಬರ್ 12 ರಂದು ಕೊಮಾರನಹಳ್ಳಿಯಲ್ಲಿ ಆಯೋಜಿಸಲಾಗಿದ್ದ ಪ್ರಜಾಸೇವಾ ಇಲಾಖೆಯ ಕಾರ್ಯಕ್ರಮವನ್ನು ಮಲೆಬೆನ್ನೂರು ಭಾಗದ ರೈತರು ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ದಾವಣಗೆರೆ ಜಿಲ್ಲೆಯ ಚನ್ನಗಿರಿ ಹಾಗೂ ಹರಿಹರ ತಾಲೂಕುಗಳಲ್ಲಿ ತೀವ್ರ ಮಳೆ ಕೊರತೆಯಿಂದ ಬರ ಪರಿಸ್ಥಿತಿ ಉಂಟಾಗಿದೆ. ಬೆಳೆದು ನಿಂತ ತೋಟದ ಬೆಳೆಗಳ ರಕ್ಷಣೆಗೆ, ಕುಡಿಯುವ ನೀರು ಹಾಗೂ ಜನ-ಜಾನುವಾರುಗಳಿಗೆ ತಕ್ಷಣ ನೀರಿನ ಅಗತ್ಯವಿದೆ ಎಂದು ಇಂಜಿನಿಯರ್‌ಗಳು ಅಭಿಪ್ರಾಯಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಮುಂದಿನ 10 ದಿನಗಳ ಕಾಲ ನಾಲೆಗಳಿಗೆ ನೀರು ಹರಿಸುವಂತೆ ಸಚಿವರು ಮನವಿ ಮಾಡಿದ್ದಾರೆ.





Leave a comment