SUDDIKSHANA KANNADA NEWS/ DAVANAGERE/ DATE:05-02-2024
ದಾವಣಗೆರೆ: ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ಭದ್ರವಾಗಿ ಬಲವಾಗಿ ಬೇರೂರುವಂತೆ ಮಾಡಿದ್ದು ಮಾಡಾಳ್ ವಿರೂಪಾಕ್ಷಪ್ಪ. ಶಾಸಕರಾಗಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಶ್ರೀರಕ್ಷೆಯಾಗಿದ್ದವು. ಮಾಡಾಳ್ ವಿರೂಪಾಕ್ಷಪ್ಪ ಅಂದರೆ ಬಿಜೆಪಿಯ ಅಜಾತಶತ್ರು. ಪಕ್ಷದ ಮುಖಂಡರು, ಕಾರ್ಯಕರ್ತರನ್ನು ಒಟ್ಟುಗೂಡಿಸಿಕೊಂಡು ಹೋಗುತ್ತಿದ್ದ ಮಾಡಾಳ್ ವಿರೂಪಾಕ್ಷಪ್ಪರ ಕೆಲಸಗಳಿಗೆ ಅವರೇ ಸಾಟಿ. ಇವರ ಅವಧಿಯಲ್ಲಿ ಹೆಚ್ಚಾಗಿ ಚನ್ನಗಿರಿ ಅಭಿವೃದ್ಧಿ ಆಗಿದ್ದು ಎಂಬ ಮಾತೂ ಕೇಳಿ ಬರುತ್ತಿದ್ದವು. ಈಗ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿ ಸೇರ್ಪಡೆಗೆ ಮುಹೂರ್ತ ನಿಗದಿಯಾಗಿರುವುದು ಬಿಜೆಪಿ ಪಾಳೆಯದಲ್ಲಿ ಸಂಭ್ರಮ ತಂದಿದೆ. ಸಡಗರ, ಸಂಭ್ರಮ ಮುಗಿಲು ಮುಟ್ಟಿದೆ.
ದಾವಣಗೆರೆ ಜಿಲ್ಲೆ ಬಿಜೆಪಿ ಭದ್ರಕೋಟೆ ಎಂಬುದರಲ್ಲಿ ಎರಡು ಮಾತಿರಲಿಲ್ಲ. ಕಳೆದ ಚುನಾವಣೆಯಲ್ಲಿ ಏಳು ಕ್ಷೇತ್ರಗಳ ಪೈಕಿ ಐದರಲ್ಲಿ ಜಯಗಳಿಸಿದ್ದ ಕೇಸರಿ ಪಡೆ ಸಂಪೂರ್ಣವಾಗಿ ನೆಲಕಚ್ಚಲು ಕಾರಣ ಏನು ಎಂಬುದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸಾಬೀತಾಗಿತ್ತು. ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಅವರು ಜಿಲ್ಲೆಯ ಹೆಚ್ಚು ಕ್ಷೇತ್ರಗಳಲ್ಲಿ ಪ್ರಚಾರ ಮಾಡದಿರುವುದು ಬಿಜೆಪಿ ಭಾರೀ ಹಿನ್ನೆಡೆ ತಂದಿತ್ತು. ಚನ್ನಗಿರಿ ಕ್ಷೇತ್ರವೂ ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚಿತ್ತು. ಬಿಜೆಪಿ ಅಭ್ಯರ್ಥಿ ಶಿವಕುಮಾರ್ ಪಡೆದ ಮತ ಹಾಗೂ ಮಾಡಾಳ್ ಮಲ್ಲಿಕಾರ್ಜುನ್ ಪಡೆದ ಮತಗಳು ಬಿಜೆಪಿ ಪಕ್ಷಕ್ಕೆ ಬಿದ್ದಿದ್ದರೆ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಷ್ಟವಾಗಿತ್ತು.
ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಮಾಡಾಳ್ ಮಲ್ಲಿಕಾರ್ಜುನ್ ಗೆಲ್ಲುವ ಕುದುರೆ ಎನಿಸಿಕೊಂಡಿದ್ದರು. ಆದ್ರೆ, ಫಲಿತಾಂಶ ಕಾಂಗ್ರೆಸ್ ಪರ ಬಂದಿತ್ತು. ಕಾಂಗ್ರೆಸ್ ಅಭ್ಯರ್ಥಿ ಶಿವಗಂಗಾ ಬಸವರಾಜ್ ಗೆದ್ದು ಬಂದರು. ಆದ್ರೆ, ಬಿಜೆಪಿ ಇಲ್ಲಿ ಮೂರನೇ ಸ್ಥಾನಕ್ಕೆ ತಳ್ಳಿದಾಗಲೇ ಮಾಡಾಳ್ ವಿರೂಪಾಕ್ಷಪ್ಪರ ಬಲ, ವರ್ಚಸ್ಸು ಗೊತ್ತಾಗಿದ್ದು. 2013ರಲ್ಲಿ ಕೆಜೆಪಿಯಿಂದ ಕಣಕ್ಕಿಳಿದಿದ್ದ ಮಾಡಾಳ್ ವಿರೂಪಾಕ್ಷಪ್ಪ ಅವರು ವಡ್ನಾಳ್ ರಾಜಣ್ಣರ ವಿರುದ್ಧ ಸೆಣಸಾಡಿದ್ದರು. ಆಗಲೂ ಇಲ್ಲಿ ಬಿಜೆಪಿ ಗೌಣ ಎಂಬಂತಾಗಿತ್ತು.
