SUDDIKSHANA KANNADA NEWS/ DAVANAGERE/ DATE:17-07-2024
ದಾವಣಗೆರೆ: ಭದ್ರಾ ಜಲಾಶಯದ ರಿವರ್ ಸ್ಲೀವ್ ಗೇಟ್ ರಿಪೇರಿ ಮಾಡುವಲ್ಲಿ ರಾಜ್ಯ ಸರ್ಕಾರದ ಭ್ರಷ್ಟಾಚಾರ, ಅಧಿಕಾರಿಗಳ ಬೇಜವಾಬ್ದಾರಿ ನಡೆ ಖಂಡನೀಯ. ರೈತರ ಬೆಳೆಗಳಿಗೆ ನೀಡಬೇಕಾಗಿದ್ದ ನೀರು ಸೋರಿಕೆಯಾಗಿ ವ್ಯರ್ಥವಾಗುತ್ತಿದ್ದು, ಇದೇ ಧೋರಣೆ ಮುಂದುವರಿಸಿದರೆ ಹಂತ ಹಂತವಾಗಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಬಿಜೆಪಿ ಮುಖಂಡರು ಎಚ್ಚರಿಕೆ ನೀಡಿದರು.
ನಗರದ ಹಳೇ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ನಾಯಕರಾದ ಮಾಡಾಳ್ ಮಲ್ಲಿಕಾರ್ಜುನ್, ಎಂ. ಪಿ. ರೇಣುಕಾಚಾರ್ಯ, ಲೋಕಿಕೆರೆ ನಾಗರಾಜ್ ಅವರು, ಸರ್ಕಾರ, ಭದ್ರಾ ಡ್ಯಾಂ ಅಧಿಕಾರಿಗಳ ನಿರ್ಲಕ್ಷ್ಯ, ಬೇಜವಾಬ್ದಾರಿತನಕ್ಕೆ ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಮಾತನಾಡಿ ಭದ್ರಾ ಜಲಾಶಯ ಮೂರು ಜಿಲ್ಲೆಗಳ ಜೀವನಾಡಿ. ದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳ ರೈತರು, ಜನರ ಆಧಾರಸ್ತಂಭ. ಒಂದು ಲಕ್ಷದ ಐದು ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಬೆಳೆಯಲು ಈ ಡ್ಯಾಂ ನೀರೇ ಆಧಾರ. ಆದ್ರೆ, ರಿವರ್ ಗೇಟ್ ರಿಪೇರಿ ಮಾಡುವಾಗ ಆಗಿದ್ದ ಅಧಿಕಾರಿಗಳ ಎಡವಟ್ಟಿನಿಂದ ಏಳು ದಿನಗಳ ಕಾಲ ಭದ್ರಾ ಜಲಾಶಯದಿಂದ ಸಾವಿರಾರು ಕ್ಯೂಸೆಕ್ ನೀರು ಸೋರಿಕೆಯಾಗಿ ವ್ಯರ್ಥವಾಗಿ ನದಿಗೆ ಹರಿದು ಹೋಗುತ್ತಿತ್ತು. ಇದರಿಂದ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮೂಡಿತ್ತು. ರೈತ ಮುಖಂಡರ ಜೊತೆ ನಾವೆಲ್ಲಾ ಹೋಗಿ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ ಅಧಿಕಾರಿಗಳ ಯಡವಟ್ಟು ಗೊತ್ತಾಯಿತು ಎಂದು ತಿಳಿಸಿದರು.
