SUDDIKSHANA KANNADA NEWS/ DAVANAGERE/ DATE:25-12-2024
ಬೆಂಗಳೂರು: ಕಾಂಗ್ರೆಸ್ ಕಿಡಿಗೇಡಿಗಳಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಾಸಕ ಮುನಿರತ್ನ ಅವರನ್ನು ಭೇಟಿಮಾಡಿ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಅಭಯ ನೀಡಿ ಶೀಘ್ರ ಚೇತರಿಸಿಕೊಳ್ಳುವಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಹಾರೈಸಿದರು.
ತೋಳ್ಬಲ, ಅಧಿಕಾರ ಬಲದಿಂದ ಬಿಜೆಪಿಗರನ್ನು ಬಗ್ಗುಬಡಿಯಬಹುದು, ಪ್ರಜಾಪ್ರಭುತ್ವದ ಕತ್ತು ಹಿಸುಕಿ ಜನಪ್ರತಿನಿಧಿಗಳನ್ನು ಬೆದರಿಸಬಹುದು ಎಂಬ ಸೂತ್ರವನ್ನು ಕಾಂಗ್ರೆಸ್ ಸರ್ಕಾರ ಅಳವಡಿಸಿಕೊಂಡಂತೆ ಕಾಣುತ್ತಿದೆ.
ಶಾಸಕ ಮಿತ್ರ ಮುನಿರತ್ನ ಅವರ ಬೆಂಬಲಿಗರಿಗೂ ಸಹ ಬೆದರಿಸುವ ಸುಳ್ಳು ಕೇಸುಗಳನ್ನು ದಾಖಲಿಸುವ ಹೀನ ಕೆಲಸಕ್ಕೆ ಕಾಂಗ್ರೆಸ್ ಕೈ ಹಾಕಿದೆ. ಇದರ ಹಿಂದಿರುವ ಖೂಳಶಕ್ತಿ ಯಾವುದು ಎಂಬುದು ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಜನತೆಗೆ ತಿಳಿದೇ ಇದೆ ಎಂದು ವಿಜಯೇಂದ್ರ ಹೇಳಿದರು.
ಅಂದು ಹರೀಶ್ ಪೂಂಜಾ, ಮೊನ್ನೆ ಸಿ.ಟಿ.ರವಿ, ಇಂದು ಮುನಿರತ್ನ ಹೀಗೆ ಒಬ್ಬರಾದ ಮೇಲೆ ಒಬ್ಬ ಶಾಸಕರನ್ನು ಟಾರ್ಗೆಟ್ ಮಾಡಿಕೊಂಡು ತುರ್ತು ಪರಿಸ್ಥಿತಿಯ ಕರಾಳ ನೃತ್ಯವನ್ನು ಮತ್ತೆ ವಿಜೃಂಭಿಸಲು ಕಾಂಗ್ರೆಸಿಗರು ಹೊರಟಿದ್ದಾರೆ, ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇಂತಹ ದಮನಕಾರಿ ಧೋರಣೆಯನ್ನು ನೋಡಿಕೊಂಡು ಸುಮ್ಮನಿರಲು ಬಿಜೆಪಿಯ ಕಾರ್ಯಕರ್ತರು ರಣಹೇಡಿಗಳಲ್ಲ, ಪ್ರಜಾಸತ್ತಾತ್ಮಕ ರೀತಿಯಲ್ಲೇ ಕಾಂಗ್ರೆಸಿಗರಿಗೆ ಬುದ್ಧಿ ಕಲಿಸುವ ಮಾರ್ಗ ನಮಗೂ ತಿಳಿದಿದೆ ಎಂದು ಗುಡುಗಿದ್ದಾರೆ.
ಪೊಲೀಸ್ ಅಧಿಕಾರಿಗಳು ಮಿತಿಮೀರಿ ಸರ್ಕಾರದ ‘ಕೈ’ಗೊಂಬೆಗಳಂತೆ ವರ್ತಿಸುತ್ತಿದ್ದಾರೆ, ಭವಿಷ್ಯತ್ತಿನಲ್ಲಿ ಇದಕ್ಕೆ ತಕ್ಕ ಪ್ರತಿಫಲವನ್ನು ಅವರು ಅನುಭವಿಸಲೇ ಬೇಕಾಗುತ್ತದೆ ಎಂಬ ಎಚ್ಚರ ಪೊಲೀಸ್ ಅಧಿಕಾರಿಗಳಿಗಿರಲಿ ಎಂದು ಎಚ್ಚರಿಕೆ ನೀಡಿದರು.
ಶಾಸಕ ಮುನಿರತ್ನ ಅವರ ವಿರುದ್ಧ ದಾಖಲಾಗಿರುವ ಪ್ರಕರಣಗಳ ಸತ್ಯಾಸತ್ಯತೆ ನ್ಯಾಯಾಲಯದಲ್ಲಿ ಅನಾವರಣಗೊಳ್ಳಲಿದೆ. ಈ ವಿಷಯದಲ್ಲಿ ನಾವು ಹಸ್ತಕ್ಷೇಪ ಮಾಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ ಗೂಂಡಾಗಳನ್ನು ಬಳಸಿಕೊಂಡು ದೌರ್ಜನ್ಯ ನಡೆಸುವುದನ್ನು ಸಹಿಸಿಕೊಂಡು ಕೂರಲಾಗುವುದಿಲ್ಲ ಎಂಬ ಎಚ್ಚರಿಕೆಯ ಸಂದೇಶವನ್ನು ಕಾಂಗ್ರೆಸ್ ಸರ್ಕಾರಕ್ಕೆ ರವಾನಿಸಲು ಬಯಸುತ್ತೇನೆ ಎಂದು ತಿಳಿಸಿದರು.