SUDDIKSHANA KANNADA NEWS/ DAVANAGERE/ DATE:17-03-2024
ದಾವಣಗೆರೆ: ಲೋಕಸಭೆ ಚುನಾವಣೆಗೆ ಏಳು ಕ್ಷೇತ್ರಗಳಲ್ಲಿ ಕರ್ನಾಟಕದಲ್ಲಿ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ. ಮಾರ್ಚ್ 20ಕ್ಕೆ ಕಾಂಗ್ರೆಸ್ ಮೂರನೇ ಪಟ್ಟಿ ಪ್ರಕಟಗೊಳ್ಳಲಿದೆ. ಈ ಪಟ್ಟಿಯಲ್ಲಿ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಯಾರು ಅಭ್ಯರ್ಥಿಯಾಗಲಿದ್ದಾರೆ ಎಂಬುದು ಗೊತ್ತಾಗಲಿದೆ.
ಡಿಸಿಎಂ ಡಿ. ಕೆ. ಶಿವಕುಮಾರ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮಾರ್ಚ್ 19ಕ್ಕೆ ಸಿಇಸಿ ಸಭೆ ನಡೆಯಲಿದ್ದು, ಅಂದು ಉಳಿದ ಎಲ್ಲಾ ಕ್ಷೇತ್ರಗಳಿಗೆ ಟಿಕೆಟ್ ಘೋಷಣೆಯಾಗುವ ಸಾಧ್ಯತೆ ಇದೆ.
ಲೋಕಸಭಾ ಚುನಾವಣೆಗೆ ಈಗಾಗಲೇ ಬಿಜೆಪಿ ಮೊದಲ ಪಟ್ಟಿ ಪ್ರಕಟಿಸಿದೆ. ಭಿನ್ನಮತದ ಬೇಗುದಿಗೆ ಸಿಲುಕಿ ನಲುಗುತ್ತಿದೆ. ಶಿವಮೊಗ್ಗ, ದಾವಣಗೆರೆ, ಮೈಸೂರು, ಬೀದರ್, ಬೆಳಗಾವಿ, ಉತ್ತರ ಕನ್ನಡ ಸೇರಿದಂತೆ ಕೆಲವು ಜಿಲ್ಲೆಗಳಲ್ಲಿ ಕಮಲ ಪಾಳೆಯದಲ್ಲಿ ಭಿನ್ನಮತದ ಜ್ವಾಲೆ ಧಗಧಗಿಸುತ್ತಿದೆ.
ಇನ್ನು ಕಾಂಗ್ರೆಸ್ ಪಕ್ಷವು ಅಳೆದು ತೂಗಿ ಗೆಲ್ಲುವ ಕುದುರೆಗಳಿಗೆ ಮಣೆ ಹಾಕಲಾಗಿದೆ. ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್ ಪತ್ನಿ ಡಾ. ಪ್ರಭಾ ಮಲ್ಲಿಕಾರ್ಜುನ್ ಹಾಗೂ ಕಾಂಗ್ರೆಸ್ ಯುವ ನಾಯಕ ವಿನಯ್ ಕುಮಾರ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಯಾರಿಗೆ ಟಿಕೆಟ್ ಸಿಗಲಿದೆ ಎಂಬುದು ಗೊತ್ತಾಗಲಿದೆ.
ಮಾರ್ಚ್ 19ಕ್ಕೆ ಸಿಇಸಿ ಸಭೆ ನಡೆಯಲಿದ್ದು, ಅಂದು ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಣದೀಪ್ ಸುರ್ಜೇವಾಲಾ, ಕೆ. ಸಿ.
ವೇಣುಗೋಪಾಲ್, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ. ಕೆ. ಶಿವಕುಮಾರ್ ಸೇರಿದಂತೆ ಘಟಾನುಘಟಿಗಳು ಸಿಇಸಿ ಸಭೆಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ದಾವಣಗೆರೆಯ ಟಿಕೆಟ್ ಯಾರಿಗೆ ಎಂಬ ಸಸ್ಪೆನ್ಸ್ ಗೆ ಉತ್ತರ ಸಿಗಲಿದೆ.