SUDDIKSHANA KANNADA NEWS/ DAVANAGERE/ DATE:16-02-2024
ಬೆಂಗಳೂರು: ಹೊರ ರಾಜ್ಯಗಳಲ್ಲಿನ ಪವಿತ್ರ ಪುಣ್ಯಕ್ಷೇತ್ರಗಳಾದ ತಿರುಮಲ, ಶ್ರೀಶೈಲ, ವಾರಣಾಸಿ ಮತ್ತು ಗುಡ್ಡಾಪುರಕ್ಕೆ ಭೇಟಿ ನೀಡುವ ಕರ್ನಾಟಕದ ಭಕ್ತಾಧಿಗಳ ಅನುಕೂಲಕ್ಕಾಗಿ ಸುಸಜ್ಜಿತ ವಸತಿ ಸಂಕೀರ್ಣಗಳನ್ನು ನಿರ್ಮಿಸಲಾಗುತ್ತಿದೆ. ತಿರುಮಲದಲ್ಲಿ 200 ಕೋಟಿ ರೂ.ಗಳ ಕಾಮಗಾರಿ ಅಂತಿಮ ಹಂತದಲ್ಲಿದೆ. ಶ್ರೀಶೈಲದಲ್ಲಿ 85 ಕೋಟಿ ರೂ. ವೆಚ್ಚದಲ್ಲಿ ಮತ್ತು ಗುಡ್ಡಾಪುರದಲ್ಲಿ 11 ಕೋಟಿ ರೂ. ವೆಚ್ಚದ ಕಾಮಗಾರಿಗಳು ಪ್ರಗತಿಯಲ್ಲಿವೆ. ಪ್ರಸಕ್ತ ಸಾಲಿನಲ್ಲಿ ವಾರಣಾಸಿಯಲ್ಲಿ 5 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.
ಮಂತ್ರಾಲಯಕ್ಕೆ ಸಂಪರ್ಕ ಕಲ್ಪಿಸಲು ರಾಯಚೂರಿನ ಚಿಕ್ಕಮಂಚಾಲಿ ಗ್ರಾಮದ ಬಳಿ ಬ್ರಿಡ್ಜ್-ಕಂ-ಬ್ಯಾರೇಜ್ ಅನ್ನು ಲೋಕೋಪಯೋಗಿ ಇಲಾಖೆ ವತಿಯಿಂದ 158 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶ್ರೀ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯ ಹಾಗೂ ಕೊಪ್ಪಳ ಜಿಲ್ಲೆಯ ಹುಲಿಗೆಮ್ಮ ದೇವಾಲಯದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಾಧಿಕಾರಗಳನ್ನು ರಚಿಸಲಾಗುವುದು. ಯಾವುದೇ
ಆದಾಯವಿಲ್ಲದ 34,165 ʻಸಿʼ ವರ್ಗದ ಐತಿಹಾಸಿಕ ದೇವಾಲಯಗಳಲ್ಲಿನ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಸಮಾಜದ ಗಣ್ಯರು ಮತ್ತು ಸಂಬಂಧಪಟ್ಟ ಇಲಾಖೆಗಳ ಪ್ರತಿನಿಧಿಗಳನ್ನೊಳಗೊಂಡ Vision Group ರಚಿಸಲಾಗುವುದು ಎಂದರು.
ಇನಾಂ/ಇನಾಂಯೇತರ ಜಮೀನು ಕಳೆದುಕೊಂಡಂತಹ 29,523 ʻಸಿʼ ವರ್ಗದ ದೇವಾಲಯಗಳ ಅರ್ಚಕರುಗಳಿಗೆ ಇನ್ನು ಮುಂದೆ ತಸ್ತಿಕ್ ಮೊತ್ತವನ್ನು ಅರ್ಚಕರುಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುವುದು ಎಂದರು.
ಸಾರಿಗೆ
ಶಕ್ತಿ ಯೋಜನೆಯು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳೊಳಗಾಗಿ ಜಾರಿಗೊಳಿಸಿದ ಮೊದಲ ಗ್ಯಾರಂಟಿ ಯೋಜನೆಯಾಗಿದೆ. ಈ ಯೋಜನೆಯಡಿ ಮಹಿಳೆಯರು, ವಿದ್ಯಾರ್ಥಿನಿಯರು ಹಾಗೂ ಲಿಂಗತ್ವ
ಅಲ್ಪಸಂಖ್ಯಾತರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ನೀಡಲಾಗುತ್ತಿದೆ. ಶಕ್ತಿ ಯೋಜನೆಯಡಿ ಈವರೆಗೆ 155 ಕೋಟಿಗೂ ಹೆಚ್ಚು ಮಹಿಳಾ ಪ್ರಯಾಣಿಕರು ಉಚಿತ ಪ್ರಯಾಣದ ಸೌಲಭ್ಯ ಪಡೆದಿದ್ದು, 3000 ಕೋಟಿ ರೂ. ಒದಗಿಸಲಾಗಿದೆ.
