SUDDIKSHANA KANNADA NEWS/ DAVANAGERE/ DATE:20-02-2024
ಬೆಂಗಳೂರು: ಹೆಚ್ ಎಸ್ ಆರ್ ಪಿ ನಂಬರ್ ಪ್ಲೇಟ್ ನೊಂದಣಿ ಮಾಡಲು ರಾಜ್ಯ ಸರ್ಕಾರವು ಮೂರು ತಿಂಗಳ ಗಡುವು ಅವಧಿ ವಿಸ್ತರಿಸಿದೆ. ಆದ್ರೆ, ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಕಲಿ ವೆಬ್ ಸೈಟ್ ಮೂಲಕ ಜನರಿಂದ ಹಣ ಸುಲಿಗೆ ಮಾಡುತ್ತಿರುವ ದೂರುಗಳು ಕೇಳಿ ಬಂದಿವೆ.
ಜನರು ಸಹ ಫೋನ್ ಪೇ, ಗೂಗಲ್ ಪೇನಲ್ಲಿ ಹಣ ನೀಡಿ ವಂಚನೆಗೊಳಗಾದ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬಂದಿವೆ. ಹೆಚ್ ಎಸ್ ಆರ್ ಪಿ ಪ್ಲೇಟ್ ಅಳವಡಿಸಿಕೊಳ್ಳುವ ಸಲುವಾಗಿ ಹಣವನ್ನೂ ಪಾವತಿಸಿದ ಬಳಿಕ ಮೋಸ ಮಾಡುವ ಜಾಲ ಸಕ್ರಿಯವಾಗಿದೆ.
ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ನೋಂದಣಿ ಹೆಸರಲ್ಲಿ ವಂಚನೆಗೆ ಯತ್ನಗಳು ನಡೆಯುತ್ತಿದ್ದು, ಈ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ರಾಜ್ಯದ ಪೊಲೀಸರು ಜನರಲ್ಲಿ ಮನವಿ ಮಾಡಿದ್ದಾರೆ.
ಹೆಚ್ಎಸ್ಆರ್ಪಿ ನಂಬರ್ ಪ್ಲೇಟ್ ನೋಂದಣಿ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನಕಲಿ ಲಿಂಕ್ಗಳು ಶೇರ್ ಆಗುತ್ತಿವೆ. ಜತೆಗೆ ನಕಲಿ ವೆಬ್ಸೈಟ್ಗಳು ಕಾರ್ಯನಿರ್ವಹಿಸುತ್ತಿವೆ. ಇದರ ಬಗ್ಗೆ ಸ್ವಲ್ಪ ಎಚ್ಚರದಿಂದಿರಿ.
ಅಧಿಕೃತ ವೆಬ್ಸೈಟ್ ಮೂಲಕ ಮಾತ್ರ ನೀವು ನೋಂದಣಿ ಮಾಡಿ. ಆರ್ಟಿಒ ವೆಬ್ಸೈಟ್ನಿಂದ ಜನರೇಟ್ ಆಗಿಲ್ಲ ಅಂದರೆ, ಯಾವುದೇ ಕಾರಣಕ್ಕೂ ಹಣ ಹಾಕಬೇಡಿ, ಒಮ್ಮೆ ವೆಬ್ಸೈಟ್ ಅಧಿಕೃತವೇ? ಎಂದು ನೋಡಿಕೊಂಡು ನಂತರ ಹಣ ಪಾವತಿಸಿ. ಏನಾದರು ಸಮಸ್ಯೆ ಇದ್ದರೆ ಕೂಡಲೆ ಸೈಬರ್ ಕ್ರೈಂ ಅಥವಾ ಪೊಲೀಸ್ ಸಹಾಯವಾಣಿ 112ಗೆ ಕರೆ ಮಾಡಿ ದೂರು ನೀಡಿ ಎಂದು ತಿಳಿಸಿದ್ದಾರೆ.