SUDDIKSHANA KANNADA NEWS/ DAVANAGERE/ DATE:07-02-2024
ದಾವಣಗೆರೆ: ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದಿಂದ ದೂರವುಳಿದಿದ್ದ ಹಿರಿಯ ಮುಖಂಡರು ಮತ್ತೆ ಮುನ್ನೆಲೆಗೆ ಬರುತ್ತಿದ್ದಾರೆ. ಬಿಜೆಪಿ ಜಿಲ್ಲಾಧ್ಯಕ್ಷರಾಗಿ, ಜಗಳೂರು ಶಾಸಕರಾಗಿದ್ದ ಗುರುಸಿದ್ದನಗೌಡರು ಹಾಗೂ ಅವರ ಪುತ್ರರೂ ಆದ ಆರೈಕೆ ಆಸ್ಪತ್ರೆಯ ಮುಖ್ಯಸ್ಥ ಡಾ. ರವಿಕುಮಾರ್ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಆತ್ಮೀಯವಾಗಿ ಪಕ್ಷಕ್ಕೆ ಬರಮಾಡಿಕೊಂಡರು.
ಮಾತ್ರವಲ್ಲ, ಮಾಜಿ ಶಾಸಕರಾದ ಗುರುಸಿದ್ದನಗೌಡರಿಗೆ ವಿಜಯೇಂದ್ರ ಅವರು ಗೌರವ ನೀಡಿದರಲ್ಲದೇ, ಪಕ್ಷಕ್ಕೆ ನೀಡಿದ್ದ ಕೊಡುಗೆ ನೆನಪು ಮಾಡಿಕೊಂಡರು. ರವಿಕುಮಾರ್ ಅವರ ಕಾರ್ಯವೈಖರಿಗೂ ಪ್ರಶಂಸೆ ವ್ಯಕ್ತಪಡಿಸಿದರು.
ಜಿಲ್ಲೆಯಾದ್ಯಂತ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ ಜನಪ್ರಿಯರಾಗಿರುವ ರವಿಕುಮಾರ್ ಅವರ ಆರೋಗ್ಯ ದಾಸೋಹಕ್ಕೆ ರಾಜ್ಯಪಾಲರ ಗೆಹ್ಲೋಟ್ ಅವರು ಪ್ರಶಂಸಿಸಿದ್ದರು. ಮೆಚ್ಚುಗೆ ವ್ಯಕ್ತಪಡಿಸಿದ್ದರು. ಗುರುಸಿದ್ದನಗೌಡರು ಬಿಜೆಪಿ ಹಿರಿಯ ನಾಯಕರು. ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿ ಕಟ್ಟಲು ಮಾಜಿ ಸಚಿವ ಎಸ್. ಎ. ರವೀಂದ್ರನಾಥ್ ಅವರ ಜೊತೆ ದುಡಿದಿದ್ದವರು. ಜಗಳೂರು ಕ್ಷೇತ್ರದಲ್ಲಿ ಶಾಸಕರಾಗಿ ಜನರ ಪ್ರೀತಿ ಸಂಪಾದನೆ ಮಾಡಿದವರು. ಆದ್ರೆ, ಕೆಲವೊಂದು ಕಾರಣಕ್ಕೆ ಈ ಹಿಂದೆ ಇದ್ದ ಬಿಜೆಪಿ ಜಿಲ್ಲಾ ಘಟಕವು ಗುರುಸಿದ್ದನಗೌಡರನ್ನು ಪಕ್ಷದಿಂದ ಉಚ್ಚಾಟಿಸಿತ್ತು. ಆದ್ರೆ, ಈಗ ರಾಜ್ಯ ಘಟಕದ ಅಧ್ಯಕ್ಷರ ಸಮ್ಮುಖದಲ್ಲಿ ಮತ್ತೆ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದು, ರೇಣುಕಾಚಾರ್ಯರ ಟೀಂನ ಬಲ ಮತ್ತಷ್ಟು ಹೆಚ್ಚಿಸಿದೆ.
