SUDDIKSHANA KANNADA NEWS/ DAVANAGERE/ DATE:05-02-2024
ದಾವಣಗೆರೆ: ಇಂಧನ ಇಲಾಖೆ ರದ್ದುಗೊಳಿಸಿರುವ ಅಕ್ರಮ-ಸಕ್ರಮ ಯೋಜನೆಯನ್ನು ಮುಂದುವರಿಸುವುದು, ಬಹುಕೋಟಿ ವೆಚ್ಚದ ಸಾಸ್ವೆಹಳ್ಳಿ ಏತನೀರಾವರಿ ಯೋಜನೆ ಕಾಮಗಾರಿ ಶೀಘ್ರವೇ ಪೂರ್ಣಗೊಳಿಸುವುದು ಸೇರಿದಂತೆ 7 ಪ್ರಮುಖ ಬೇಡಿಕೆಗಳನ್ನು ಈಡೇರಿಸಬೇಕೆಂದು ರಾಜ್ಯ ರೈತ ಸಂಘ ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.
ನಗರಕ್ಕೆ ಆಗಮಿಸಿದ್ದ ಸಿಎಂ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು, ಈ ಹಿಂದೆ ನಿಮ್ಮದೇ ಸರ್ಕಾರ ಇದ್ದಾಗ ಆರಂಭಗೊಂಡಿದ್ದ ಸಾಸ್ವೆಹಳ್ಳಿ ಏತ ನೀರಾವರಿ ಯೋಜನೆ ಕಾಮಗಾರಿ ಇದುವರೆಗೂ
ಪೂರ್ಣಗೊಂಡಿಲ್ಲ. ಇದೀಗ ಮತ್ತೆ ನೀವೇ ಮುಖ್ಯ ಮಂತ್ರಿಯಾಗಿದ್ದು ಶೀಘ್ರವೇ ಕಾಮಗಾರಿ ಪೂರ್ಣಗೊಳಸಿ ಬರ ಪರಿಸ್ಥಿತಿಯಲ್ಲಿರುವ ರೈತರಿಗೆ ನೀರನ್ನು ಕೊಡಿ ಎಂದು ಮನವಿ ಮಾಡಿದರು.
ಬರುವ ಬಜೆಟ್‌ನಲ್ಲಿ ಜಗಳೂರು ತಾಲೂಕಿನಲ್ಲಿ ಒಂದು 220 ಕೆವಿ ರೀಸಿವಿಂಗ್ ಸ್ಟೇಷನ್ ಘೋಷಣೆ ಮಾಡಬೇಕು, ಹಿಂದುಳಿದ ಜಗಳೂರು ತಾಲೂಕಿನಲ್ಲಿ 3 ವಿದ್ಯುತ್ ಸಬ್ ಸ್ಟೇಷನ್ ಆರಂಭಕ್ಕೆ ಕ್ರಮ ಕೈಗೊಳ್ಳಬೇಕು, ದಾವಣಗೆರೆ ತಾಲೂಕಿನಲ್ಲಿ ಮಂಜೂರಾತಿ (ಎಂಯುಎಸ್‌ಎಸ್) ಅನ್ನು ಕೆಪಿಟಿಸಿಎಲ್ ಇಲಾಖೆಯವರು ಆರಂಭಿಸಿಲ್ಲ. ಈ ಹಿನ್ನೆಲೆಯಲ್ಲಿ ಇದನ್ನು ತಕ್ಷಣವೇ ಮುಕ್ತಾಯಗೊಳಿಸಿ ಕಾರ್ಯಗತ ಗೊಳಿಸಬೇಕೆಂದು ಮನವಿ ಮಾಡಲಾಗಿದೆ.
ರಾಜ್ಯದಲ್ಲಿ ಎನ್‌ಬಿಎಫ್‌ಸಿ ಬ್ಯಾಂಕುಗಳು ರೈತರ ಮೇಲೆ ದೌರ್ಜನ್ಯದಿಂದ ಸಾಲ ವಸೂಲಾತಿಯನ್ನು ಮಾಡುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕು ಹಾಗೂ ರೈತರ ಸಾಲದ ವಿಚಾರವಾಗಿ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಕಮಿಟಿ ರಚನೆ ಮಾಡಿ ರೈತರ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ನಿಲ್ಲಿಸಬೇಕು ಎಂದು ಆಗ್ರಹಿಸಲಾಗಿದೆ.
ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿ ಹಕ್ಕು ಪತ್ರ ಪಡೆದಂತಹ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಕೊರೆಸಿ ಕೊಡಬೇಕು ಹಾಗೂ ಕೃಷಿ ಸಹಕಾರ ಸಂಘಗಳಲ್ಲಿ ಸಾಲ ನೀಡಲು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸೇನೆಯ ರಾಜ್ಯಾಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್, ಕುರ್ಕಿ ಹನುಮಂತಪ್ಪ, ಪೂಜಾರ್ ಅಂಜಿನಪ್ಪ, ಚಿರಂಜೀವಿ, ಪಾಮೇನಹಳ್ಳಿ ಗೌಡರ ಶೇಖರಪ್ಪ, ರಾಜನಹಟ್ಟಿ ರಾಜು, ಕೋಗಲೂರು ಕುಮಾರ್,
ಚಂದ್ರಪ್ಪ, ಎಸ್.ಕೆ.ಅಣ್ಣಪ್ಪ, ಕಬ್ಬದಹಳ್ಳಿ ಗಂಗಾಧರಪ್ಪ ಇತರರು ಉಪಸ್ಥಿತರಿದ್ದರು.