ಭದ್ರಾ ಜಲಾಶಯಕ್ಕೆ ಭೇಟಿ ನೀಡಿ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ವಿರುದ್ಧ ಪ್ರತಿಭಟನೆ ನೆಡೆಸಿ ಆದಷ್ಟು ಬೇಗ ರಿಪೇರಿ ಕಾರ್ಯ ಮಾಡಬೇಕಾಗಿ ಆಗ್ರಹಿಸಿದ್ದೆವು. ಆಗ ತಾತ್ಕಾಲಿಕವಾಗಿ ಸರಿಪಡಿಸುವ ಕೆಲಸ ನಡೆದಿತ್ತು. ಕೇವಲ ತಾತ್ಕಾಲಿಕ ರಿಪೇರಿ ಮಾಡದೇ ಶಾಶ್ವತ ಪರಿಹಾರ ಒದಗಿಸಬೇಕು. ಈಗಾಗಲೇ ನೂರು ಕೆರೆ ತುಂಬಿಸುವಷ್ಟು ನೀರು ಪೋಲಾಗಿರುವುದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ರಿವರ್ ಸ್ಲೀವ್ಸ್ ರಿಪೇರಿಗೆ 90 ಲಕ್ಷ ರೂಪಾಯಿ ಟೆಂಡರ್ ಆಗಿತ್ತು. ಆದ್ರೆ, ಸರಿಯಾಗಿ ಕಾಮಗಾರಿ ನಿರ್ವಹಿಸಿಲ್ಲ. ಮಳೆ ಹೆಚ್ಚಾದಾಗ ಡ್ಯಾಂಗೆ ಒಳಹರಿವು ಬರಲು ಶುರುವಾಗಿದೆ. ಈ ವೇಳೆ ರಿವರ್ ಸ್ಲೀವ್ಸ್ ಸರಿಮಾಡಲು ಹೋದರು. ಇದರಿಂದಾಗಿ ನೀರು ಪೋಲಾಗಿದೆ. ಗೇಟ್ ನ ಎರಡು ಚಾನಲ್ ನಲ್ಲಿ ರಬ್ಬರ್ ಅಳವಡಿಸದೇ ಕಾಮಗಾರಿ ನಡೆಸಿರುವುದೇ ನೀರು ಸೋರಿಕೆಯಾಗಲು ಕಾರಣ. ಗುಣಮಟ್ಟದ ರಿಪೇರಿ ಮಾಡಿದ್ದರೆ ಈ ಸಮಸ್ಯೆ ಎದುರಾಗುತ್ತಿರಲಿಲ್ಲ ಎಂದು ತಿಳಿಸಿದರು.
ಈಗಲೂ ಆರು ನೂರು ಕ್ಯೂಸೆಕ್ ನೀರು ವ್ಯರ್ಥವಾಗಿ ಹರಿದು ಹೋಗುತ್ತಿದೆ. ಅಧಿಕಾರಿಗಳು ಆದಷ್ಟು ಬೇಗ ರಿಪೇರಿ ಮಾಡಬೇಕು. ಹೊರ ಹೋಗುತ್ತಿರುವ ನೀರು ನಿಲ್ಲಿಸಬೇಕು. ಈ ಮೂಲಕ ಭದ್ರಾ ಅಚ್ಚುಕಟ್ಟುದಾರರ ಹಿತ ಕಾಪಾಡಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಎಂ. ಪಿ. ರೇಣುಕಾಚಾರ್ಯ ಮಾತನಾಡಿ, ಜಲಾಶಯದ ಎಡದಂಡೆ, ಬಲದಂಡೆ ನಾಲೆ, ಗೇಟ್ ಸೇರಿದಂತೆ ಭದ್ರಾ ಜಲಾಶಯದ ರಿಪೇರಿಗೆ ಕೂಡಲೇ ಸರ್ಕಾರ ನೂರು ಕೋಟಿ ರೂಪಾಯಿ ಬಿಡುಗಡೆ ಮಾಡಬೇಕು. ಯಡಿಯೂರಪ್ಪರು 2006-07ರಲ್ಲಿ ಹಣಕಾಸು ಸಚಿವರಾಗಿದ್ದಾಗ 900 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. ಈ ಕಾಮಗಾರಿ 2008-09ರಲ್ಲಿ ನಡೆದಿತ್ತು. ಆ ಬಳಿಕ ಯಾವ ಕೆಲಸಗಳೂ ಆಗಿಲ್ಲ. ಜಲಾಶಯದ ಬುಟ್ಟಿ ಕಾಂಕ್ರಿಟ್ ಆಗಿಲ್ಲ. ಜಂಗಲ್ ದುರಸ್ತಿಪಡಿಸಿಲ್ಲ. ಗೇಟ್ ಸರಿಪಡಿಸಿಲ್ಲ ಎಂದು ದೂರಿದರು.
