ಮುಂಬೈ: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪುತ್ರಿ ಟಿಫನಿ ಟ್ರಂಪ್ ಅವರು ಮುಂಬೈನಲ್ಲಿರುವ ಉದ್ಯಮಿ ಮುಖೇಶ್ ಅಂಬಾನಿ ಅವರ ನಿವಾಸ ‘ಆಂಟಿಲಿಯಾ’ದಲ್ಲಿ ನಡೆದ ಅದ್ಧೂರಿ ಗಣೇಶೋತ್ಸವ ಸಂಭ್ರಮದಲ್ಲಿ ಭಾಗವಹಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ತಮ್ಮ ತಾಯಿ ಮಾರ್ಲಾ ಮೇಪಲ್ಸ್, ಪತಿ ಮೈಕೆಲ್ ಬೌಲೋಸ್ ಮತ್ತು ಮಗ ಅಲೆಕ್ಸಾಂಡರ್ ಅವರೊಂದಿಗೆ ಭಾರತಕ್ಕೆ ಭೇಟಿ ನೀಡಿರುವ ಟಿಫನಿ, ಸಾಂಪ್ರದಾಯಿಕ ಭಾರತೀಯ ಉಡುಗೆಯಲ್ಲಿ ಭಾರತೀಯರ ಮನ ಗೆದ್ದಿದ್ದಾರೆ.
ಮನೀಶ್ ಮಲ್ಹೋತ್ರಾ ವಿನ್ಯಾಸದ ಲೆಹೆಂಗಾದಲ್ಲಿ ದೇಶಿ ಲುಕ್:
ಈ ವಿಶೇಷ ಆಚರಣೆಗಾಗಿ ಟಿಫನಿ ಟ್ರಂಪ್ ಅವರು ಪ್ರಸಿದ್ಧ ಭಾರತೀಯ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ ಪಿಸ್ತಾ ಗ್ರೀನ್ (ಪ್ಯಾಸ್ಟೆಲ್ ಲೈಮ್ ಗ್ರೀನ್) ಬಣ್ಣದ ಲೆಹೆಂಗಾ ಧರಿಸಿದ್ದರು. ಇದರ ಜೊತೆಗೆ ಬ್ಲಶ್-ಕೋರಲ್ ಪಿಂಕ್ ಬಣ್ಣದ ದುಪ್ಪಟ್ಟಾ ಮತ್ತು ಮುತ್ತು ಹಾಗೂ ಸ್ಪಟಿಕದ ಕೆತ್ತನೆ ಇರುವ ಚೋಲಿ (ಬ್ಲೌಸ್) ಅವರ ಅಂದವನ್ನು ಹೆಚ್ಚಿಸಿತ್ತು.
ಅಲ್ಲದೆ, ಪೋಲ್ಕಿ ಶೈಲಿಯ ಹಾರ, ಚಾಂಡಲಿಯರ್ ಇಯರ್ರಿಂಗ್ಸ್ ಮತ್ತು ಮಾಂಗ್ ಟಿಕ್ಕಾ ಧರಿಸಿ ಸಂಪೂರ್ಣ ದೇಶಿ ಶೈಲಿಯಲ್ಲಿ ಕಂಗೊಳಿಸಿದರು. ಈ ಸುಂದರ ಕ್ಷಣಗಳ ಚಿತ್ರಗಳನ್ನು ಟಿಫನಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದು, “India, with love” ಎಂದು ಬರೆದುಕೊಂಡಿದ್ದಾರೆ.
ಈ ಆಚರಣೆಯಲ್ಲಿ ಬಾಲಿವುಡ್ನ ಪ್ರಮುಖ ತಾರೆಯರಾದ ಕತ್ರಿನಾ ಕೈಫ್, ವಿಕ್ಕಿ ಕೌಶಲ್, ಕರೀನಾ ಕಪೂರ್, ಸೈಫ್ ಅಲಿ ಖಾನ್, ರಣವೀರ್ ಸಿಂಗ್, ಸಂಜಯ್ ದತ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.





Leave a comment