Home ಕ್ರೈಂ ನ್ಯೂಸ್ ಅಪ್ರಾಪ್ತರ ಮೇಲಿನ ಹಲ್ಲೆ ವಿಡಿಯೋ ವೈರಲ್, 120 ಸೋಶಿಯಲ್ ಮೀಡಿಯಾ ಪ್ರೊಫೈಲ್‌ಗಳ ವಿರುದ್ಧ FIR ದಾಖಲು, ವಿಡಿಯೋ ಹಂಚಿಕೊಂಡವರ ಮೇಲೂ ಪೋಕ್ಸೋ, ಬಿಎನ್‌ಎಸ್ ಅಡಿ ಕೇಸ್!
ಕ್ರೈಂ ನ್ಯೂಸ್ಬೆಂಗಳೂರು

ಅಪ್ರಾಪ್ತರ ಮೇಲಿನ ಹಲ್ಲೆ ವಿಡಿಯೋ ವೈರಲ್, 120 ಸೋಶಿಯಲ್ ಮೀಡಿಯಾ ಪ್ರೊಫೈಲ್‌ಗಳ ವಿರುದ್ಧ FIR ದಾಖಲು, ವಿಡಿಯೋ ಹಂಚಿಕೊಂಡವರ ಮೇಲೂ ಪೋಕ್ಸೋ, ಬಿಎನ್‌ಎಸ್ ಅಡಿ ಕೇಸ್!

Share
ಸೋಶಿಯಲ್ ಮೀಡಿಯಾ
Share

ಜಮುಯಿ (ಬಿಹಾರ): ಬಿಹಾರದ ಜಮುಯಿ ಜಿಲ್ಲೆಯಲ್ಲಿ 10ನೇ ತರಗತಿಯ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳ ಮೇಲೆ ನಡೆದ ಲೈಂಗಿಕ ಕಿರುಕುಳ ಮತ್ತು ಹಲ್ಲೆಯ ಭೀಕರ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು, ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸಿದ ಆರೋಪದ ಮೇಲೆ ಸುಮಾರು 120 ಸೋಶಿಯಲ್ ಮೀಡಿಯಾ ಪ್ರೊಫೈಲ್‌ಗಳ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಘಟನೆಯ ವಿವರ:

ಸೆಪ್ಟೆಂಬರ್ 19ರ ಶನಿವಾರ ಸಂಜೆ ಜಮುಯಿಯಲ್ಲಿ 10ನೇ ತರಗತಿಯ ಬಾಲಕ ಮತ್ತು ಬಾಲಕಿ ಕೋಚಿಂಗ್ ಮುಗಿಸಿ ಸ್ಕೂಟರ್‌ನಲ್ಲಿ ತೆರಳುತ್ತಿದ್ದಾಗ, ಸ್ಥಳೀಯ ಪುಂಡರ ಗುಂಪೊಂದು ಅವರನ್ನು ತಡೆದು ನಿಲ್ಲಿಸಿದೆ. ಬಾಲಕನ ಮೇಲೆ ಹಲ್ಲೆ ನಡೆಸಿ, ಬಾಲಕಿಗೆ ಲೈಂಗಿಕ ಕಿರುಕುಳ ನೀಡಲಾಗಿದೆ. ಈ ಇಡೀ ದೌರ್ಜನ್ಯವನ್ನು ಆರೋಪಿಗಳು ವಿಡಿಯೋ ಮಾಡಿಕೊಂಡಿದ್ದರು.

ಸಂತ್ರಸ್ತರು ಭಯದಿಂದ ತಕ್ಷಣವೇ ದೂರು ನೀಡಿರಲಿಲ್ಲ. ಆದರೆ, ವಿಡಿಯೋ ವೈರಲ್ ಆದ ನಂತರ ಜಮುಯಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಬಿಶ್ವಜಿತ್ ದಯಾಳ್ ಅವರ ಸೂಚನೆಯಂತೆ, ವಿಡಿಯೋದಲ್ಲಿದ್ದ ವಾಹನದ ನೋಂದಣಿ ಸಂಖ್ಯೆಯನ್ನು ಆಧರಿಸಿ ಪೊಲೀಸರು ಸಂತ್ರಸ್ತರನ್ನು ಪತ್ತೆ ಹಚ್ಚಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ.

ಪೋಲಿಸ್ ಕ್ರಮ ಮತ್ತು ಬಂಧನ:

ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೆ ಸುಮಾರು 7 ಜನ ಆರೋಪಿಗಳನ್ನು ಗುರುತಿಸಿದ್ದು, ಅವರಲ್ಲಿ ಮೂವರನ್ನು ಈಗಾಗಲೇ ಬಂಧಿಸಿದ್ದಾರೆ. ಉಳಿದ ಆರೋಪಿಗಳ ಬಂಧನಕ್ಕಾಗಿ ಉಪ ವಿಭಾಗೀಯ ಪೊಲೀಸ್ ಅಧಿಕಾರಿ ದೀಪ್ತಿ ಮೊನಾಲಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ ರಚಿಸಲಾಗಿದೆ. ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಮತ್ತು ಪೋಕ್ಸೋ  ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

120 ಖಾತೆಗಳ ವಿರುದ್ಧ ಪ್ರಕರಣ:

ವಿಡಿಯೋದಲ್ಲಿ ಸಂತ್ರಸ್ತ ಅಪ್ರಾಪ್ತ ಬಾಲಕಿಯ ಮುಖ ಮತ್ತು ಗುರುತು ಸ್ಪಷ್ಟವಾಗಿ ಕಾಣಿಸುತ್ತಿದ್ದು, ಇದನ್ನು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅಪ್ರಾಪ್ತ ಸಂತ್ರಸ್ತರ ಗುರುತು ಬಹಿರಂಗಪಡಿಸುವುದು ಪೋಕ್ಸೋ (POCSO) ಕಾಯ್ದೆ, ಮಾಹಿತಿ ತಂತ್ರಜ್ಞಾನ ಕಾಯ್ದೆ ಹಾಗೂ ಬಾಲನ್ಯಾಯ ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ಹೀಗಾಗಿ, ವಿಡಿಯೋ ವೈರಲ್ ಮಾಡಿದ 120ಕ್ಕೂ ಹೆಚ್ಚು ಖಾತೆಗಳ ವಿರುದ್ಧ ಸೈಬರ್ ಪೊಲೀಸರು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡು, ವಿಡಿಯೋ ತಡೆಹಿಡಿಯುವ (Takedown) ಪ್ರಕ್ರಿಯೆ ಆರಂಭಿಸಿದ್ದಾರೆ.

ರಾಜಕೀಯ ಆಕ್ರೋಶ:

ಈ ಘಟನೆ ದೇಶಾದ್ಯಂತ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ರಾಜ್ಯ ಸರ್ಕಾರ ಹಾಗೂ ಭದ್ರತಾ ವ್ಯವಸ್ಥೆಯ ವಿರುದ್ಧ ಕಿಡಿಕಾರಿದ್ದಾರೆ. ರಾಷ್ಟ್ರೀಯ ಹಾಗೂ ರಾಜ್ಯ ಮಹಿಳಾ ಆಯೋಗಗಳು ಸಹ ಪ್ರಕರಣದ ವರದಿ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿವೆ.

Share

Leave a comment

Leave a Reply

Your email address will not be published. Required fields are marked *

Related Articles