SUDDIKSHANA KANNADA NEWS/ DAVANAGERE/ DATE:20-12-2024
ದಾವಣಗೆರೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬಗ್ಗೆ ಆಕ್ಷೇಪಾರ್ಹ ಪದ ಬಳಕೆಯಿಂದ ಪೊಲೀಸರ ಬಂಧನಕ್ಕೆ ಒಳಗಾಗಿದ್ದ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ. ಟಿ. ರವಿಗೆ ಹೈಕೋರ್ಟ್ ಆದೇಶ ಪ್ರತಿಯನ್ನು ದಾವಣಗೆರೆಯಲ್ಲಿ ನೀಡಲಾಯಿತು.
ಬೆಳಗಾವಿಯಿಂದ ಬೆಂಗಳೂರಿಗೆ ಸಿ. ಟಿ. ರವಿ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲು ಕರೆದುಕೊಂಡು ಹೋಗಲಾಗುತಿತ್ತು. ದಾವಣಗೆರೆ, ಚಿತ್ರದುರ್ಗದ ಮೂಲಕ ಹಾದು ಹೋಗುತ್ತಿದ್ದ ಸಿ. ಟಿ. ರವಿ ಅವರಿಗೆ ನಗರಕ್ಕೆ ಕಾಲಿಡುತ್ತಿದ್ದಂತೆ ಹೈಕೋರ್ಟ್ ಆದೇಶ ಪ್ರತಿ ಸಿಕ್ಕಿತು. ಆಗ ಪೊಲೀಸರು ಸಿ. ಟಿ. ರವಿ ಅವರನ್ನು ಬಿಡುಗಡೆ ಮಾಡಿದರು.
ವಿಜಯೋತ್ಸವ:
ಇನ್ನು ಸಿ. ಟಿ. ರವಿ ಅವರನ್ನು ಬಿಡುಗಡೆ ಮಾಡುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ವೇಳೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ, ವಿಪಕ್ಷ ನಾಯಕ ಆರ್. ಅಶೋಕ್, ಮಾಜಿ ಸಚಿವ ಎಸ್. ಎ. ರವೀಂದ್ರನಾಥ್, ಎಸ್. ವಿ. ರಾಮಚಂದ್ರಪ್ಪ, ಲೋಕಿಕೆರೆ ನಾಗರಾಜ್, ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ, ಶಾಸಕ ಬಿ. ಪಿ. ಹರೀಶ್, ವೀರೇಶ್ ಹನಗವಾಡಿ, ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಸೇರಿದಂತೆ ಬಿಜೆಪಿ ಮುಖಂಡರು ಹಾಜರಿದ್ದರು. ಪತ್ರಿಕಾಗೋಷ್ಠಿಯಲ್ಲಿಯೂ ಕಿಕ್ಕಿರಿದು ಜನರು ತುಂಬಿದ್ದರು.
ಒಳಗಡೆ ಬಿಡದ ಪೊಲೀಸರು:
ಇನ್ನು ಸಿ. ಟಿ. ರವಿ, ವಿಜಯೇಂದ್ರ, ಆರ್. ಅಶೋಕ್ ಸೇರಿದಂತೆ ಬಿಜೆಪಿ ಮುಖಂಡರು ನಗರದ ಸರ್ಕ್ಯೂಟ್ ಹೌಸ್ ಗೆ ಬರುತ್ತಿದ್ದಂತೆ ಕಾರ್ಯಕರ್ತರು, ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದರು. ಸರ್ಕ್ಯೂಟ್ ಹೌಸ್ ನ ಒಳಗಡೆ ನಾಯಕರು ಹಾಗೂ ಸಿ. ಟಿ. ರವಿ ಅವರು ಹೋದರು. ಆ ಬಳಿಕ ಪೊಲೀಸರು ಬಿಜೆಪಿ ಮುಖಂಡರು, ಕಾರ್ಯಕರ್ತರನ್ನು ಒಳಗಡೆ ಬಿಡಲು ನಿರಾಕರಿಸಿದರು. ಈ ವೇಳೆ ತಳ್ಳಾಟ, ನೂಕಾಟವೂ ನಡೆಯಿತು. ಪ್ರಕರಣ ಇನ್ನೂ ಮುಗಿದಿಲ್ಲ. ಜಾಮೀನು ಪ್ರತಿ ಸಿಕ್ಕಿದೆ ಅಷ್ಟೇ. ದಯವಿಟ್ಟು ಸಹಕರಿಸಿ ಎಂದು ಪೊಲೀಸರು ಮನವಿ ಮಾಡಿದರು.