ಮಾಡಾಳ್ ಮಲ್ಲಿಕಾರ್ಜುನ್ ಅವರು ಫೆಬ್ರವರಿ 7ರಂದು ಬೆಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಲು ಮುಹೂರ್ತ ಫಿಕ್ಸ್ ಆಗಿದೆ. ಈಗಾಗಲೇ ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರರ ಜೊತೆ ಮಾತುಕತೆ ಆಗಿದ್ದು, ಸೇರ್ಪಡೆಯೂ ಖಚಿತವಾಗಿದೆ.
ದಾವಣಗೆರೆಯಲ್ಲಿ ಲೋಕಸಭೆ ಕ್ಷೇತ್ರವನ್ನು ಬಿಜೆಪಿ ಯಾವತ್ತೂ ಕಳೆದುಕೊಂಡಿಲ್ಲ. ಅಂದರೆ ದಾವಣಗೆರೆ ಪ್ರತ್ಯೇಕ ಜಿಲ್ಲೆಯಾದ ಬಳಿಕ ಬಿಜೆಪಿ ಜಯಭೇರಿ ಬಾರಿಸಿದೆ. ಈ ಬಾರಿಯೂ ಗೆಲ್ಲಲೇಬೇಕೆಂಬ ಹಠ ತೊಟ್ಟಿರುವ ಯಡಿಯೂರಪ್ಪ, ವಿಜಯೇಂದ್ರ ಅವರು ಪಕ್ಷದಲ್ಲಿ ಮುನಿಸಿಕೊಂಡಿದ್ದವರನ್ನು ಮತ್ತೆ ಒಂದಾಗಿಸುವ ಕೆಲಸ ಮಾಡಿದ್ದಾರೆ. ಅದರಲ್ಲಿಯೂ ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಸೇರ್ಪಡೆಯಾಗುತ್ತಿರುವುದು ಒಂದು ಕಾರಣ ಎಂದರೆ ಅತಿಶಯೋಕ್ತಿ ಅಲ್ಲ.
ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ದಾವಣಗೆರೆಗೆ ಬಂದಾಗಲೂ ಮಾಡಾಳ್ ಮಲ್ಲಿಕಾರ್ಜುನ್ ಅವರು ವಿಜಯೇಂದ್ರ ಅವರ ಜೊತೆ ಕಾಣಿಸಿಕೊಂಡಿದ್ದರು. ಆದ್ರೆ, ಪಕ್ಷದ ಕಚೇರಿಯಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ವಿಜಯೇಂದ್ರ ಅವರಿಗೆ ಅದ್ಧೂರಿ ಸ್ವಾಗತ ಕೋರಿದ್ದರು. ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯರ ಜೊತೆ ಗುರುತಿಸಿಕೊಂಡಿದ್ದ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿ ಸೇರ್ಪಡೆಯಾಗುವುದು ಖಚಿತ ಎಂದೇ ಹೇಳಲಾಗುತಿತ್ತು. ಮಾಡಾಳ್ ವಿರೂಪಾಕ್ಷಪ್ಪ ಅವರು ಹೆಚ್ಚಾಗಿ ಕಾಣಿಸಿಕೊಳ್ಳದಿದ್ದರೂ
ಅವರ ಪುತ್ರ ಮಾಡಾಳ್ ಮಲ್ಲಿಕಾರ್ಜುನ್ ಅವರು ಮುಂಚೂಣಿಯಲ್ಲಿದ್ದರು.