ಗುರುಸಿದ್ದನಗೌಡರು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ಜಿಲ್ಲೆಯ ಮೂಲೆ ಮೂಲೆಗೆ ಓಡಾಡಿದವರು. ಎಲ್ಲಾ ನಾಯಕರ ಸಂಪರ್ಕದಲ್ಲಿದ್ದವರು. ಕಾರ್ಯವೈಖರಿ ಮೂಲಕ ಗಮನ ಸೆಳೆದವರು. ಈಗ ರವಿಕುಮಾರ್ ಸಹ ಪಕ್ಷಕ್ಕಾಗಿ ಕೆಲಸ ಮಾಡುತ್ತಿದ್ದಾರೆ. ಅಪ್ಪ- ಮಗ ಬಿಜೆಪಿಗೆ ಸೇರ್ಪಡೆಯಾಗಿರುವುದರಿಂದ ಜಿಲ್ಲೆಯಲ್ಲಿ ಮತ್ತೆ ಬಿಜೆಪಿ ಘರ್ ವಾಪ್ಸಿ ಶುರುವಾಗಿದೆ. ಮಾಡಾಳ್ ಮಲ್ಲಿಕಾರ್ಜುನ್ ಅವರು ಚನ್ನಗಿರಿ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷೇತರರಾಗಿ ಕಣಕ್ಕಿಳಿದಿದ್ದ ಕಾರಣಕ್ಕೆ ಆರು ವರ್ಷಗಳ ಕಾಲ ಪಕ್ಷದಿಂದ ಉಚ್ಚಾಟನೆ ಮಾಡಲಾಗಿತ್ತು. ಈಗ ಮಾಡಾಳ್ ಮಲ್ಲಿಕಾರ್ಜುನ್, ಗುರುಸಿದ್ದನಗೌಡರು, ಡಾ. ರವಿಕುಮಾರ್, ಮಾಡಾಳ್ ವಿರೂಪಾಕ್ಷಪ್ಪ ಅವರು ಬೆಂಗಳೂರಿನ ಬಿಜೆಪಿ ಕಾರ್ಯಾಲಯದಲ್ಲಿ ವಿಜಯೇಂದ್ರ ಸಮ್ಮುಖದಲ್ಲಿ ಬಿಜೆಪಿಗೆ ಮರಳಿದ್ದಾರೆ.
ಬಿಜೆಪಿ ರಾಜ್ಯ ಕಛೇರಿ ಜಗನ್ನಾಥ ಭವನದಲ್ಲಿ ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಶಾಸಕರಾದ ಗುರುಸಿದ್ದನಗೌಡ್ರು, ಡಾ. ರವಿಕುಮಾರ್, ಮಾಡಾಳ್ ಮಲ್ಲಿಕಾರ್ಜುನ್ ಮತ್ತು ಡಾ. ರವಿಕುಮಾರ್ ಅವರು ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ಅವರು ಆತ್ಮೀಯವಾಗಿ ಪಕ್ಷಕ್ಕೆ ಮರು ಸೇರ್ಪಡೆ ಮಾಡಿಕೊಂಡರು. ಯುವ ಮೋರ್ಚಾ ರಾಜ್ಯ ಅಧ್ಯಕ್ಷರಾದ ಧೀರಜ್ ಮುನಿರಾಜ್ ಇವರ ನೇತೃತ್ವದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ನಾಯಕರನ್ನು ವಿಜಯೇಂದ್ರ ಅಭಿನಂದಿಸಿದರು.
ಸಮಾರಂಭದಲ್ಲಿ ಮಾತನಾಡಿದ ಮಾಡಾಳ್ ಮಲ್ಲಿಕಾರ್ಜುನ್ ಅವರು, ಬಿಜೆಪಿ ಪಕ್ಷಕ್ಕೆ ಮರಳಿ ಬಂದಿರುವುದು ತುಂಬಾನೇ ಖುಷಿ ಕೊಟ್ಟಿದೆ. ಗುರುಸಿದ್ದನಗೌಡರು, ಡಾ. ರವಿಕುಮಾರ್ ಸೇರಿದಂತೆ ಹಲವರು ಕೆಲ ಕಾರಣಗಳಿಂದ ದೂರ ಉಳಿದಿದ್ದೆವು. ಗುರುಸಿದ್ದನಗೌಡರು ಜಿಲ್ಲೆಯಲ್ಲಿ ಎಸ್. ಎ. ರವೀಂದ್ರನಾಥ್ ಅವರ ಜೊತೆ ಪಕ್ಷ ಕಟ್ಟಿದ ನಾಯಕರು. ಡಾ. ರವಿಕುಮಾರ್ ಅವರೂ ಸಹ ಆರೋಗ್ಯ ದಾಸೋಹ ಮೂಲಕ ಗಮನ ಸೆಳೆದಿದ್ದಾರೆ. ವಿಜಯೇಂದ್ರ ಅವರ ನೇತೃತ್ವದಲ್ಲಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ
ಸ್ಥಾನಗಳನ್ನು ಗೆಲ್ಲೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವರೂ ಆದ ಹಿರಿಯರಾದ ಎಸ್. ಎ. ರವೀಂದ್ರನಾಥ್, ಮಾಜಿ ಶಾಸಕರು ಮಾಡಾಳ್ ವಿರುಪಾಕ್ಷಪ್ಪ, ಬಸವರಾಜ್ ನಾಯ್ಕ್, ಎಂ. ಪಿ. ರೇಣುಕಾಚಾರ್ಯ, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.