SUDDIKSHANA KANNADA NEWS/ DAVANAGERE/ DATE:06-11-2024
ಹೈದರಾಬಾದ್: ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಅತ್ಯಾಚಾರ ಮತ್ತು ಕೊಲೆಯ ಅಪರಾಧಗಳ ತ್ವರಿತ ತನಿಖೆಗೆ ಒತ್ತಾಯಿಸಿದ ಕೆಲವೇ ಗಂಟೆಗಳ ನಂತರ, ರಾಜ್ಯದಲ್ಲಿ ಮತ್ತೊಂದು ಲೈಂಗಿಕ ದೌರ್ಜನ್ಯದ ಘಟನೆ ತಿರುಪತಿಯಲ್ಲಿ ನಡೆದಿದೆ.
ನವೆಂಬರ್ 5, ಸೋಮವಾರ, ಯರ್ರಾವರಿಪಾಲೆಂನಲ್ಲಿ 10 ನೇ ತರಗತಿಯ ದಲಿತ ವಿದ್ಯಾರ್ಥಿನಿ ಮಧ್ಯಾಹ್ನ ಶಾಲೆಯಿಂದ ಮನೆಗೆ ಹೋಗುತ್ತಿದ್ದಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಹಲ್ಲೆ ನಡೆಸಿದ್ದಾರೆ. ಮಾತ್ರವಲ್ಲ, ಲೈಂಗಿಕ ದೌರ್ಜನ್ಯ ಎಸಗಿದ್ದಾರೆ.
ಬಾಲಕಿಯನ್ನು ಪ್ರಸ್ತುತ ತಿರುಪತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿದ್ಯಾರ್ಥಿನಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ದುಷ್ಕರ್ಮಿಗಳು ಬಾಲಕಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿದ್ದಾರೆ ಮತ್ತು ಆಕೆಯ ಮೇಲೆ ಹಲ್ಲೆ ಮಾಡುವ ಮೊದಲು ಮದ್ಯ ಸೇವಿಸುವಂತೆ ಒತ್ತಾಯಿಸಿದ್ದಾರೆ. ತಿರುಪತಿ ಪೊಲೀಸ್ ವರಿಷ್ಠಾಧಿಕಾರಿ ಸುಬ್ಬರಾಯುಡು ಪ್ರಕರಣದ ಕುರಿತು ಮಾಹಿತಿ ನೀಡಿದ್ದು, ಬಾಲಕಿ ಅಪ್ರಾಪ್ತ ವಯಸ್ಸಿನ ಕಾರಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
“ಕಳೆದ ರಾತ್ರಿ, ನಾವು ಅವಳನ್ನು ವೈದ್ಯಕೀಯ ಪರೀಕ್ಷೆಗಳಿಗಾಗಿ ತಿರುಪತಿ ಹೆರಿಗೆ ಆಸ್ಪತ್ರೆಗೆ ಸ್ಥಳಾಂತರಿಸಿದ್ದೇವೆ” ಎಂದು ಅವರು ದೃಢಪಡಿಸಿದರು. ಆಕೆಯ ಸಾವಿನ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಅಪಪ್ರಚಾರದ ಕುರಿತು ಮಾತನಾಡಿದ ಅವರು, “ಹುಡುಗಿಯನ್ನು ಕೊಲೆ ಮಾಡಲಾಗಿದೆ ಎಂದು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಕೆಲವು ರಾಜಕೀಯ ಪಕ್ಷಗಳು ಕೊಲೆ ನಡೆದಿದೆ ಎಂದು ತಪ್ಪು ಮಾಹಿತಿ ಹರಡುತ್ತಿವೆ. ಇದು ಸರಿಯಲ್ಲ ಎಂದಿದ್ದಾರೆ.
ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರು ಸೋಮವಾರ ಪಿತಾಪುರಂನಲ್ಲಿ ನಡೆದ ರ್ಯಾಲಿಯಲ್ಲಿ, ರಾಜ್ಯದಲ್ಲಿ ಮಹಿಳೆಯರು ಮತ್ತು ಮಕ್ಕಳ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು. ಹಿಂದಿನ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಆಡಳಿತವು ಮಹಿಳೆಯರು ಮತ್ತು ಮಕ್ಕಳ ಮೇಲಿನ ಅಪರಾಧಗಳ ಆತಂಕಕಾರಿ ಹೆಚ್ಚಳಕ್ಕೆ ಕಾರಣ ಎಂದು ಅವರು ಆರೋಪಿಸಿದ್ದರು.