ಶಕ್ತಿ ಯೋಜನೆಯ ಕುರಿತು ನಡೆಸಿದ ಸಮೀಕ್ಷೆಯಿಂದ ಯೋಜನೆಗೆ ಸಕಾರಾತ್ಮಕ ಸ್ಪಂದನೆ ದೊರಕಿರುವುದು ಸ್ಪಷ್ಟವಾಗುತ್ತದೆ.
ಈ ಯೋಜನೆಯ ಮೂಲಕ ಮಹಿಳಾ ಸಬಲೀಕರಣ ಹಾಗೂ ಸ್ವಾತಂತ್ರ್ಯಕ್ಕೆ ಹೆಚ್ಚಿನ ಒತ್ತು ನೀಡಿದ್ದೇವೆ. ಹೆಣ್ಣು ಮಕ್ಕಳ ಶಿಕ್ಷಣ, ಉತ್ತಮ ಉದ್ಯೋಗಾವಕಾಶ ಪಡೆಯಲು, ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚು ಹೆಚ್ಚಾಗಿ ಭಾಗವಹಿಸಲು ಹಾಗೂ ಪ್ರವಾಸ ಕೈಗೊಳ್ಳಲು ಮಹಿಳೆಯರು ಈ ಅವಕಾಶದ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ಯೋಜನೆಗೆ ದೊರೆತ ಅಭೂತಪೂರ್ವ ಸ್ಪಂದನೆ ಇದರ ಯಶಸ್ವಿ ಅನುಷ್ಠಾನಕ್ಕೆ ನಿದರ್ಶನವಾಗಿದೆ.
ಉಡುಪಿ, ಚಿಕ್ಕಬಳ್ಳಾಪುರ, ನೆಲಮಂಗಲ, ಮಡಿಕೇರಿ, ಮಧುಗಿರಿ ಮತ್ತು ಹುಣಸೂರಿನಲ್ಲಿ ಅಂದಾಜು 36 ಕೋಟಿ ರೂ.ಗಳ ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥಗಳು ಹಾಗೂ ದೇವನಹಳ್ಳಿ ಮತ್ತು ತುಮಕೂರಿನಲ್ಲಿ ಒಟ್ಟು 10 ಕೋಟಿ ರೂ.ಗಳ ವೆಚ್ಚದಲ್ಲಿ ಸೀಜಿಂಗ್ ಯಾರ್ಡ್ಗಳನ್ನು ನಿರ್ಮಿಸಲಾಗುವುದು.
ಅರ್ಹತಾ ಪತ್ರ ನವೀಕರಣಕ್ಕೆ ಬರುವಂತಹ ಎಲ್ಲಾ ಸಾರಿಗೆ ವಾಹನಗಳಿಗೆ ಅರ್ಹತಾ ಪರೀಕ್ಷೆ ಕೈಗೊಳ್ಳಲು 32 ಸ್ಥಳಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಸ್ವಯಂಚಾಲಿತ ಪರೀಕ್ಷಾ ಕೇಂದ್ರಗಳನ್ನು ಅಭಿವೃದ್ಧಿಪಡಿಸಲಾಗುವುದು.
ಸಾರಿಗೆ ಇಲಾಖೆಯಲ್ಲಿ ನೋಂದಣಿಯಾಗಿರುವ ಎಲ್ಲಾ ವಾಹನಗಳ ದಾಖಲಾತಿಗಳ ಡಿಜಿಟಲೀಕರಣಕ್ಕಾಗಿ ಒಂದು ಯೋಜನೆಯನ್ನು ಜಾರಿಗೊಳಿಸಲಾಗುವುದು. 2024-25ನೇ ಸಾಲಿನಲ್ಲಿ ಪ್ರಾಯೋಗಿಕವಾಗಿ ಬೆಂಗಳೂರು ಕೇಂದ್ರ, ಬೆಳಗಾವಿ, ಮಂಗಳೂರು ಹಾಗೂ ಭಾಲ್ಕಿಯ ಕಛೇರಿಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು ಎಂದರು.