SUDDIKSHANA KANNADA NEWS/ DAVANAGERE/ DATE:29-05-2024
ದಾವಣಗೆರೆ: ಭೀಕರ ಬರಗಾಲಕ್ಕೆ ತುತ್ತಾಗಿರುವ ಅನ್ನದಾತರು ಸಂಕಷ್ಟದಲ್ಲಿದ್ದು, ಸಹಾಯ ಧನ ಹೆಚ್ಚಿಸಿ ಬಿತ್ತನೆ ಬೀಜಗಳು ಕಡಿಮೆ ದರದಲ್ಲಿ ವಿತರಣೆ ಮಾಡಬೇಕು ಎಂಬುದೂ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಹಂಗಾಮಿನಲ್ಲಿ ಭೀಕರ ಬರದಿಂದ ರೈತರು ಬಸವಳಿದು ತತ್ತರಿಸಿ ಕಂಗಾಲಾಗಿ ಹೋಗಿದ್ದಾರೆ. ಸಾಲ ಸೋಲ ಮಾಡಿ ಬೆಳೆದ ಬೆಳೆಗಳು ಬಿರು ಬಿಸಿಲಿನ ಝಳಕ್ಕೆ ಒಣಗಿ ನಾಶವಾಗಿವೆ. ಕೊಳವೆಬಾವಿಗಳು ನೀರಿಲ್ಲದೆ ಬತ್ತಿ ಹೋಗಿವೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು ಇನ್ನೊಂದು ಕೈಯಲ್ಲಿ ಸುಲಿಗೆ ಮಾಡುತ್ತಿದೆ. ಬೆಲೆ ಏರಿಸುವ ಮೂಲಕ ಗ್ಯಾರಂಟಿ ಯೋಜನೆಗಳಿಗೆ ಹಣ ಹೊಂದಿಸಲು ಗೊತ್ತಾಗದಂತೆ ರೈತನ ಜೇಬಿಗೆ ಕೈ ಹಾಕಿ ಪಿಕ್ ಪಾಕೆಟ್ ಮಾಡುತ್ತಿದೆ. ಇದು ಕಿಡಿಗೇಡಿತನದ ಪರಮಾವಧಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ಹಂಗಾಮಿನಲ್ಲಿ ಭೀಕರ ಬರದಿಂದ ಬಸವಳಿದ ರೈತರಿಗೆ ಅನುಕೂಲ ಮಾಡಿಕೊಡಬೇಕು. ರೈತರಿಗೆ ಗುಣಮಟ್ಟದ ಬಿತ್ತನೆ ಬೀಜಗಳ ವಿತರಣೆಗೆ ಕ್ರಮ ವಹಿಸಬೇಕು. ನಕಲಿ ಬೀಜಗಳ ಹಾವಳಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು. ಜಿಲ್ಲೆಯಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಭತ್ತ ಮತ್ತು ಮೆಕ್ಕೆಜೋಳ ಬಿತ್ತನೆ ಮಾಡುತ್ತಾರೆ. ಈಗಾಗಲೇ ಭತ್ತದ ಮತ್ತು ಮೆಕ್ಕೆಜೋಳ ಬೀಜಗಳ ದಾಸ್ತಾನು ಅಗತ್ಯ ಪ್ರಮಾಣದಲ್ಲಿಲ್ಲದೆ ಅಭಾವ ಕಂಡುಬರುತ್ತಿದೆ. ಆದ್ದರಿಂದ ಸಾಕಷ್ಟು ಪ್ರಮಾಣದಲ್ಲಿ ಪೂರೈಕೆ ಮಾಡಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಅಗತ್ಯ ಪ್ರಮಾಣದಷ್ಟು ರಸಗೊಬ್ಬರ ಪೂರೈಕೆ ಮಾಡಲು ಕ್ರಮ ವಹಿಸಬೇಕು. ಬರ ಪರಿಹಾರ ಸರಿಯಾಗಿ ವಿತರಣೆಯಾಗಿಲ್ಲ. ಈ ಬಗ್ಗೆ ಗಮನ ವಹಿಸಿ ಬರ ಪರಿಹಾರ ಸರಿಯಾದ ರೀತಿಯಲ್ಲಿ ವಿತರಣೆ
ಮಾಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇಂತಹ ಶೋಚನೀಯ ಸ್ಥಿತಿಯಲ್ಲಿದ್ದ ರೈತ ಮುಂಗಾರು ಹಂಗಾಮಿನಲ್ಲಿ ಮಳೆ ಚೆನ್ನಾಗಿ ಬರುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯಿಂದ ಮತ್ತು ಬಂದ ವರುಣದಿಂದ ಹರ್ಷಿತನಾಗಿ ಬೀಳು ಬಿದ್ದ ಜಮೀನು ಉಳುಮೆ ಮಾಡಿ, ಹಸನು ಮಾಡಿಕೊಂಡಿದ್ದಾನೆ. ಬಿತ್ತನೆ ಬೀಜಕ್ಕಾಗಿ ಬಂದ್ರೆ ರಾಜ್ಯದ ಕಾಂಗ್ರೆಸ್ ಸರ್ಕಾರ ಬಿತ್ತನೆ ಬೀಜ ದರವನ್ನು ಭಾರಿ ಪ್ರಮಾಣದಲ್ಲಿ ಏರಿಕೆ ಮಾಡಿದೆ. ಇದರಿಂದ ಮುಕ್ತ ಮಾರುಕಟ್ಟೆಯಲ್ಲಿಯೂ ದರ ಭಾರೀ ಹೆಚ್ಚಳವಾಗಿದೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್. ರಾಜಶೇಖರ್ ನಾಗಪ್ಪ, ಮಾಜಿ ಶಾಸಕ ಬಸವರಾಜ ನಾಯ್ಕ, ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ. ಎಂ. ಸತೀಶ್, ರಾಜ್ಯ ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಲೋಕಿಕೆರೆ ನಾಗರಾಜ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ನಾಯ್ಕ್, ರಮೇಶ ನಾಯ್ಕ, ಬೇತೂರು ಸಂಗನಗೌಡ್ರು, ಅಣಬೇರು ಶಿವಪ್ರಕಾಶ್, ರಘುನಂದನ ಅಂಬರಕರ್, ಆನೆಕೊಂಡ ರೇವಣಸಿದ್ದಪ್ಪ, ಅತಿಥ್ ಅಂಬರಕರ್, ಪಿ.ಎಸ್.ಬಸವರಾಜು, ಮಹಾನಗರ ಪಾಲಿಕೆ ಸದಸ್ಯ ಕೆ. ಎಂ. ವೀರೇಶ ಪೈಲ್ವಾನ್, ಅಣಜಿ ಗುಡ್ಡೇಶ್, ಜಿ. ಎಸ್. ಶ್ಯಾಮ್, ಕೆ. ಜಿ. ಕಲ್ಲಪ್ಪ ಮತ್ತಿತರರು ಪಾಲ್ಗೊಂಡಿದ್ದರು.