Home ದಾವಣಗೆರೆ ನನ್ನ ಅಧಿಕಾರ ಯಾರ ವಿರುದ್ಧಯೂ ಬಳಸಲ್ಲ, ಹೆಚ್ಚು ಗೆಳೆಯರ ಗಳಿಸುವ ಆಸೆ ನನ್ನದು: ಸಿಎಂ ಡಿ ಕೆ ಶಿವಕುಮಾರ್!
ದಾವಣಗೆರೆನವದೆಹಲಿಬೆಂಗಳೂರು

ನನ್ನ ಅಧಿಕಾರ ಯಾರ ವಿರುದ್ಧಯೂ ಬಳಸಲ್ಲ, ಹೆಚ್ಚು ಗೆಳೆಯರ ಗಳಿಸುವ ಆಸೆ ನನ್ನದು: ಸಿಎಂ ಡಿ ಕೆ ಶಿವಕುಮಾರ್!

Share
ಡಿ ಕೆ ಶಿವಕುಮಾರ್
Share

ಬೆಂಗಳೂರ: “ನಾವು ಇಷ್ಟೂ ಜನ ಯಾರ ಮೇಲೂ ದ್ವೇಷ ಮಾಡದೇ, ರಾಜ್ಯದ ಹಿತಕ್ಕಾಗಿ ಕೆಲಸ ಮಾಡುತ್ತೇವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ, ಪತ್ರಿಕಾರಂಗ ಒಂದಾಗಿ ಕೆಲಸ ಮಾಡಬೇಕು. ನನ್ನ ಅಧಿಕಾರ ಯಾರ ವಿರುದ್ಧವೂ ಬಳಸಲ್ಲ ಎಂದು ಸಿಎಂ ಡಿ ಕೆ ಶಿವಕುಮಾರ್ ಹೇಳಿದ್ದಾರೆ.

ವಿಧಾನಸಭೆಯಲ್ಲಿ ಸಚಿವ ಸಂಪುಟ ಸಹೋದ್ಯೋಗಿಗಳನ್ನು ಸದನಕ್ಕೆ ಪರಿಚಯಿಸಿ ಶಿವಕುಮಾರ್ ಅವರು ಶುಕ್ರವಾರ ಮಾತನಾಡಿದರು.

ಕೇಂದ್ರ ಸರ್ಕಾರದ ಸಚಿವರನ್ನು ನಾವು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಲು ಬಯಸುತ್ತೇವೆ. ನೀರಾವರಿ ವಿಚಾರದಲ್ಲಿ ಪ್ರಹ್ಲಾದ್ ಜೋಷಿ ಅವರು ನಮಗೆ ಕೊಟ್ಟ ಸಹಕಾರವನ್ನು ನಾವು ಅಭಿನಂದಿಸುತ್ತೇವೆ. ಇನ್ನು ಕುಮಾರಸ್ವಾಮಿ ಅವರು ಕೇಂದ್ರ ಸರ್ಕಾರದಲ್ಲಿ ಅತಿ ದೊಡ್ಡ ಖಾತೆಯನ್ನು ಹೊಂದಿದ್ದಾರೆ. ಅವರು ರಾಜ್ಯದ ಜನರಿಗೆ 25 ಸಾವಿರ ಉದ್ಯೋಗ ಕಲ್ಪಿಸಬಹುದು. ಅವರು ಎಲ್ಲಿ ಜಾಗ ಕೇಳುತ್ತಾರೋ ಅಲ್ಲಿ ಕೊಡೋಣ. ಎಷ್ಟೇ ಆದರೂ ನಮ್ಮ ನಾಡಿನ ಜನರಿಗೆ ಉದ್ಯೋಗ ಕಲ್ಪಿಸುವುದು ಮುಖ್ಯ ಅಲ್ಲವೇ? ಅವರು ನನ್ನ ಬಗ್ಗೆ ಎಷ್ಟೇ ಬೇಸರ ಹೊಂದಿದ್ದರೂ ಅವರ ಜೊತೆಗೆ ಕೆಲಸ ಮಾಡಲು ನಾನು ಸಿದ್ಧ” ಎಂದು ತಿಳಿಸಿದರು.

