ಹೊಸ ವರ್ಷದ ಸಂದರ್ಭದಲ್ಲಿ ತೆಂಗು ಬೆಳೆಗಾರರಿಗೆ ಕೇಂದ್ರ ಸರ್ಕಾರ ಸಿಹಿಸುದ್ದಿ ನೀಡಿದೆ. ತೆಂಗಿನಕಾಯಿಗೆ ಕನಿಷ್ಠ ಬೆಂಬಲ ಬೆಲೆ (MSP) ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಗಿರಣಿ ಕೊಬ್ಬರಿ (Milling copra) ಕ್ವಿಂಟಾಲ್ ಬೆಲೆ 11,582 ರೂಗೆ ಹಾಗೂ ಬಾಲ್ ಕೊಬ್ಬರಿ (Ball copra) ಕ್ವಿಂಟಾಲ್ ಬೆಲೆ 12,100 ರೂ.ಗೆ ನಿಗದಿಯಾಗಿದೆ. ನಿನ್ನೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇವುಗಳ ಬೆಲೆ 2014ಕ್ಕೆ ಹೋಲಿಸಿ ನೋಡೋದಾದರೆ 2014ರಲ್ಲಿ ಮಿಲ್ಲಿಂಗ್ ಕೋಪ್ರಾ ಕನಿಷ್ಠ ಬೆಂಬಲ ಬೆಲೆ 5250 ರೂಪಾಯಿ ಇತ್ತು. ಇದೀಗ 2025ರಲ್ಲಿ ಕನಿಷ್ಠ ಬೆಂಬಲ ಬೆಲೆ ಶೇಕಡಾ 121 ರಷ್ಟು ಹೆಚ್ಚಳವಾಗಿದೆ.
ಅದೇ ರೀತಿ ಬಾಲ್ ಕೊಬ್ಬರಿ ಬೆಲೆ 2014ರಲ್ಲಿ 5500 ರೂಪಾಯಿ ಇತ್ತು. 2025ರವೇಳೆಗೆ ಕನಿಷ್ಠ ಬೆಂಬಲ ಬೆಲೆಯ ಶೇಕಡಾ 120ರಷ್ಟು ಏರಿಕೆ ಆಗಿದೆ. ತೆಂಗು ಕೃಷಿ ವೆಚ್ಚ ಹೆಚ್ಚಳ ಹಾಗೂ ಕೊಬ್ಬರಿ ಮತ್ತು ತೆಂಗಿನ ಎಣ್ಣೆಯ ಬೇಡಿಕೆಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರ ಈ ನಿರ್ಧಾರಕ್ಕೆ ಬಂದಿದೆ. ಕೇಂದ್ರ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ ಮಾಡಿರುವ ಶಿಫಾರಸುಗಳಿಗೆ ಅನುಗುಣವಾಗಿ ಕನಿಷ್ಠ ಬೆಂಬಲ ಬೆಲೆಯನ್ನು ನಿರ್ಧರಿಸಲಾಗಿದೆ. ಕೇಂದ್ರದ ಈ ನಿರ್ಧಾರದಿಂದ ತೆಂಗು ಹೆಚ್ಚು ಬೆಳೆಯುವ ಕರ್ನಾಟಕ, ಕೇರಳ ಸೇರಿದಂತೆ ದಕ್ಷಿಣದ ಐದು ರಾಜ್ಯಗಳ ರೈತರಿಗೆ ಗುಡ್ನ್ಯೂಸ್ ಸಿಕ್ಕಿದೆ. ಆ ಮೂಲಕ ತೆಂಗು ರೈತರಲ್ಲಿ ಸಂತಸ ಮೂಡಿಸಿದೆ.