SUDDIKSHANA KANNADA NEWS/ DAVANAGERE/ DATE:01-11-2024
ದಾವಣಗೆರೆ: ಪುಟ್ಟ ಮಗು. ನೋಡಲು ಸುರ ಸುಂದರ, ಯಾರೇ ನೋಡಿದರೂ ಮುದ್ದಾಡಬೇಕೆಂದು ಅನಿಸುತಿತ್ತು. ಅಷ್ಟು ಸುಂದರವಾಗಿದ್ದ ಆತ. ಆದ್ರೆ, ವಿಧಿಯಾಟವೇ ಬೇರೆ ಇತ್ತು. ದೀಪಾವಳಿ ಹಬ್ಬದ ಸಂಭ್ರಮದಲ್ಲಿರಬೇಕಾದ ಕುಟುಂಬ ಕತ್ತಲೆಯಲ್ಲೇ ಕಾಲ ಕಳೆಯುವಂತಾಗಿದೆ.
ಹೌದು. ಈ ಪುಟ್ಟ ಬಾಲಕನ ಸಾವು ಹೇಗಾಯ್ತು ಎಂಬುದು ತಿಳಿದರೆ ಕಣ್ಣಲ್ಲಿ ನೀರು ಬರುವುದು ಗ್ಯಾರಂಟಿ. ಅಷ್ಟು ಆಗಿದ್ದೇನು ಎಂಬುದೇ ಇಂಟ್ರೆಸ್ಟಿಂಗ್.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಬಳಿಯ ಹಿರಿಮನೆ ವಾಸಿ ರಾಜೇಶ್ ಹಾಗೂ ಅಶ್ವಿನಿ ಪಾಟೀಲ್ ದಂಪತಿ ಪುತ್ರ 2 ವರ್ಷದ ಬಾಲಕ ಅಥರ್ವ ಮೃತಪಟ್ಟವನು. ಈತನ ಮೇಲೆ ಸಾಕಷ್ಟು ಕನಸು ಕಂಡಿದ್ದ ಪೋಷಕರಿಗೆ ಕಣ್ಣೀರು ಬಿಟ್ಟರೆ ಬೇರೆ ಏನೂ ಇಲ್ಲ.
ಮೈಮೇಲೆ ಬಿಸಿ ಟೀ ಬಿದ್ದು ಗಂಭೀರವಾಗಿ ಗಾಯಗೊಂಡು ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಥರ್ವ ಇಂದು ಬೆಳಿಗ್ಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆ ಕೊನೆಯುಸಿರೆಳೆದಿದ್ದಾನೆ.
ರಾಜೇಶ್ ಅವರ ಪಕ್ಕದ ಮನೆಯ ನಿವಾಸಿಯೊಬ್ಬರು ಕಳೆದ ಅಕ್ಟೋಬರ್ 24 ರಂದು ಸಾವು ಕಂಡಿದ್ದರು. ರಾತ್ರಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆಗಮಿಸಿದ್ದವರಿಗಾಗಿ, ರಾಜೇಶ್ ಮನೆಯವರು ಟೀ ಮಾಡಿ ಪಾತ್ರೆಯೊಂದರಲ್ಲಿ ಹಾಕಿ
ತಮ್ಮ ಮನೆಯ ಜಗಲಿ ಮೇಲಿಟ್ಟಿದ್ದರು. ಆದ್ರೆ, ಆಟವಾಡುತ್ತಿದ್ದ ಬಾಲಕ ಅಥರ್ವಾ ಆಕಸ್ಮಿಕವಾಗಿ ಪಾತ್ರೆ ಹಿಡಿದು ಎಳೆದಾಡಿದ್ದಾನೆ.
ಈ ವೇಳೆ ಬಿಸಿ ಟೀ ಆತನ ಮೈಮೇಲೆ ಬಿದ್ದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅಥರ್ವನಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಇಹಲೋಕ ತ್ಯಜಿಸಿದ್ದಾನೆ. ಕಂದಮ್ಮನ ದಾರುಣ ಅಂತ್ಯ ಕುಟುಂಬಸ್ಥರ ನೋವು ಮುಗಿಲು
ಮುಟ್ಟಿದ್ದು, ಕಣ್ಣೀರಲ್ಲಿ ಕುಟುಂಬ ಕೈತೊಳೆಯುತ್ತಿದೆ.
ಗ್ರಾಮದಲ್ಲಿ ಹಬ್ಬದ ಸಂಭ್ರಮ ಇರಬೇಕಿತ್ತು. ಆದ್ರೆ, ಇಡೀ ಗ್ರಾಮದಲ್ಲಿಯೇ ನೀರವ ಮೌನ ಆವರಿಸಿದೆ. ಕಣ್ಣೀರ ಕೋಡಿ ನಡುವೆ ಅಥರ್ವನ ಅಂತ್ಯಸಂಸ್ಕಾರ ನೆರವೇರಿತು.