SUDDIKSHANA KANNADA NEWS/ DAVANAGERE/ DATE:20-12-2024
ದಾವಣಗೆರೆ: ವಿಕಾಸ ಸೌಧದಲ್ಲಿ ಅಕ್ರಮವಾಗಿ ಪ್ರವೇಶಿಸಿ ವಿಧಾನ ಪರಿಷತ್ ಸದಸ್ಯ ಸಿ. ಟಿ. ರವಿಯವರ ಮೇಲೆ ಮಾರಣಾಂತಿಕ ಹಲ್ಲೆಗೆ ಯತ್ನಿಸಿದ ಲಕ್ಷ್ಮೀ ಹೆಬ್ಬಾಳ್ಕರ್ ರವರ ಖಾಸಗಿ ಆಪ್ತ ಸಹಾಯಕ ಸಂಗನಗೌಡ ಮತ್ತವರ ಚೇಲಾಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಇಡೀ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಜಶೇಖರ್ ಎನ್. ನಾಗಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು. ಈ ಸಂಬಂಧ ಉಪವಿಭಾಗಾಧಿಕಾರಿಗಳ ಮೂಲಕ
ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಸಿ.ಟಿ.ರವಿಯವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ ಕಲಂ 75ರಡಿ ಲೈಂಗಿಕ ಕಿರುಕುಳ ಮತ್ತು ಕಲಂ 79ರಡಿ ಮಹಿಳೆಯರ ಮಾನಕ್ಕೆ ಕುಂದು ತರುವಂತಹ ಪದ ಬಳಕೆ ಮಾಡಲಾಗಿದೆ ಎಂದು ಪ್ರಕರಣದಾಖಲಿಸಲಾಗಿರುವುದನ್ನು ರದ್ದುಪಡಿಸಬೇಕು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ. ರಾಜ್ಯ ಸರ್ಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಡಳಿತವನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ವಿಧಾನಮಂಡಲದ ಇತಿಹಾಸದಲ್ಲೇ ಕಂಡು ಕೇಳರಿಯದ ರೀತಿಯಲ್ಲಿ ಮಾಜಿ ಸಚಿವ, ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಸಿ.ಟಿ.ರವಿಯವರ ಮೇಲೆ ದಬ್ಬಾಳಿಕೆ, ಗೂಂಡಾ ವರ್ತನೆ ನಡೆದಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರ ಖಾಸಗಿ ಆಪ್ತ ಸಹಾಯಕ ಸಂಗನಗೌಡ ಮತ್ತವರ ಚೇಲಾಗಳಿಂದ ಸಿ.ಟಿ.ರವಿಯವರ ಮೇಲೆ ಮಾರಣಾಂತಿಕ ಹಲ್ಲೆ ಯತ್ನ ನಡೆದಿದೆ. ಇದು ಸಂಪೂರ್ಣವಾಗಿ ಅನಾಗರಿಕ ಮತ್ತು ರೌಡಿಸಂ ರೀತಿಯ ಕೃತ್ಯವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಧಿವೇಶನ ನಡೆಯುತ್ತಿರುವಾಗ ರೈತರು, ಮಹಿಳೆಯರು ಸೇರಿದಂತೆ ಜನ ಸಾಮಾನ್ಯರು ವಿಧಾನಸೌಧದೊಳಗೆ ಹೋಗಲು ಪ್ರವೇಶಾವಕಾಶ ಇರುವುದಿಲ್ಲ. ಇಂತಹ ಸನ್ನಿವೇಶದಲ್ಲಿ ರೌಡಿ ಪ್ರವೃತ್ತಿಯ ವ್ಯಕ್ತಿಗಳ ಗುಂಪು ವಿಧಾನಸೌಧದಲ್ಲಿ ಪ್ರವೇಶಿಸಿರುವುದು ಕರ್ನಾಟಕ ರಾಜ್ಯದಲ್ಲಿರುವುದು ಗೂಂಡಾ ಸರ್ಕಾರ ಎಂಬುದಕ್ಕೆ ಬಲವಾದ ಪುರಾವೆ ಆಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಇಲ್ಲವಾಗಿದೆ. ಎಂ.ಎಲ್.ಎ/ಎಂ.ಎಲ್.ಸಿ ಗಳಿಗೆ ಸೂಕ್ತ ಭದ್ರತೆ ಇಲ್ಲವಾದರೆ ಜನ ಸಾಮಾನ್ಯರ ಗತಿ ಏನು ಎಂಬಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಸದನದ ಕಲಾಪದಲ್ಲಿ ಆಡಳಿತಾರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ಸದಸ್ಯರು ಪರಸ್ಪರ ವಾಕ್ಸಮರ ನಡೆಸುತ್ತಿದ್ದ ಸಂದರ್ಭದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ರವರು ಸಿ. ಟಿ. ರವಿ ಅವರನ್ನು ಉದ್ದೇಶಿಸಿ ಕೂಲೆಗಾರ ಎಂದು ಹೇಳಿದ್ದಾರೆ. ಇದರಿಂದ ಕೋಪಗೊಂಡ ರವಿಯವರು ಹತಾಶೆ ಎಂದು ಕನ್ನಡದಲ್ಲಿ ಹೇಳುವ ಬದಲು ಇಂಗ್ಲಿಷ್ ನಲ್ಲಿ (ಹತಾಶೆ)ಪ್ರಸ್ಟ್ರೇಟ್ ಎಂದು ಹೇಳಿರುವುದನ್ನು ತಪ್ಪಾಗಿ ಅರ್ಥೈಸಿಕೊಂಡ ಲಕ್ಷ್ಮೀ ಹೆಬ್ಬಾಳ್ಕರ್ ರವರು ರವಿಯವರನ್ನು ಏಕವಚನದಲ್ಲಿ ನಿಂದಿಸಿರುವುದು ಸಭ್ಯತೆಯ ಲಕ್ಷಣವಲ್ಲ ಎಂದು ಕಿಡಿಕಾರಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕರಾದ ಎಂ. ಪಿ. ರೇಣುಕಾಚಾರ್ಯ, ಬಸವರಾಜ್ ನಾಯ್ಕ್, ದೂಡಾ ಮಾಜಿ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಜಿಲ್ಲಾ ವಕ್ತಾರ ಸತೀಶ್ ಕೊಳೇನಹಳ್ಳಿ, ಶ್ರೀನಿವಾಸ್, ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಗೌಡ ಪಾಟೀಲ್, ಪ್ರವೀಣ್ ಜಾಧವ್ ಸೇರಿದಂತೆ ಇತರೆ ಮುಖಂಡರು ಹಾಜರಿದ್ದರು.