SUDDIKSHANA KANNADA NEWS/ DAVANAGERE/ DATE:30-01-2025
ಬೆಂಗಳೂರು: ರಾಜ್ಯದಲ್ಲಿ ದಿನನಿತ್ಯ ಮೈಕ್ರೊ ಫೈನಾನ್ಸ್ ಕಂಪನಿಗಳ ಕಿರುಕುಳಕ್ಕೆ ಬಡವರು ಬಲಿಯಾಗುತ್ತಿದ್ದರೂ ಭ್ರಷ್ಟ ಕಾಂಗ್ರೆಸ್ ಸರ್ಕಾರ ಲಜ್ಜೆಬಿಟ್ಟು ಕೂತು “ಯಮಕೇಕೆ” ಹಾಕುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕವು ಟ್ವೀಟ್ ನಲ್ಲಿ ಕಿಡಿಕಾರಿದೆ.
ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಕ್ಷೇತ್ರ ಕೊರಟಗೆರೆಯಲ್ಲಿಯೇ ಫೈನಾನ್ಸ್ ಕಂಪನಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದರೆ, ಮಂಡ್ಯದಲ್ಲಿ ಮಹಿಳೆಯೊಬ್ಬರು ನೇಣಿಗೆ ಶರಣಾಗಿದ್ದಾರೆ. ರಾಜ್ಯದಲ್ಲಿ ಒಂದಿಲ್ಲೊಂದು ಕಾರಣದಿಂದ ಬಡವರು, ರೈತರು, ಮಹಿಳೆಯರು, ಬಾಣಂತಿಯರು ಬಲಿಯಾಗುತ್ತಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಇದು “ಯಮ ಕಾಣಿಕೆ” ಎಂದು ಮೌನವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ನಕಲಿ ಗಾಂಧಿ ಕುಟುಂಬವನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆಗೆ ಕನ್ನ ಹಾಕಿ ಕೇರಳಕ್ಕೆ ಫಂಡಿಂಗ್ ಮಾಡುವ ಭ್ರಷ್ಟ ಸಿದ್ದರಾಮಯ್ಯ ಅವರೇ, ಕಾಸರಗೋಡಿನಲ್ಲಿ ಕನ್ನಡಿಗ ಸಿಬ್ಬಂದಿ ನೇಮಕಕ್ಕೆ ಕತ್ತರಿ ಹಾಕಲು ಕೇರಳ ಸರ್ಕಾರ ಆದೇಶ
ಹೊರಡಿಸಿದೆ ನೋಡಿ. ಕನ್ನಡಿಗರ ಮೇಲೆ ಪಿಣರಾಯಿ ವಿಜಯನ್ ಸರ್ಕಾರ ದಬ್ಬಾಳಿಕೆ ನಡೆಸುವುದನ್ನು ಮತ್ತೆ ಮುಂದುವರೆಸಿದೆ. ಕನ್ನಡಿಗರಿಂದ ಕನ್ನಡಿಗರಿಗೆ ಸಿಗುತ್ತಿದ್ದ ಸೌಲಭ್ಯ, ಉದ್ಯೋಗವನ್ನು ಕಸಿದುಕೊಳ್ಳಲು ಮತ್ತೊಂದು ಹೆಜ್ಜೆ ಮುಂದೆ ಹೋಗಿದೆ
ಎಂದು ಹೇಳಿದೆ.
ಕೇರಳದಲ್ಲಿ ಆನೆ ತುಳಿತಕ್ಕೆ ಒಳಗಾದವರಿಗೆ ಫಂಡಿಂಗ್ ಮಾಡುವುದು, ನೂರು ಮನೆ ಕಟ್ಟಿಸಿಕೊಡಲು ಫಂಡಿಂಗ್ ಮಾಡುತ್ತೇನೆ ಎಂದು ಪತ್ರ ಬರೆಯುವ ಕಾಂಗ್ರೆಸ್ ಸರ್ಕಾರ, ಇದೀಗ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಏಕೆ ಧ್ವನಿ ಎತ್ತುತ್ತಿಲ್ಲ? ಎಂದು ಪ್ರಶ್ನಿಸಿದೆ.
ಬ್ರೇಕ್ ಫಾಸ್ಟು, ಲಂಚು, ಡಿನ್ನರ್ರೂ ಮಿಟ್ಟಿಂಗ್ ಮಾಡುವುದರಲ್ಲೇ ಆಸಕ್ತಿ ಹೊಂದಿರುವ ಆಕಸ್ಮಿಕ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಕಾರಣದಿಂದಲೇ ರಾಜ್ಯದಲ್ಲಿ ಸಂಪೂರ್ಣವಾಗಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.
ಗಾಂಜಾ, ಡ್ರಗ್ಸ್ ಸೇವಕರ ಸಂಖ್ಯೆ ಹೆಚ್ಚಾಗಿ ರಾಜ್ಯದಲ್ಲಿ ಹಾಡಹಗಲೇ ಸಾರ್ವಜನಿಕರ ಮೇಲೆ ಪುಡಿ ರೌಡಿಗಳು ಮಚ್ಚು ಬೀಸುತ್ತಿದ್ದಾರೆ. ಮತಾಂಧರಿಗೆ ಅಮಾಯಕರ ಪಟ್ಟ ಕಟ್ಟಿರುವ ಪರಮೇಶ್ವರ್ ಅವರು, ಕೊತ್ವಾಲ್ ಶಿಷ್ಯಂದಿರಿಗೆ ಮಾನಸಿಕ ಅಸ್ವಸ್ಥ ಪಟ್ಟ ಕಟ್ಟಿದ್ದಾರೆ. ಕಾಂಗ್ರೆಸ್ ಸರ್ಕಾರ ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕವನ್ನು ಗೂಂಡಾ ರಾಜ್ಯವನ್ನಾಗಿ ಬದಲಾಯಿಸಿದೆ ಎಂದು ಆರೋಪಿಸಿದೆ.