SUDDIKSHANA KANNADA NEWS/ DAVANAGERE/ DATE:13-08-2024
ದಾವಣಗೆರೆ: ಬೋರ್ವೆಲ್ ಕೊರೆಸಿದ ಒಬ್ಬ ರೈತನಿಗೆ ಹಳೆಯ ಟಿಸಿ, ಇನ್ನೊಬ್ಬ ರೈತನಿಗೆ ಕೊಡಬೇಕಾದ ಟಿಸಿ ಬೇರೆಯವರಿಗೆ ಮಾರಾಟ ಮಾಡಿ, ಸೌಲಭ್ಯ ದುರ್ಬಳಕೆ ಮಾಡಿಕೊಂಡಿರುವ ಪ್ರಕರಣವನ್ನು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕೆಡಿಪಿ ಸಭೆಯಲ್ಲಿ ಬಹಿರಂಗ ಪಡಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ 2024-25ನೇ ಸಾಲಿನ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಆದಿ ಜಾಂಬವ ಅಭಿವೃದ್ಧಿ ನಿಗಮದ ಅಡಿಯಲ್ಲಿ ಅರ್ಹ ರೈತರಿಗೆ ಬೋರ್ವೆಲ್ ಕೊರೆಸಲಾಗಿದೆ. ಕ್ಷೇತ್ರದ ವ್ಯಾಪ್ತಿಯ ಕಂದಗಲ್ಲು ಗ್ರಾಮದ ಗಂಗಾಧರಪ್ಪ ಎಂಬುವರಿಗೆ ಪಂಪ್ಸೇಟ್, ಪೈಪ್ ಸೇರಿ ಎಲ್ಲಾ ಪರಿಕರ ವಿತರಿಸಿ, ಹೊಸ ಟಿಸಿ ಬದಲು ಹಳೆಯ ಟಿಸಿ ಕೊಟ್ಟಿದ್ದಾರೆ. ಅದೇ ರೀತಿ ಹುಲಿಕಟ್ಟೆ ಚನ್ನಬಸಪ್ಪ ಎಂಬುವರಿಗೆ ಬೋರ್ವೆಲ್ ಕೊರೆಸಿ ಮೂರು ವರ್ಷದ ಬಳಿಕ ಪಂಪ್ಸೆಟ್, ಪೈಪ್ಗಳನ್ನು ವಿತರಿಸಿ, ಇವರಿಗೆ ಕೊಡಬೇಕಾದ ಟಿಸಿ ಬೇರೆಯವರಿಗೆ ಕೊಟ್ಟು, ಇವತ್ತಿಗೂ ರೈತನನ್ನು ಕಚೇರಿಗೆ ಅಲೆಯುವಂತೆ ಮಾಡಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ರೈತರಿಗೆ ವಂಚಿಸಿ ಸೌಲಭ್ಯ ದುರ್ಬಳಕೆ ಮಾಡಿಕೊಂಡಿರುವುದನ್ನು ಪ್ರಶ್ನಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ತಾಪಂ ಆಡಳಿತಾಧಿಕಾರಿ ಕೃಷ್ಣನಾಯ್ಕ್, ಇಒ ರಾಮಭೋವಿ, ಕೂಡಲೇ ಈ ಬಗ್ಗೆ ತನಿಖೆ ಮಾಡಿ ವಾರದೊಳಗೆ ವಸ್ತುನಿಷ್ಠ ವರದಿ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ ಸೌಲಭ್ಯ ದುರ್ಬಳಕೆ ಮಾಡಿಕೊಂಡ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದರು.
ಕೋಟ್ಯಂತರ ರೂಪಾಯಿ ಅವ್ಯವಹಾರ?:
ಸಾಮಾಜಿಕ ಅರಣ್ಯ ವಲಯದ ವ್ಯಾಪ್ತಿಯಲ್ಲಿ ನರೇಗಾ ಯೋಜನೆಯಡಿ ಕೈಗೊಂಡ ನೆಡುತೋಪು, ರಸ್ತೆ ಬದಿ, ಇಂಗು ಗುಂಡಿ ನಿರ್ಮಾಣದಲ್ಲಿ ಕೋಟ್ಯಂತರ ರೂಪಾಯಿ ವೆಚ್ಚ ಮಾಡಲಾಗಿದೆ. ಆದರೆ ಅಧಿಕಾರಿಗಳು ಮಾಡಿರುವ ಕಾಮಗಾರಿಗಳು
ಕಾಣುತ್ತಿಲ್ಲ. ಇದರಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ. ಈ ಬಗ್ಗೆ ಖದ್ದು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ತಾಪಂ ಆಡಳಿತಾಧಿಕಾರಿ, ಇಒಗೆ ಶಾಸಕ ಬಸವಂತಪ್ಪ ಸೂಚನೆ ನೀಡಿದರು.
