SUDDIKSHANA KANNADA NEWS/ DAVANAGERE/ DATE:02-02-2024
ವಿಜಯಪುರ: ಜನರ ವಿಶ್ವಾಸ, ನಂಬಿಕೆ ಗಳಿಸುವಲ್ಲಿ ವಿಫಲವಾದ ಬಿಜೆಪಿಗೆ ಆಪರೇಷನ್ ಬಿಟ್ಟರೆ ಬೇರೇನೂ ಗೊತ್ತಿಲ್ಲ. ಹಣಕೊಟ್ಟು ಶಾಸಕರನ್ನು ಕೊಂಡುಕೊಂಡು ಬಹುಮತ ಮಾಡಿಕೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ಅವರು ಇಂದು ಮುದ್ದೇಬಿಹಾಳ ಹೆಲಿಪ್ಯಾಡಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಅವರು ಕಾಂಗ್ರೆಸ್ಸಿನಿಂದ ಹಲವಾರು ನಾಯಕರು ದುಂಬಾಲು ಬಿದ್ದಿದ್ದಾರೆ ಎಂದು ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು ಹಿಂದೆಯೂ ಎರಡು ಬಾರಿ ಹಾಗೇ ಮಾಡಿದ್ದಾರೆ. 2008 ರಿಂದ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಇದ್ದಾಗಲೂ ಇದನ್ನೇ ಮಾಡಿದ್ದು. ಎಲ್ಲಾ ಕಡೆ ಕೊಂಡುಕೊಳ್ಳಲು ಪ್ರಯತ್ನ ಮಾಡುತ್ತಾರೆ. ಕೊಂಡುಕೊಳ್ಳಲು ಜನ ಸಿಕ್ಕರೆ ಸರ್ಕಾರ ರಚನೆ ಮಾಡುತ್ತಾರೆ ಎಂದರು.
ಬಿಜೆಪಿಗೆ ಜನ ಪೂರ್ಣ ಅಧಿಕಾರ ಕೊಟ್ಟೇ ಇಲ್ಲ
ರಾಜ್ಯದಲ್ಲಿ ಜನರು ಬಿಜೆಪಿಗೆ ಜನ ಪೂರ್ಣ ಅಧಿಕಾರ ಕೊಟ್ಟೇ ಇಲ್ಲ. 2008, 2013, 2018 ರಲ್ಲಿ ಅವರು ಬಹುಮತದಿಂದ ಗೆದ್ದೇಇಲ್ಲ. ಕಾಂಗ್ರೆಸ್ ಪಕ್ಷ 2013ರಲ್ಲಿ ಗದ್ದಿದೆ. 2018 ರಲ್ಲಿ ಸೋತು ಪುನ: 2023 ರಲ್ಲಿ 136 ಸ್ಥಾನಗಳನ್ನು
ಪಡೆದು ಗೆದ್ದಿದ್ದೇವೆ ಎಂದರು. ಕಾಂಗ್ರೆಸ್ ಪಕ್ಷ ಜನರ ವಿಶ್ವಾಸ ಹಾಗೂ ತೀರ್ಪಿನಂತೆ ಅಧಿಕಾರಕ್ಕೆ ಬರುತ್ತದೆ. ಬಿಜೆಪಿಯವರು ಆಪರೇಷನ್ ಕಮಲ ಮಾಡಿ ಅಧಿಕಾರಕ್ಕೆ ಬರುತ್ತಾರೆ ಎಂದರು.
