SUDDIKSHANA KANNADA NEWS/ DAVANAGERE/ DATE:24-02-2024
ದಾವಣಗೆರೆ: ಭದ್ರಾ ಬಲದಂಡೆ ಕಾಲುವೆ ವ್ಯಾಪ್ತಿಯ ಕೊನೆ ಭಾಗದ ರೈತರಿಗೆ ನೀರು ಕೊಡುವ ಉದ್ದೇಶದಿಂದ ಅನಧಿಕೃತವಾಗಿ ಅಳವಡಿಸಲಾಗಿದ್ದ ಪಂಪ್ ಸೆಟ್ ಗಳ ತೆರವು ಕಾರ್ಯಾಚರಣೆ ಮುಂದುವರಿಸಲಾಗಿದೆ.
ಜಿಲ್ಲಾಧಿಕಾರಿ ಡಾ. ಎಂ. ವಿ.ವೆಂಕಟೇಶ್ ಅವರ ಆದೇಶದ ಮೇರೆಗೆ ಶನಿವಾರ ನಲ್ಲೂರು ವ್ಯಾಪ್ತಿಯ ಶಿವನಗರ, ಲಿಂಗದಹಳ್ಳಿ ಸಮೀಪ ಕಾಲುವೆಗೆ ಅನಧಿಕೃತವಾಗಿ ಅಳವಡಿಸಲಾಗಿದ್ದ ಪಂಪ್ ಸೆಟ್ ತೆರವು ಕಾರ್ಯಚರಣೆ ನಡೆಸಲಾಯಿತು.
ಹೊನ್ನಾಳಿ ಎಸಿ ಅಭಿಷೇಕ್ ಅವರ ನೇತೃತ್ವದಲ್ಲಿ ತಹಶೀಲ್ದಾರರು, ನೀರಾವರಿ ಇಲಾಖೆ ಅಧಿಕಾರಿಗಳು ಪೊಲೀಸ್ ರಕ್ಷಣೆಯೊಂದಿಗೆ ತೆರವು ಮಾಡಿ ಪರಿಕರಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಕೊನೆ ಭಾಗದ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ತಲುಪದ ಕಾರಣ ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ. ಬಲದಂಡೆ ಕಾಲುವೆಗೆ ಫೆಬ್ರವರಿ 28 ವರೆಗೆ ನೀರು ಹರಿಸಲಾಗುತ್ತಿದೆ.
ಜಲಾಶಯದಲ್ಲಿನ ನೀರಿನ ಸಂಗ್ರಹದ ಆಧಾರದ ಮೇಲೆ ನೀರಿನ ಹಂಚಿಕೆಯಾಗಿದ್ದು ಕಾಲುವೆಗೆ ಅಳವಡಿಸಿರುವ ಅನಧಿಕೃತ ಪಂಪ್ಸೆಟ್ಗಳನ್ನು ತೆರವು ಮಾಡುವ ಮೂಲಕ ಕಾಲುವೆಯಲ್ಲಿ ಹೆಚ್ಚಿನ ನೀರು ಹರಿಸುವ ಮೂಲಕ ಕೊನೆ ಭಾಗಕ್ಕೆ ನೀರು ತೆಗೆದುಕೊಂಡು ಹೋಗಬೇಕಾಗಿದೆ.
ಈಗಿನ ವೇಳಾಪಟ್ಟಿಯಂತೆ ಫೆಬ್ರವರಿ 28 ರ ವರೆಗೆ ನೀರು ಬಿಡಲಾಗುತ್ತಿದ್ದು ಇದನ್ನು ಕೆಲವು ದಿನ ಮುಂದುವರೆಸಲು ಸಚಿವರ ಗಮನಕ್ಕೆ ತರಲಾಗುತ್ತದೆ. ಮತ್ತು ಕಾಲುವೆಯಲ್ಲಿ ಹೆಚ್ಚಿನ ಕ್ಯೂಸೆಕ್ಸ್ ನೀರು ಹರಿಸಲು ಮತ್ತು ಭದ್ರಾವತಿ ಭಾಗದಲ್ಲಿ ಅನಧಿಕೃತವಾಗಿ ಹಾಕಿರುವ ಕೊಳವೆಬಾವಿ ತೆರವಿಗೂ ಮನವಿ ಮಾಡಲಾಗುತ್ತದೆ. ಕಾಲುವೆ ಮೇಲ್ಬಾಗದಲ್ಲಿನ ರೈತರಿಗೆ ಸಾಕಷ್ಟು ನೀರು ಲಭ್ಯವಾಗಿದ್ದು ಕೊನೆ ಭಾಗದ ರೈತರ ಹಿತದೃಷ್ಟಿಯಿಂದ ನೀರನ್ನು ಬಳಕೆ ಮಾಡದಂತೆ ಮನವಿ ಮಾಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ತಿಳಿಸಿದ್ದರು.
ಚನ್ನಗಿರಿ ತಾಲೂಕು ಸೇರಿದಂತೆ ಕಾಲುವೆಯ ಅಕ್ಕಪಕ್ಕದಲ್ಲಿ ಅನಧಿಕೃತವಾಗಿ ಪಂಪ್ಸೆಟ್ ಅಳವಡಿಸಿರುವುದನ್ನು ಈಗಾಗಲೇ ತೆರವಿಗೆ ಸೂಚನೆ ನೀಡಲಾಗಿದೆ. ವಿದ್ಯುತ್ ಸರಬರಾಜು ನಿಲ್ಲಿಸಲಾಗಿದೆ. ಆದರೂ ಸಹ ನೀರೆತ್ತಿದರೆ ಪಂಪ್ಸೆಟ್ ವಶಕ್ಕೆ ಪಡೆಯಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಹೇಳಿದ್ದರು. ಒಟ್ಟಿನಲ್ಲಿ ಅಕ್ರಮ ಪಂಪ್ ಸೆಟ್ ಗಳ ತೆರವು ಕಾರ್ಯಾಚರಣೆ ಶುರುವಾಗಿದೆ. ರೈತರು ಮೊದಲು ನಮಗೆ ಭದ್ರಾ ಡ್ಯಾಂ ನೀರು ನೀಡಲಿ. ಆಮೇಲೆ ಬೇಕಾದರೆ ಕೊನೆ ಭಾಗದ ರೈತರ ಹಿತ ಕಾಪಾಡಲಿ. ಕೊನೆ ಭಾಗದ ರೈತರಿಗೆ ನೀರು ಸಿಗಬೇಕು ಎಂಬುದಕ್ಕೆ ನಮ್ಮ ವಿರೋಧ ಇಲ್ಲ. ತೋಟಗಳನ್ನು ನಾವು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಒಂದು ಕಣ್ಣಿಗೆ ಬೆಣ್ಣೆ ಮತ್ತೊಂದು ಕಣ್ಣಿಗೆ ಸುಣ್ಣ ಬೇಡ ಎಂದು ರೈತರು ಹೇಳುತ್ತಿದ್ದಾರೆ.