ಹೆಚ್ಚು ಗೆಳೆಯರನ್ನು ಗಳಿಸುವ ಆಸೆ

“ಅಧಿಕಾರದಲ್ಲಿ ನಾವು ಎರಡನ್ನು ಸಂಪಾದಿಸಬಹುದು. ಒಂದು ಅತಿ ಹೆಚ್ಚು ಮಿತ್ರರು ಅಥವಾ ಅತಿ ಹೆಚ್ಚು ಶತ್ರುಗಳು. ನಾನು ಹೆಚ್ಚು ಸ್ನೇಹಿತರನ್ನು ಗಳಿಸಲು ಬಯಸುತ್ತೇನೆ. ಎಲ್ಲರಿಗೂ ನೆರವು ನೀಡಲು ಬಯಸುತ್ತೇನೆ. ಎಲ್ಲರನ್ನು ಒಟ್ಟಾಗಿ ತೆಗೆದುಕೊಂಡು ಹೋಗುವೆ. ನನ್ನ 40 ವರ್ಷಗಳ ರಾಜಕೀಯದಲ್ಲಿ ಏಳು ಬೀಳುಗಳನ್ನು ಕಂಡಿದ್ದು, ನನ್ನದೇ ಆದ ಅನುಭವದಲ್ಲಿ ಹೊಸ ಆಲೋಚನೆಗಳನ್ನು ಹೊಂದಿದ್ದೇನೆ. ನನ್ನ ಈ ಸ್ಥಾನ ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಅನುಕೂಲವಾಗುವಂತಾಗಬೇಕು. ಸಿದ್ದರಾಮಯ್ಯ ಅವರು 8 ವರ್ಷಗಳ ಕಾಲ ಕೊಟ್ಟ ಭಾಗ್ಯಗಳನ್ನು ನಾವು ಮುಂದುವರಿಸಿಕೊಂಡು ಹೋಗುತ್ತೇನೆ” ಎಂದು ಹೇಳಿದರು.

ಸಭಾಧ್ಯಕ್ಷರಾಗಿ ಆಯ್ಕೆಯಾದ ಜಿ ಎಸ್ ಪಾಟೀಲ್ ಅವರಿಗೆ ಅಭಿನಂದನೆಗಳು

ವಿಧಾನಸಭೆ ಸಭಾಧ್ಯಕ್ಷರಾಗಿ ಜಿ ಎಸ್ ಪಾಟೀಲ್ ಅವರ ಆಯ್ಕೆ ಬಳಿಕ ಮಾತನಾಡಿದ ಮುಖ್ಯಮಂತ್ರಿಗಳು, “ಮೊದಲಿಗೆ ಟಿ ಬಿ ಜಯಚಂದ್ರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು 1978ರಿಂದ ಶಾಸಕರಾಗಿದ್ದು, ಹಂಗಾಮಿ ಸಭಾಧ್ಯಕ್ಷರಾಗಿ ನಿಮ್ಮ ಆಯ್ಕೆಗೆ ನೆರವಾಗಿದ್ದಾರೆ. ಇನ್ನು ಖಾದರ್ ಅವರು ಮೂರು ವರ್ಷಗಳ ಅವಧಿಯಲ್ಲಿ ವಿಧಾನಸಭೆಗೆ ಹೊಸ ರೂಪ ನೀಡಲು ಪ್ರಯತ್ನಿಸಿದ್ದಾರೆ. ಮಧ್ಯರಾತ್ರಿವರೆಗೂ ಸದನ ನಡೆಸಿ ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಿಗೆ ನಮ್ಮೆಲ್ಲರ ಪರವಾಗಿ ಅಭಿನಂದಿಸುವೆ” ಎಂದು ಹೇಳಿದರು.

“ಸಭಾಧ್ಯಕ್ಷರೇ ನೀವು ಬಹಳ ವರ್ಷಗಳಿಂದ ನಮ್ಮ ಜೊತೆ ರಾಜಕಾರಣದಲ್ಲಿದ್ದೀರಿ. ನಿಮ್ಮ ಕುಟುಂಬವನ್ನು ನಾನು ಬಲ್ಲೆ, ನಿಮ್ಮದು ಬಹುದೊಡ್ಡ ಕೃಷಿ ಕುಟುಂಬ. ನಿಮ್ಮ ಸಹೋದರ ಆರ್ ಎಸ್ ಪಾಟೀಲ್ ಅವರು ಅಧ್ಯಕ್ಷರಾಗಿ, ಲೋಕಸಭೆ ಸದಸ್ಯರಾಗಿ ಕೆಲಸ ಮಾಡಿದ್ದಾರೆ. ಮತ್ತೊಬ್ಬ ಸಹೋದರರು ಸಹಕಾರ ಕ್ಷೇತ್ರದಲ್ಲಿದ್ದಾರೆ.

