SUDDIKSHANA KANNADA NEWS/ DAVANAGERE/ DATE:11-01-2025
ಹೈದರಾಬಾದ್: ತೆಲಂಗಾಣ ಯುವ ಕಾಂಗ್ರೆಸ್ ಪದಾಧಿಕಾರಿಗಳೊಂದಿಗೆ ಟಿಪಿಸಿ ಅಧ್ಯಕ್ಷ ಜಿ. ಮಹೇಶ್ ಗೌಡ ಅವರು ಪಕ್ಷ ಸಂಘಟನೆ ಕುರಿತಂತೆ ಸಭೆ ನಡೆಸಿದರು.
ಸಭೆಯಲ್ಲಿ ಮಾತನಾಡಿದ ತೆಲಂಗಾಣ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಮಹೇಶ್ ಗೌಡ ಅವರು, ತೆಲಂಗಾಣದಲ್ಲಿ ಯುವ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ರಾಷ್ಟ್ರೀಯ ನಾಯಕರ ಪರಿಶ್ರಮದಿಂದ ಅಧಿಕಾರಕ್ಕೆ ಬಂದಿದೆ. ಲೋಕಸಭೆ ಚುನಾವಣೆಯಲ್ಲಿ ಸ್ವಲ್ಪ ಹಿನ್ನೆಡೆ ಆದರೂ ಎಲ್ಲರೂ ಪ್ರಾಮಾಣಿಕವಾಗಿ ಕೆಲಸ ನಿರ್ವಹಿಸಿದ್ದಾರೆ. ಪಕ್ಷ ಮತ್ತಷ್ಟು ಬಲಿಷ್ಠವಾಗಬೇಕಿದೆ. ಯುವಕರು ಹೆಚ್ಚಾಗಿ ಕಾಂಗ್ರೆಸ್ ಪಕ್ಷಕ್ಕೆ ಸೇರುವಂತೆ ಮಾಡಲು ಶ್ರಮಿಸುವಂತೆ ಸಲಹೆ ನೀಡಿದರು.
ಈ ವೇಳೆ ಮಾತನಾಡಿದ ರಾಷ್ಟ್ರೀಯ ಕಾಂಗ್ರೆಸ್ ಯುವ ಘಟಕದ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಅವರು, ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ನೇತೃತ್ವದ ಎನ್ ಡಿ ಎ ಸರ್ಕಾರವು ದ್ವೇಷ ರಾಜಕಾರಣ ಮಾಡುತ್ತಿದೆ. ಜನರಲ್ಲಿ ಗೊಂದಲ ಸೃಷ್ಟಿಸುವಂಥ ಕೆಲಸ ಮಾಡುತ್ತಿದೆ. ಅಭಿವೃದ್ಧಿ ರಾಜಕಾರಣದ ಬದಲು ಸೇಡು ತೀರಿಸಿಕೊಳ್ಳುವ ರಾಜಕೀಯ ಮಾಡುತ್ತಿದೆ. ಈ ವಿಚಾರವನ್ನು ಯುವ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಜನರಿಗೆ ತಿಳಿಸುವ ಕೆಲಸ ಮಾಡಬೇಕಿದೆ. ಇದು ಪರಿಣಾಮಕಾರಿಯಾಗಿ ಆಗಬೇಕಾದ ಅವಶ್ಯಕತೆ ಇದೆ ಎಂದು ಪ್ರತಿಪಾದಿಸಿದರು.
ತೆಲಂಗಾಣ ರಾಜ್ಯ ಸರ್ಕಾರವು ಉತ್ತಮ ಆಡಳಿತ ನೀಡುತ್ತಿದೆ. ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಜನರ ಸಂಕಷ್ಟಗಳಿಗೆ ಸ್ಪಂದಿಸುವ, ಜನಪರ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದ್ದಾರೆ. ಜನರಿಗೆ ತಲುಪಿಸಲು ಯುವ ಕಾಂಗ್ರೆಸ್ ನವರು ಮುಂದಾಗಬೇಕು. ಜನರಿಗೆ ಸರ್ಕಾರದ ಯೋಜನೆಗಳನ್ನು ತಲುಪಿಸಲು ಮುಂದಾಗಿ ಎಂದು ಹೇಳಿದರು.
ಕಾಂಗ್ರೆಸ್ ಪಕ್ಷವು ದೇಶದ ಜನರಿಗೆ ಹಲವಾರು ಯೋಜನೆಗಳನ್ನು ನೀಡಿದೆ. ಉಳುವವನೆ ಭೂಮಿ ಒಡೆಯ, ಮಾಹಿತಿ ಹಕ್ಕು ಕಾಯ್ದೆ, ಶಿಕ್ಷಣದ ಹಕ್ಕು, ಹಸಿರು ಕ್ರಾಂತಿ, ನರೇಗಾ ಸೇರಿದಂತೆ ನೂರಾರು ಯೋಜನೆಗಳನ್ನು ನೀಡಿದೆ. ಕೇಂದ್ರ ಸರ್ಕಾರ ಜನರಿಗೆ ಭರವಸೆ ನೀಡಿದ್ದು ಬಿಟ್ಟರೆ ಈಡೇರಿಸಿಲ್ಲ. ಭಾಷಣ ಮಾಡುವ ಮೂಲಕ ಜನರಿಗೆ ಮೋಸ ಮಾಡುತ್ತಿದ್ದು, ಇದು ಪ್ರತಿಯೊಬ್ಬರಿಗೂ ತಿಳಿಯುವಂತಾಗಬೇಕು. ಪಕ್ಷದ ಸಂಘಟನೆಗೆ ಹೆಚ್ಚು ಒತ್ತು ನೀಡಬೇಕಾದ ಅವಶ್ಯಕತೆ ಇದೆ. ಮುಂಬರುವ ಯಾವುದೇ ಚುನಾವಣೆ ಇರಲಿ, ಸ್ವಯಂಪ್ರೇರಿತರಾಗಿ ಜನರು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳನ್ನು ಮಾತನಾಡುವಂತಾಗಬೇಕು. ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಮುನ್ನಡೆಯಬೇಕಿದೆ ಎಂದು ಸಲಹೆ ನೀಡಿದರು.
ಸಭೆಯಲ್ಲಿ ತೆಲಂಗಾಣ ಯುವ ಕಾಂಗ್ರೆಸ್ ನ ಮುಖಂಡರು, ಪದಾಧಿಕಾರಿಗಳು ಹಾಜರಿದ್ದರು. ಈ ವೇಳೆ ಸಲಹೆಗಳನ್ನು ನೀಡಿದರು. ಸಲಹೆ ಸ್ವೀಕರಿಸಿದ ಜಿ. ಮಹೇಶ್ ಗೌಡ ಹಾಗೂ ಸೈಯದ್ ಖಾಲಿದ್ ಅಹ್ಮದ್ ಅವರು ಕಾಂಗ್ರೆಸ್ ಪಕ್ಷ ಮತ್ತಷ್ಟು ಬಲಿಷ್ಠಗೊಳಿಸಲು ವಿಶೇಷ ಕಾರ್ಯಕ್ರಮಗಳನ್ನು ರೂಪಿಸೋಣ. ನೀವೆಲ್ಲರೂ ಸಜ್ಜಾಗಿ ಎಂದು ಹೇಳಿದರು.