ಎಂ. ಪಿ. ರೇಣುಕಾಚಾರ್ಯರ ಗುಂಪಿನಲ್ಲಿ ಸಕ್ರಿಯವಾಗಿ ಕಾಣಿಸಿಕೊಂಡಿದ್ದ ಮಾಡಾಳ್ ಮಲ್ಲಿಕಾರ್ಜುನ್ ಹೆಚ್ಚಾಗಿ ಸಕ್ರಿಯರಾಗಿದ್ದರು. ಸಂಸದ ಡಾ. ಜಿ. ಎಂ. ಸಿದ್ದೇಶ್ವರ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಯಾವಾಗಲೂ ಚನ್ನಗಿರಿ ಕ್ಷೇತ್ರದ ಮತದಾರರು ಕೈ ಬಿಟ್ಟಿರಲಿಲ್ಲ. ಈ ಬಾರಿ ಮಾಡಾಳ್ ಮಲ್ಲಿಕಾರ್ಜುನ್ ಸಕ್ರಿಯರಾಗದಿದ್ದರೆ ಮತಗಳು ಕಾಂಗ್ರೆಸ್ ಗೆ ಹೋಗಬಹುದೆನ್ನುವ ಭಯವೂ ಕಾಡುತಿತ್ತು. ಹಾಗಾಗಿ, ಈ ಬಾರಿ ಗೆಲ್ಲಲೇಬೇಕೆಂಬ ಹಠ ತೊಟ್ಟಿರುವ ಬಿಜೆಪಿ ಕಲಿಗಳು ಮಾಡಾಳ್ ಮಲ್ಲಿಕಾರ್ಜುನ್ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದಾರೆ. ಇದು ಚನ್ನಗಿರಿಯ ಬಿಜೆಪಿ ಹಳೆಯ ಹಾಗೂ ಹೊಸಬರಲ್ಲಿ ನವಚೈತನ್ಯ ತಂದಿದೆ. ಮತ್ತೆ ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಮಾಡಾಳ್ ಮಲ್ಲಿಕಾರ್ಜುನ್ ಅವರು ಬಂದರೆ ಬಿಜೆಪಿ ಮತ್ತಷ್ಟು ಬಲಿಷ್ಠವಾಗುವ ಜೊತೆಗೆ ಕಾಂಗ್ರೆಸ್ ಗೆ ಠಕ್ಕರ್ ಕೊಡುವ ಲೆಕ್ಕಾಚಾರವೂ ಇದರ ಹಿಂದೆ ಅಡಗಿದೆ.
ವಿಜಯೇಂದ್ರ ಅವರು ಯಡಿಯೂರಪ್ಪ ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡವರನ್ನು ಒಬ್ಬೊಬ್ಬರನ್ನಾಗಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ. ಯಾವುದೋ ಕಾರಣಕ್ಕೆ ಪಕ್ಷ ಬಿಟ್ಟು ಹೋದವರನ್ನು ಮರಳಿ ಕರೆತರುವ ಪ್ರಯತ್ನಕ್ಕೆ ಕೈ ಹಾಕಿದ್ದು, ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳಲ್ಲಿ ಗೆದ್ದು ತನ್ನ ಶಕ್ತಿ ಪ್ರದರ್ಶಿಸಬೇಕು, ಯಡಿಯೂರಪ್ಪರ ವರ್ಚಸ್ಸು ಕರ್ನಾಟಕದಲ್ಲಿ ಇದೆ, ರಾಜ್ಯಾಧ್ಯಕ್ಷನ್ನಾಗಿ ಇಷ್ಟೊಂದು ಸೀಟ್ ಗೆಲ್ಲಿಸಿಕೊಂಡು ಬಂದೆ ಎಂದು ಹೈಕಮಾಂಡ್ ಮುಂದೆ ಹೇಳಬಹುದು.
ಆಗ ಮತ್ತೆ ವಿಜಯೇಂದ್ರ ಅವರಿಗೆ ಮತ್ತಷ್ಟು ಆನೆ ಬಲ ಬರುವ ಜೊತೆಗೆ ಹೈಕಮಾಂಡ್ ವಿಜಯೇಂದ್ರ ಅವರಿಗೆ ಮತ್ತಷ್ಟು ಅಧಿಕಾರ ನೀಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ ಚನ್ನಗಿರಿಯಲ್ಲಿ ಮಾಡಾಳ್ ಮಲ್ಲಿಕಾರ್ಜುನ್ ಬಿಜೆಪಿಗೆ ಬಂದಿದ್ದು ಕ್ಷೇತ್ರದ ಜನರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ. ಮಾಡಾಳ್ ವಿರೂಪಾಕ್ಷಪ್ಪ ಹಾಗೂ ಮಾಡಾಳ್ ಮಲ್ಲಿಕಾರ್ಜುನ್ ಅಭಿಮಾನಿಗಳ ಹರ್ಷೋದ್ಘಾರ ಮುಗಿಲು ಮುಟ್ಟಿದೆ. ಸಂಭ್ರಮವೂ ಕಂಡು ಬರುತ್ತಿದೆ.