ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಸಿಟಿ ರವಿ ಅವರು ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ ಎಂಬ ಆರೋಪದ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡಿದೆ. ಒಂದೆಡೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ಕೊಡೋದಾಗಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಎಚ್ಚರಿಸಿದ್ದಾರೆ. ಇತ್ತ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆಯೂ ಸಿಟಿ ರವಿ ಕಿಡಿಕಾರಿದ್ದಾರೆ. ಈ ಮಧ್ಯೆ ಸಿಟಿ ರವಿ ಕೂಡಾ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ದೂರು ನೀಡಿದ್ದರು. ಇದೀಗ ಈ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ.
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅವಾಚ್ಯ ಶಬ್ದ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ದೂರು ಪ್ರತಿದೂರು ಎರಡೂ ಕೇಸನ್ನು ಸಿಐಡಿಗೆ ಹಸ್ತಾಂತರ ಮಾಡಲಾಗಿದೆ, ಸಿಟಿ ರವಿ ಅವರು ಪೊಲೀಸರಿಂದ ಬಂಧನ ನಂತರ ಬಿಡುಗಡೆಯಾಗಿರುವ ಹಿನ್ನೆಲೆಯಲ್ಲಿ ಸಿಟಿ ರವಿ ಸರ್ಕಾರ ಮತ್ತು ಪೊಲೀಸರ ವಿರುದ್ಧ ಕಿಡಿಕಾರಿದ್ದರು. ಇದೀಗ ಸುವರ್ಣ ಸೌಧದಿಂದ ಬಂಧನವಾಗಿ ಬಿಡುಗಡೆವರೆಗೂ ನಡೆದ ಘಟನೆಯ ಬಗ್ಗೆ ಸಿಟಿ ರವಿ ಅವರು ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಲು ನಿರ್ಧರಿಸಿದ ಬೆನ್ನಲ್ಲೇ ಸಿಟಿ ರವಿ ಕೂಡ ತನ್ನ ಬಂಧನದ ವಿರುದ್ಧ ದೂರು ನೀಡಿದ್ದಾರೆ.
7 ಪುಟಗಳ ವಿಸ್ತಾರವಾದ ದೂರಿನಲ್ಲಿ ಸಿಟಿ ರವಿ ಅವರು, ಸದನದಲ್ಲಿ ನಡೆದ ಘಟನೆ, ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಸಿಟಿ ರವಿ ಅವರು ಘಟನೆಯ ಬಗ್ಗೆ ಸಂಪೂರ್ಣವಾಗಿ ದೂರಿನಲ್ಲಿ ಉಲ್ಲೇಖ ಮಾಡಿದ್ದು, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಪರಿಷತ್ ಸದಸ್ಯರಾದ ಬೋಸರಾಜ್ ಸೇರಿದಂತೆ ಹಲವರು ತನ್ನ ವಿರುದ್ಧ ಅವಾಚ್ಯ ಪದ ಬಳಕೆ ಮಾಡಿದ್ದಲ್ಲದೇ ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರು ಸಿಟಿ ರವಿ ನೀಡಿದ್ದಾರೆ. ಸಭಾಪತಿಗಳಿಗೆ ಕೊಟ್ಟ ದೂರಿನಲ್ಲಿ ಪೊಲೀಸರಿಂದ ಹಕ್ಕು ಚ್ಯುತಿ ಆಗಿರುವ ಬಗ್ಗೆಯೂ ಉಲ್ಲೇಖ ಮಾಡಿದ್ದು, ಜೀವ ಬೆದರಿಕೆ, ಮಾನಹಾನಿಯಾಗಿದೆ ಎಂದು ದೂರು ನೀಡಿದ್ದಾರೆ.