ರಾಷ್ಟ್ರಧ್ವಜ ಭಾರತದ 140 ಕೋಟಿ ಜನರ ಅಸ್ಮಿತೆ
ಮಂಡ್ಯದಲ್ಲಿ ಹನುಮಧ್ವಜ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ರಾಜ್ಯಾಧ್ಯಕ್ಷರು ಪ್ರಕರಣವನ್ನು ಸಿಬಿಐ ಗೆ ವಹಿಸಬೇಕು ಎಂದು ಒತ್ತಾಯಿಸಿರುವ ಬಗ್ಗೆ ಪ್ರತಿಕ್ರಿಯಿಸಿ, ಮಂಡ್ಯದ ಪ್ರಕರಣದ ವಾಸ್ತವಾಂಶವೇ ಅವರಿಗೆ ತಿಳಿದಿಲ್ಲ. ಅಲ್ಲಿ ಕೇವಲ ರಾಷ್ಟ್ರಧ್ವಜ ಹಾಗೂ ಕನ್ನಡ ಧ್ವಜ ಹಾರಿಸುವುದಾಗಿ ಕೆರಗೋಡು ಗ್ರಾಮಪಂಚಾಯ್ತಿಯಲ್ಲಿ ಅನುಮತಿ ಪಡೆದುಕೊಂಡು ಕೇಸರಿ ಧ್ವಜ ಹಾರಿಸಲು ಮುಂದಾಗಿದ್ದರು. ಅವರಿಗೆ ರಾಷ್ಟ್ರಧ್ವಜದ ಬಗ್ಗೆ ಯಾವುದೇ ಗೌರವವಿಲ್ಲ. ರಾಷ್ಟ್ರಧ್ವಜ, ಭಾರತ ದೇಶದ 140 ಕೋಟಿ ಜನರ ಅಸ್ಮಿತೆಯ ಪ್ರತೀಕ. ಇಂತಹ ರಾಷ್ಟ್ರಧ್ವಜವನ್ನು ಹಾಕಲು ಒಪ್ಪದಿರುವವರು ದೇಶಭಕ್ತರೆಂದು ಹೇಳಿಕೊಳ್ಳುತ್ತಾರೆ ಎಂದರು.
ಮಂಡ್ಯದಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ನೀಡುವ ಕಾಂಗ್ರೆಸ್ ಕಾಶ್ಮೀರದಲ್ಲಿ ರಾಷ್ಟ್ರಧ್ವಜಕ್ಕೆ ಗೌರವ ನೀಡುವುದಿಲ್ಲ ಎಂಬ ಬಿಜೆಪಿಯವರ ಆರೋಪ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಕಾಂಗ್ರೆಸ್ ಪಕ್ಷ ರಾಷ್ಟ್ರಧ್ವಜಕ್ಕೆ ಸದಾ ಗೌರವ ನೀಡುತ್ತದೆ. 1935 ರಲ್ಲಿ ದೇಶಕ್ಕೆ ರಾಷ್ಟ್ರಧ್ವಜವನ್ನು ನೀಡಿದವರು ಕಾಂಗ್ರೆಸ್ ಪಕ್ಷ ಎಂದು ತಿಳಿಸಿದರು.
ರಾಜ್ಯದಲ್ಲಿ 1.17 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮೀ
ಗೃಹಲಕ್ಮೀ ಯೋಜನೆ ವಿಜಯಪುರ ಜಿಲ್ಲೆಯಲ್ಲಿಯೇ ಅತ್ಯಂತ ಯಶಸ್ವಿಯಾಗಿದೆ ಎಂಬ ಬಗ್ಗೆ ಪ್ರತಿಕ್ರಿಯೆ ನೀಡಿ ಎಲ್ಲಿ ಹೆಚ್ಚು ನೋಂದಣಿಯಾಗಿದೆಯೋ ಅಲ್ಲಿ ಹೆಚ್ಚಾಗಿರುತ್ತದೆ. ರಾಜ್ಯದಲ್ಲಿ 1.17 ಕೋಟಿ ಮಹಿಳೆಯರಿಗೆ ಡಿಬಿಟಿ ಮೂಲಕ ಹಣ ವರ್ಗಾವಣೆಯಾಗುತ್ತಿದೆ. ವಿಜಯಪುರ ದೊಡ್ಡ ಜಿಲ್ಲೆಯಾಗಿದ್ದು ಇಲ್ಲಿ ಹೆಚ್ಚಾಗಿದೆ ಎಂದರು.