ನವದೆಹಲಿ: ಕಾಕ್‌ರೋಚ್ ಜನತಾ ಪಾರ್ಟಿ ಯುವ ಸಂಘಟನೆಯ ವಕ್ತಾರ ಸೌರಭ್ ದಾಸ್, ಮುಂಬರುವ ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಯಲಿರುವ ಬೃಹತ್ ಪ್ರತಿಭಟನೆಗೂ ಮುನ್ನ ಕೇಂದ್ರ ಸರ್ಕಾರವು ತಮ್ಮನ್ನು ಹಾಗೂ ಪ್ರಮುಖ ನಾಯಕರನ್ನು ಬಂಧಿಸಲು ಸಂಚು ರೂಪಿಸಿದೆ ಎಂದು ಆರೋಪಿಸಿದ್ದಾರೆ.
ಈ ವಿಷಯವಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಿಡಿಕಾರಿರುವ CJP ಸಂಸ್ಥಾಪಕ ಅಭೀಜಿತ್ ದೀಪ್ಕೆ, “ಅಮಿತ್ ಶಾ ಅವರೇ, ನೀವು ಎಷ್ಟು ಜನರನ್ನು ಬಂಧಿಸಲು ಸಾಧ್ಯ? ಅಕ್ಟೋಬರ್ 10 ರಂದು ಇಡೀ ದೇಶದ ಯುವಜನತೆ ದೆಹಲಿಯತ್ತ ಬರಲಿದ್ದಾರೆ” ಎಂದು ಸವಾಲು ಹಾಕಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮಧ್ಯರಾತ್ರಿ ಪೋಸ್ಟ್ ಹಂಚಿಕೊಂಡಿರುವ ಸೌರಭ್ ದಾಸ್, CJP ಸಂಸ್ಥಾಪಕ ಅಭೀಜಿತ್ ದೀಪ್ಕೆ, ಪ್ರಮುಖ ನಾಯಕರಾದ ಆಶುತೋಷ್ ರಾಂಕಾ ಹಾಗೂ ರತ್ನ ಸೇರಿದಂತೆ ಹಲವು ನಾಯಕರನ್ನು ದೆಹಲಿ ಪೊಲೀಸರು ಬಂಧಿಸುವ ಸಾಧ್ಯತೆಯಿದೆ ಎಂದಿದ್ದಾರೆ. “ಸರ್ಕಾರವು ಇಂತಹ ಸರ್ವಾಧಿಕಾರಿ ಧೋರಣೆ ಮತ್ತು ಬಂಧನಗಳ ಮೂಲಕ ನಮ್ಮ ಹೋರಾಟವನ್ನು ಹತ್ತಿಕ್ಕಬಹುದು ಎಂದು ಭಾವಿಸಿದ್ದರೆ ಅದು ಅವರ ದೊಡ್ಡ ಭ್ರಮೆ. ಇಂದಿನ ಯುವಜನತೆ ಜಾಗೃತರಾಗಿದ್ದಾರೆ. ನಾವು ಜೈಲಿಗೆ ಹೋದರೂ ಅಥವಾ ನಮಗೇನೇ ಆದರೂ ಸಾರ್ವಜನಿಕರು ಮತ್ತು ಯುವಜನರು ನಮ್ಮ ಹಕ್ಕುಗಳಿಗಾಗಿ ಹೋರಾಟವನ್ನು ಮುಂದುವರಿಸಬೇಕು” ಎಂದು ಅವರು ಮನವಿ ಮಾಡಿದ್ದಾರೆ.
ಪ್ರತಿಭಟನೆಯ ಹಿನ್ನೆಲೆ ಮತ್ತು ಬೇಡಿಕೆಗಳು:
ಚುನಾವಣಾ ಆಯೋಗವು ಕೈಗೊಂಡಿರುವ ‘ವಿಶೇಷ ತೀವ್ರ ಪರಿಷ್ಕರಣೆ’ ಪ್ರಕ್ರಿಯೆಯಲ್ಲಿ ವ್ಯಾಪಕ ಅಕ್ರಮಗಳು ನಡೆದಿವೆ ಎಂದು CJP ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣವೇ ತಮ್ಮ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಗೆ CJP ಕರೆ ನೀಡಿದೆ.
ಇತ್ತೀಚೆಗಷ್ಟೇ ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಿಜೆಪಿ ಹಮ್ಮಿಕೊಂಡಿದ್ದ ಜಂಟಿ ಪ್ರತಿಭಟನೆಗೆ ಶಿವಸೇನೆ (UBT) ಬೆಂಬಲ ನೀಡಿತ್ತು.
ಕಳೆದ ತಿಂಗಳು ಅಸ್ಸಾಂನಲ್ಲಿ CJP ನಾಯಕರನ್ನು 12 ಗಂಟೆಗಳ ಕಾಲ ವಶಕ್ಕೆ ಪಡೆಯಲಾಗಿತ್ತು. ಅಲ್ಲದೆ, ಜುಲೈ ತಿಂಗಳಲ್ಲಿ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಖಂಡಿಸಿ ಸಿಜೆಪಿ ನಡೆಸಿದ್ದ 36 ದಿನಗಳ ಸುದೀರ್ಘ ಪ್ರತಿಭಟನೆಯು ಶಿಕ್ಷಣ ಸಚಿವರ ರಾಜೀನಾಮೆಗೆ ಕಾರಣವಾಗಿತ್ತು. ಇದೀಗ ಸಿಇಸಿ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಪಟ್ಟು ಹಿಡಿದಿರುವ ಸಿಜೆಪಿ ನಾಯಕರು, ಬಂಧನದ ಭೀತಿಯ ನಡುವೆಯೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Leave a comment