ಬೆಂಗಳೂರು: ನಟ ದರ್ಶನ್ ಮತ್ತು ಸಹಚರರಿಂದ ರೇಣುಕಾಸ್ವಾಮಿಯ ಹತ್ಯೆಯಾಗಿ ಒಂದು ತಿಂಗಳು ಕಳೆದಿದೆ. ಹತ್ಯೆಗೆ ಕಾರಣ ಎನ್ನಲಾದ ರೇಣುಕಾಸ್ವಾಮಿ ಕಳುಹಿಸಿದ್ದ ಸಂದೇಶಗಳಿಗಾಗಿ ಪೊಲೀಸರ ಹುಡುಕಾಟ ಮುಂದುವರೆದಿದೆ. ಹತ್ಯೆಗೆ ಕಾರಣವಾಯಿತು ಎನ್ನಲಾಗಿರುವ ರೇಣುಕಾಸ್ವಾಮಿ ಕಳಿಸಿದ್ದ ಅಶ್ಲೀಲ ಮೆಸೇಜ್, ಫೋಟೋಗಳನ್ನೊಳಗೊಂಡ ದತ್ತಾಂಶಗಳನ್ನ ಕಲೆಹಾಕುವ ಜವಾಬ್ದಾರಿಯನ್ನ ಇನ್ಸ್ಪೆಕ್ಟರ್ ಮಹೇಶ್ ಅವರಿಗೆ ವಹಿಸಲಾಗಿದೆ. ಹತ್ಯೆಯಾದ ರೇಣುಕಾಸ್ವಾಮಿ ಬಳಸುತ್ತಿದ್ದ ಎರಡು ನಂಬರ್ಗಳ ಪೈಕಿ ಒಂದು ನಂಬರ್ನ್ನ ಪತ್ನಿಯ ಹೆಸರಿನಲ್ಲಿ ಖರೀದಿಸಿದ್ದ. ಸರ್ವಿಸ್ ಪ್ರೊವೈಡಿಂಗ್ ಕಂಪನಿಗಳಿಂದ ಸದ್ಯ ಎರಡೂ ನಂಬರ್ನ ನಕಲಿ ಸಿಮ್ ಕಾರ್ಡ್ಗಳನ್ನು ಪಡೆದಿರುವ ಪೊಲೀಸರು, ರೇಣುಕಾಸ್ವಾಮಿಯ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಇಂಚಿಂಚೂ ಮಾಹಿತಿಯನ್ನು ಜಾಲಾಡುತ್ತಿದ್ದಾರೆ. ಸಿಇಎನ್ ಠಾಣೆಯ ತಜ್ಞರ ಸಹಾಯದಿಂದ ಸಂಪೂರ್ಣ ದತ್ತಾಂಶ ಕಲೆಹಾಕುವ ಜವಾಬ್ದಾರಿಯನ್ನ ಇನ್ಸ್ಪೆಕ್ಟರ್ ಮಹೇಶ್ ಅವರಿಗೆ ವಹಿಸಲಾಗಿದೆ. ಶೀಘ್ರವೇ ದತ್ತಾಂಶ ರಿಟ್ರೀವ್ ಮಾಡಲಿರುವ ಪೊಲೀಸರು ಚಾರ್ಜ್ಶೀಟ್ನಲ್ಲಿ ಆ ಮಾಹಿತಿಯನ್ನೂ ಸೇರಿಸಲಿದ್ದಾರೆ ಎಂದು ತಿಳಿದು ಬಂದಿದೆ.