ಇನ್ನೊಬ್ಬ ಸಹೋದರರು ಆರೋಗ್ಯ ಇಲಾಖೆಯಲ್ಲಿ ಸೇವೆ ಮಾಡಿದ್ದಾರೆ. ಬಿ.ಎಸ್ ಪಾಟೀಲ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ನಿಮ್ಮ ಕಿರಿಯ ಸಹೋದರ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿದ್ದಾರೆ. ನಿಮ್ಮ ಇಡೀ ಕುಟುಂಬ ಹೀಗೆ ಸಮಾಜಕ್ಕೆ ಸೇವೆ ಸಲ್ಲಿಸಿದೆ. ನಮ್ಮ ಪಕ್ಷ ನಿಮ್ಮನ್ನು ಸ್ಪೀಕರ್ ಸ್ಥಾನದಲ್ಲಿ ಕೂರಿಸಲಿಲ್ಲ, ಕೇವಲ ಅಭ್ಯರ್ಥಿಯನ್ನಾಗಿ ಘೋಷಿಸಿತು. ಆ ಸ್ಥಾನಕ್ಕೆ ಅಗೌರವ ನೀಡುವುದು ನಮ್ಮ ಚಿಂತನೆಯಲ್ಲ. ವಿರೋಧ ಪಕ್ಷದವರು ಅವರದೇ ಆದ ರೀತಿಯಲ್ಲಿ ತಗಾದೆ ಹುಡುಕಿದ್ದಾರೆ. ವಿರೋಧ ಪಕ್ಷದವರು ನಿಮ್ಮ ಆಯ್ಕೆ ವೇಳೆ ಬರದೇ ಇರುವುದು ಅವರ ರಾಜಕೀಯ ನಿಲುವು. ಆದರೂ ಈ ಮೂಲಕ ನಿಮ್ಮ ಆಯ್ಕೆಗೆ ಸಹಕರಿಸಿದ್ದಾರೆ. ಅವರ ಪರವಾಗಿಯೂ ನಿಮಗೆ ಅಭಿನಂದನೆ ಸಲ್ಲಿಸುವೆ” ಎಂದು ತಿಳಿಸಿದರು.

“1989ರಿಂದ 8 ಬಾರಿ ನೀವು ಸ್ಪರ್ಧೆ ಮಾಡಿದ್ದೀರಿ. ಉಗ್ರಾಣ ನಿಗಮದ ಅಧ್ಯಕ್ಷರಾಗಿ, ಇಂಧನ ಅಭಿವೃದ್ಧಿ, ಖನಿಜ ನಿಗಮದಲ್ಲಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದೀರಿ. ನಿಮ್ಮ ಹಾಗೂ ಹೆಚ್ ಕೆ ಪಾಟೀಲ್ ಅವರ ಕ್ಷೇತ್ರದ ಭೇಟಿಯ ಸಂದರ್ಭದಲ್ಲಿ, ಅಲ್ಲಿದ್ದ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಗಮನಿಸಿದೆ. ನಿಜಕ್ಕೂ ಮಾದರಿಯಾಗಿದೆ. ನಾನು ನಮ್ಮ ಕಾರ್ಯಕರ್ತರನ್ನು ಕಳುಹಿಸಿ ವೀಕ್ಷಣೆ ಮಾಡಿಸಿ, ನಮ್ಮ ಕ್ಷೇತ್ರಗಳಲ್ಲೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲಾಯಿತು. ಪಾಟೀಲ್ ಅವರು ರಾಜೀವ್ ಗಾಂಧಿ ಅವರ ಹೆಸರಿನಲ್ಲಿ ಶಿಕ್ಷಣ ಸಂಸ್ಥೆ ಹೊಂದಿದ್ದಾರೆ. ವೀರಶೈವ ಸಮಾಜದ ವಿಚಾರದಲ್ಲಿ ನಮ್ಮಲ್ಲಿ ಕೆಲವು ಭಿನ್ನಾಭಿಪ್ರಾಯ ಬಂದಾಗ, ನಾನು ಅವರ ಕ್ಷೇತ್ರಕ್ಕೆ ಹೋಗಿ ರಂಭಾಪುರಿ ಶ್ರೀಗಳ ಬಳಿ ಕ್ಷಮೆ ಕೋರಿದ್ದೇನೆ. ಈ ವಿಚಾರಕ್ಕೆ ಸಾಕಷ್ಟು ಟೀಕೆಗಳನ್ನು ಎದುರಿಸಿದೆ. ಪುಟ್ಟರಾಜ ಗವಾಯಿ ಅವರ ಅಂಧರ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರ ಕುಟುಂಬ ಶಿಸ್ತಿನ ಬದುಕಿನ ಕುಟುಂಬ. ನಿಮಗೆ ಭಗವಂತ ಒಳ್ಳೆಯದು ಮಾಡಲಿ. ನೀವು ಆ ಸ್ಥಾನದಲ್ಲಿ ಕುಳಿತು ನ್ಯಾಯವನ್ನು ನೀಡಿ. ನೀವು ಕೇವಲ ನಮ್ಮನ್ನು ಮಾತ್ರವಲ್ಲ, ವಿರೋಧ ಪಕ್ಷದವರ ಧ್ವನಿ ಆಲಿಸಿ. ನೀವು ಎತ್ತರದ ಸ್ಥಾನದಲ್ಲಿದ್ದು ಇನ್ನಷ್ಟು ಎತ್ತರಕ್ಕೆ ಬೆಳೆಯಿರಿ ಎಂದು 224 ಶಾಸಕರ ಪರವಾಗಿ ಶುಭ ಹಾರೈಸುತ್ತೇನೆ” ಎಂದು ತಿಳಿಸಿದರು.

Share

Leave a comment

Leave a Reply

Your email address will not be published. Required fields are marked *

Related Articles