500ರಿಂದ 600 ಕ್ಯೂಸೆಕ್ ಹೊರಗಡೆ ಹೋಗುತ್ತಿದೆ ಎಂಬ ಮಾಹಿತಿ ಸ್ಥಳೀಯರಿಂದ ಸಿಕ್ಕಿದೆ. ಆದ್ರೆ, ಅಧಿಕಾರಿಗಳು 200 ಕ್ಯೂಸೆಕ್ ಮಾತ್ರ ಹೋಗುತ್ತಿದೆ ಅಂತಾರೆ. ನಮಗೆ ತಾತ್ಕಾಲಿಕ ಪರಿಹಾರ ಬೇಡ ಶಾಶ್ವತ ಪರಿಹಾರ ಬೇಕು. ಬೆಡ್ ಕಾಂಕ್ರಿಟ್ ಗೇಟ್ ಬಳಿ ಅಳವಡಿಸಬೇಕು. 100 ಅಡಿ ಆಳದಲ್ಲಿ ನೀರು ಸೋರಿಕೆ ಆಗುತ್ತಿರುವುದನ್ನು ತಡೆಯಬೇಕು. ಇಲ್ಲದಿದ್ದರೆ ರೈತರ ಜೀವನಾಡಿ ಆಗಿರುವ ಜಲಾಶಯದಿಂದ ನಂಬಿರುವ ರೈತರು ಬೀದಿಪಾಲು ಆಗುವುದು ಖಚಿತ. ತಕ್ಷಣ 150 ಕೋಟಿ ರೂ. ಬಿಡುಗಡೆ ಮಾಡಿ ದುರಸ್ತಿಪಡಿಸಿ ಎಂದು ಒತ್ತಾಯಿಸಿದರು.
ಭದ್ರಾ ಮೇಲ್ದಂಡೆಗೆ ಎರಡು ಬಾರಿ ನೀರು ಹರಿಸಲಾಗಿದೆ. ತುಂಗಾ ಡ್ಯಾಂನಿಂದ 22 ಟಿಎಂಸಿ ಭದ್ರಾ ಜಲಾಶಯಕ್ಕೆ ಬರಬೇಕು. ಜಲಾಶಯ ಭರ್ತಿಯಾದ ಬಳಿಕ ಆರು ಟಿಎಂಸಿ ಹೆಚ್ಚು ಸೇರಿಸಿ 28 ಟಿಎಂಸಿ ಬಂದಾಗ ನೀರು ಹರಿಸಲಿ. ಡ್ಯಾಂ ಗರಿಷ್ಠ ಮಟ್ಟ ತಲುಪುವ ಮುನ್ನವೇ ನೀರು ಹರಿಸಿದರೆ ಸಹಿಸಲ್ಲ. ಇಲ್ಲದಿದ್ದರೆ ದೊಡ್ಡ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಗೋಷ್ಠಿಯಲ್ಲಿ ಚಂದ್ರಶೇಖರ್ ಪೂಜಾರ್, ಮಹಾನಗರ ಪಾಲಿಕೆ ಸದಸ್ಯ ಬಿ. ಜಿ. ಅಜಯ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಧನಂಜಯ ಕಡ್ಲೇಬಾಳು, ಬಿಜೆಪಿ ಮುಖಂಡ ಬಾತಿ ಶಿವಕುಮಾರ, ಹಾಲೇಶ್, ಪ್ರವೀಣ್ ಕುಮಾರ್ ಹಾಗೂ ಮುಖಂಡರು ಉಪಸ್ಥಿತರಿದ್ದರು.