ಅಧಿಕಾರಿಗಳು ಕೊಡುವ ಪುಸ್ತಕದಲ್ಲಿ ಕೆಲಸಗಳು ಅಕ್ಷರ ರೂಪದಲ್ಲಿ ಕಾಣುತ್ತಿವೆ. ಆದರೆ ಖುದ್ದು ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರೆ, ನೀವು ಕೊಟ್ಟಿರುವ ಪುಸ್ತಕದಲ್ಲಿ ಕಾಣುವ ಕೆಲಸಗಳು ವಾಸ್ತವದಲ್ಲಿ ಕಾಣುತ್ತಿಲ್ಲ. ಕಳೆದ ಸಭೆಯಲ್ಲಿ
ಮೂರು ವರ್ಷದ ಪ್ರಗತಿಯ ವರದಿ ಕೇಳಲಾಗಿತ್ತು. ಈವರೆಗೂ ಕೊಟ್ಟಿಲ್ಲ, ಸಭೆಗೆ ಅನುಪಾಲನಾ ವರದಿನೂ ತಂದಿಲ್ಲ. ಕೇಳಿದರೆ ಊಡಾಫೆ ಉತ್ತರ ಕೊಡ್ತೀರಿ. ಇಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯ್ಯದೊಂದಿಗೆ ಸರ್ಕಾರದ ಹಣ ಪೋಲು ಮಾಡಲಾಗುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ನರೇಗಾ ಯೋಜನೆಯಡಿ ಚೆಕ್ ಡ್ಯಾಂ, ಬದು ನಿರ್ಮಾಣ ಸೇರಿದಂತೆ ವಿವಿಧ ಸೌಲಭ್ಯಗಳನ್ನು ರೈತರಿಗೆ ಸಮರ್ಪಕವಾಗಿ ತಲುಪಿಸಬೇಕು. ರೈತರಿಂದ ಯಾವುದೇ ದೂರುಗಳು ಬರದಂತೆ ನೋಡಿಕೊಳ್ಳಬೇಕು ಎಂದು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಅಧಿಕಾರಿ, ಈ ಬಾರಿ ಉತ್ತಮ ಮುಂಗಾರು ಆರಂಭದಿಂದ ಬಿತ್ತನೆಗೆ ಯಾವುದೇ ರೀತಿಯ ತೊಂದರೆ ಆಗಿಲ್ಲ. ಅಲ್ಲದೇ ಭದ್ರಾ ಜಲಾಶಯ ಭರ್ತಿಯಿಂದ ಭತ್ತ ಬೆಳೆಯುವುದಕ್ಕೂ ತೊಂದರೆ ಆಗುತ್ತಿಲ್ಲ. ಈಗಾಗಲೇ ಭತ್ತ ನಾಟಿ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಬೀಜ, ಗೊಬ್ಬರ ತೊಂದರೆ ಆಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ತಿಳಿಸಿದರು.
ಕೃಷಿಭಾಗ್ಯ ಯೋಜನೆಯಡಿ ಆನಗೋಡು 38, ಮಾಯಕೊಂಡ 26 ಸೇರಿದಂತೆ ಒಟ್ಟು 84 ರೈತರಿಗೆ ಕೃಷಿಹೊಂಡದ ಸೌಲಭ್ಯ ಕಲ್ಪಿಸಲಾಗಿದೆ. ಪ್ರಸಕ್ತ ಕೃಷಿ ಯಂತ್ರೋಪಕರಣಗಳನ್ನು ವಿತರಿಸಲು ಕ್ರಮ ತೆಗೆದುಕೊಳ್ಳುತ್ತಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಕೃಷಿಭಾಗ್ಯ ಯೋಜನೆ ಮುಖ್ಯಮಂತ್ರಿಗಳ ಕನಸಿ ಕೂಸು. ಹೀಗಾಗಿ ಎಲ್ಲಾ ರೈತರು ಈ ಸೌಲಭ್ಯ ಪಡೆದುಕೊಂಡು ಅಂತರ್ಜಲ ಮಟ್ಟದ ಕೊರತೆ ನೀಗಿಸಿಕೊಳ್ಳಲು ಅನುಕೂಲ ಕಲ್ಪಿಸಬೇಕೆಂದು ಶಾಸಕ ಬಸವಂತಪ್ಪ ಹೇಳಿದರು.
ತೋಟಗಾರಿಕೆ ಇಲಾಖೆ ಅಧಿಕಾರಿ ಮಾತನಾಡಿ, ರೈತರು ತೋಟಗಳಲ್ಲಿ ಕೃಷಿಹೊಂಡ ಯಾವ ರೀತಿ ನಿರ್ಮಿಸಿಕೊಳ್ಳಬೇಕೆಂಬ ಕುರಿತು ತರಬೇತಿ ನೀಡಲಾಗುತ್ತಿದೆ. ದೊಡ್ಡ ಮತ್ತು ಸಣ್ಣ ಟ್ರ್ಯಾಕ್ಟರ್ಗಳಿಗೆ ಸಾಕಷ್ಟು ಅರ್ಜಿಗಳು ಬಂದಿವೆ. ಎಸ್ಸಿ-ಎಸ್ಟಿ ಮತ್ತು ಸಾಮಾನ್ಯರಿಗೆ ಒಟ್ಟು 17 ಕೊಡಲು ಅವಶ್ಯಕತೆ ಇದೆ. ಆದರೆ 60೬೦ ರಿಂದ 70 ಅರ್ಜಿಗಳು ಬಂದಿದ್ದು, ಬೇಡಿಕೆ ಹೆಚ್ಚಾಗಿದೆ ಎಂದರು. ಹೆಚ್ಚುವರಿಯಾಗಿ ಕೊಡುವುದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುವುದಾಗಿ ಶಾಸಕರು ತಿಳಿಸಿದರು.