SUDDIKSHANA KANNADA NEWS/ DAVANAGERE/ DATE:12-10-2024
ದಾವಣಗೆರೆ: ಕಳೆದ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ಮಾಯಕೊಂಡ ಕ್ಷೇತ್ರದ ಕೆಲವು ಗ್ರಾಮಗಳಲ್ಲಿ ಮನೆಗಳು, ಬೆಳೆ ಹಾನಿಯಾಗಿದೆ.
ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜಮ್ಮಾಪುರ ಗ್ರಾಮದಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಧಾರಾಕಾರ ಮಳೆ ಮತ್ತು ಶುಕ್ರವಾರ ರಾತ್ರಿ ಸುರಿದ ಮಳೆಯಿಂದ ಜಯಪ್ಪ ಎಂಬುವರ ಮನೆ ಸಂಪೂರ್ಣವಾಗಿ
ಕುಸಿದು ಬಿದ್ದಿದೆ. ಮನೆ ಕುಸಿಯುವ ಶಬ್ದ ಕೇಳುತ್ತಿದ್ದಂತೆ ಮನೆಯಲ್ಲಿದ್ದ ನಾಲ್ಕು ಜನ ಹೊರಗಡೆ ಓಡಿ ಬಂದಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ, ಪರಿಶೀಲನೆ ನಡೆಸಿ ಸಂತ್ರಸ್ಥ ಮನೆ ಮಾಲೀಕ ಜಯಪ್ಪ ಅವರಿಗೆ ವೈಯಕ್ತಿಕ ಧನಸಹಾಯ ಮಾಡಿದರು. ಸ್ಥಳದಲ್ಲಿಯೇ ಗ್ರಾಮ ಪಂಚಾಯತಿ
ಅಭಿವೃದ್ಧಿ ಅಧಿಕಾರಿಯನ್ನು ದೂರವಾಣಿ ಮೂಲಕ ಸಂಪರ್ಕಿಸಿ ಮನೆ ನಿರ್ಮಿಸಿ ಕೊಡುವಂತೆ ಸೂಚನೆ ನೀಡಿದರು. ಅಲ್ಲದೇ ತಹಸೀಲ್ದಾರ್ ಅವರಿಗೂ ಕೂಡ ಮನೆ ಬಿದ್ದ ಜಯಪ್ಪ ಕುಟುಂಬಕ್ಕೆ ಸರ್ಕಾರದಿಂದ ಪರಿಹಾರ ಕೊಡಿಸುವಂತೆ ಹೇಳಿದರು.
ಬಳಿಕ ಕಂದನಕೋವಿ ಸೇರಿದಂತೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ಮಳೆಯಿಂದ ಹಾನಿಯಾದ ಬೆಳೆಗಳನ್ನು ವೀಕ್ಷಿಸಿದರು. ಈ ಬಾರಿ ಹಿಂಗಾರು ಮಳೆಗಳು ಕೂಡ ಅತೀ ಹೆಚ್ಚು ಬೀಳುವ ಸಾಧ್ಯತೆ ಇದೆ ಎಂದು
ಹವಾಮಾನ ಇಲಾಖೆ ಸೂಚನೆ ನೀಡಿರುವುದರಿಂದ ಸಂಬಂಧಪಟ್ಟ ಅಧಿಕಾರಿಗಳು ಸನ್ನದ್ಧರಾಗಿದ್ದು, ರೈತರಿಗೆ ಉಂಟಾಗುವ ಹಾನಿಗೆ ಸಮರ್ಪಕವಾಗಿ ಪರಿಹಾರ ಒದಗಿಸಲು ಮುಂದಾಗಬೇಕು ಎಂದು ಸೂಚನೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರು, ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಹಾಜರಿದ್ದರು.