SUDDIKSHANA KANNADA NEWS/ DAVANAGERE/ DATE:11-11-2024
ಬೆಂಗಳೂರು: ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಹಾಗೂ ಭಂಡತನಕ್ಕೆ ಹೆಸರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯರ ಸುಳ್ಳುಗಳು ಬಯಲಾಗುತ್ತಿರುವುದು ಇದು ಮೊದಲೇನಲ್ಲ, ಈ ಹಿಂದೆ ಮುಡಾ ಹಗರಣ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮದ ಭ್ರಷ್ಟಾಚಾರ ಪ್ರಕರಣಗಳಲ್ಲಿ ಸುಳ್ಳು ಹೇಳಿ ನ್ಯಾಯಾಲಯದಿಂದಲೇ ಚಾಟಿಯೇಟು ತಿಂದಿದ್ದನ್ನು ಕರ್ನಾಟಕದ ಜನ ಮರೆತಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಸಂಡೂರಿನಲ್ಲಿ ಮಾಧ್ಯಮಗಳ ಮುಂದೆ ರಾಜ್ಯದಲ್ಲಿ ದಿನದ 24 ಗಂಟೆಗಳೂ ಗಣಿಗಾರಿಕೆಗೆ ಅನುಮತಿ ನೀಡುವ ಪ್ರಸ್ತಾಪವೇ ಇಲ್ಲ ಎಂದು ಹೇಳಿದ್ದಾರೆ. ಆದರೆ ಮುಖ್ಯ ಕಾರ್ಯದರ್ಶಿಗಳು ಮುಖ್ಯಮಂತ್ರಿಗಳ ಸೂಚನೆಯ ಮೇರೆಗೆ ಆದೇಶ ಹೊರಡಿಸಿದ್ದಾರೆ. ಇದನ್ನು ಗಮನಿಸಿದರೆ ‘ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದರೆ ನೋಡಿಕೊಂಡು ಸ್ವಾಭಿಮಾನಿ ಕನ್ನಡಿಗರು ಸುಮ್ಮನೇ ಕೂರುವರು’ ಎಂದು ನಾಡಿನ ಜನರ ಕಿವಿಗೆ ಹೂ ಮುಡಿಸಲು ಹೊರಟಿರುವುದು ಮೂರ್ಖತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಕ್ಫ್ ಆಸ್ತಿ ವಿಚಾರದಲ್ಲೂ ಸಚಿವ ಜಮೀರ್ ಅಹಮದ್ ಅವರನ್ನು ಮುಂದಿಟ್ಟುಕೊಂಡು ರೈತರ ಭೂಮಿ ಕಬಳಿಕೆಗೆ ಯತ್ನಿಸಿದಂತೆ, 24 ಗಂಟೆ ಗಣಿಗಾರಿಕೆಗೆ ಅವಕಾಶ ನೀಡಿ ರಾಜ್ಯವನ್ನು ಲೂಟಿ ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರ ರೂಪಿಸುತ್ತಿರುವ ಸಂಚು ಬಯಲಾಗಿದೆ ಎಂದು ದೂರಿದ್ದಾರೆ.