ಆರಾ (ಬಿಹಾರ): ಬಿಹಾರದ ಭೋಜಪುರ ಜಿಲ್ಲೆಯ ಆರಾ ಮೂಲದ 19 ವರ್ಷದ ಯುವತಿಯೊಬ್ಬರು ಚಲಿಸುತ್ತಿದ್ದ ಆಟೋರಿಕ್ಷಾದಿಂದ ಜಿಗಿದು ಚಾಲಕನ ಲೈಂಗಿಕ ಕಿರುಕುಳದಿಂದ ಪಾರಾಗಿರುವ ಘಟನೆ ನಡೆದಿದೆ.
ಗಣಕಯಂತ್ರ (ಕಂಪ್ಯೂಟರ್) ತರಬೇತಿ ತರಗತಿ ಮುಗಿಸಿ ಸಂಜೆ ಮನೆಗೆ ಹಿಂತಿರುಗುತ್ತಿದ್ದಾಗ ಆಟೋ ಚಾಲಕ ಆಕೆಯೊಂದಿಗೆ ಅಸಭ್ಯವಾಗಿ ವರ್ತಿಸಲು ಪ್ರಾರಂಭಿಸಿದ್ದಾನೆ. ಯುವತಿ ಇದನ್ನು ತೀವ್ರವಾಗಿ ವಿರೋಧಿಸಿ, ವಾಹನವನ್ನು ನಿಲ್ಲಿಸುವಂತೆ ವಿನಂತಿಸಿಕೊಂಡರೂ, ಚಾಲಕ ಆಟೋ ವೇಗವನ್ನು ಹೆಚ್ಚಿಸಿದ್ದಾನೆ. ಇದರಿಂದ ಹೆದರಿದ ಯುವತಿ ಅಪಾಯವನ್ನು ಲೆಕ್ಕಿಸದೆ ಚಲಿಸುವ ಆಟೋದಿಂದ ಕೆಳಗೆ ಜಿಗಿದಿದ್ದಾಳೆ.
ಈ ಘಟನೆಯಲ್ಲಿ ಯುವತಿಯ ತಲೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ತಕ್ಷಣವೇ ಕುಟುಂಬಸ್ಥರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ಸ್ಥಳಕ್ಕಾಗಮಿಸಿದ ಪೊಲೀಸರು ತಕ್ಷಣ ಕ್ರಮ ಕೈಗೊಂಡು 40 ವರ್ಷದ ಚಾಲಕ ವಿಜಯ್ ಕುಮಾರ್ ಚೌರಾಸಿಯಾ ಅಲಿಯಾಸ್ ಮಸ್ಟೋ ಎಂಬಾತನನ್ನು ಬಂಧಿಸಿ, ಆಟೋರಿಕ್ಷಾವನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿಯು ಸಂತ್ರಸ್ತೆ ವಾಸಿಸುವ ಗ್ರಾಮದವನೇ ಎಂದು ತಿಳಿದುಬಂದಿದೆ.





Leave a comment