SUDDIKSHANA KANNADA NEWS/ DAVANAGERE/ DATE:19-01-2025
ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದ್ದು ದರೋಡೆಕೋರರು ಬೀದಿಗಿಳಿದು ಹಾಡು ಹಗಲೇ ಬ್ಯಾಂಕು ಲೂಟಿಯಲ್ಲಿ ತೊಡಗಿದ್ದಾರೆ. ರಾಜಾರೋಷವಾಗಿ ಪ್ರಯಾಣಿಕರಂತೆ ಬ್ಯಾಗುಗಳಲ್ಲಿ ಹಣ ಒಡವೆ ತುಂಬಿಕೊಂಡು ಪರಾರಿಯಾಗುತ್ತಿದ್ದಾರೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಕಿಡಿಕಾರಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಸಾಲದ ಶೂಲಕ್ಕೆ ಸಿಲುಕಿರುವ ಅಮಾಯಕರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಸರ್ಕಾರದ ರಕ್ಷಣೆ ಸಿಗುತ್ತದೆ ಎಂದು ಜನರು ನಂಬಿಕೊಳ್ಳಲು ಹೇಗೆ ಸಾಧ್ಯ? ಎಂದು ಎಕ್ಸ್ ಪೋಸ್ಟ್ ನಲ್ಲಿ ಪ್ರಶ್ನಿಸಿದ್ದಾರೆ.
ಇಂತವರಿಗೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತುವ ಧೈರ್ಯ ಮೊದಲೇ ಇರುವುದಿಲ್ಲ, ಇನ್ನು ಪೊಲೀಸ್ ರಕ್ಷಣೆಗೆ ದೂರು ನೀಡಿದರೂ ಅದನ್ನು ಗಂಭೀರವಾಗಿ ಸ್ವೀಕರಿಸುವ ಮನೋಭಾವ ಪ್ರದರ್ಶಿಸಲಾಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. “ಜನರಿಗೆ ಮಾನ-ಪ್ರಾಣದ ರಕ್ಷಣೆಯ ಭಾಗ್ಯ ಕಲ್ಪಿಸಲಾಗದಿದ್ದರೆ ಸರ್ಕಾರ ಯಾವ ಭಾಗ್ಯ ಕೊಟ್ಟರೂ ಅದು ನಿರರ್ಥಕ ಎಂಬ ಅರಿವು ಸರ್ಕಾರಕ್ಕಿರಬೇಕು” ಎಂದು ಕಿಡಿಕಾರಿದ್ದಾರೆ.