
ಭೋಪಾಲ್ (ಮಧ್ಯಪ್ರದೇಶ): ಪತಿ ಜತೆಗಿನ ಗಲಾಟೆಯ ಮನನೊಂದು 37 ವರ್ಷದ ಮಹಿಳೆಯೊಬ್ಬರು ತನ್ನ ಇಬ್ಬರು ಮಕ್ಕಳೊಂದಿಗೆ ವಿಷ ಸೇವಿಸಿ ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದ ಭೋಪಾಲ್‌ನ ಈಂಖೇಡಿ ಪ್ರದೇಶದಲ್ಲಿ ನಡೆದಿದೆ.
ಮನೆಯನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಈ ಕೃತ್ಯ ಎಸಗಲಾಗಿದ್ದು, ತಾಯಿ ಹಾಗೂ ಇಬ್ಬರು ಮಕ್ಕಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತರನ್ನು 37 ವರ್ಷದ ರುಕ್ಸಾನಾ ಹಾಗೂ ಅವರ 8 ವರ್ಷದ ಗಂಡು ಮಗು ಮತ್ತು 12 ವರ್ಷದ ಹೆಣ್ಣು ಮಗು ಎಂದು ಗುರುತಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಪತಿ ಜತೆ ಮಾತಿಗೆ ಮಾತು ಬೆಳೆದು ತೀವ್ರ ಜಗಳ ನಡೆದ ಬಳಿಕ ಮಹಿಳೆ ಈ ನಿರ್ಧಾರಕ್ಕೆ ಬಂದಿದ್ದಾಳೆ ಪೊಲೀಸರು ತಿಳಿಸಿದ್ದಾರೆ.
ಮೇಲ್ಛಾವಣಿ ಮೂಲಕ ಪ್ರವೇಶ: ಪತಿಯ ಜತೆ ಜಗಳವಾದ ಬಳಿಕ ರುಕ್ಸಾನಾ ಮನೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿಕೊಂಡಿದ್ದರು. ಒಳಗೆ ಮಕ್ಕಳ ಅಳು ಹಾಗೂ ಕಿರುಚಾಟ ಕೇಳಿದ ಕೂಡಲೇ ನೆರೆಹೊರೆಯವರು ದೌಡಾಯಿಸಿ ಬಂದರಾದರೂ ಬಾಗಿಲು ತೆರೆಯಲು ಸಾಧ್ಯವಾಗಲಿಲ್ಲ. ಕೊನೆಗೆ ಸಾಹಸ ಮಾಡಿ ಮೇಲ್ಛಾವಣಿಯ ಮೂಲಕ ಮನೆಗೆ ನುಗ್ಗಿದ ಸ್ಥಳೀಯರು ಬಾಗಿಲು ತೆರೆದಿದ್ದಾರೆ.
ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಸಾವು: ಕೂಡಲೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೂವರನ್ನು ತರಾತುರಿಯಲ್ಲಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಆಸ್ಪತ್ರೆಗೆ ತಲುಪುವಷ್ಟರಲ್ಲಿ ತಾಯಿ ಹಾಗೂ ಇಬ್ಬರು ಮಕ್ಕಳು ಮೃತಪಟ್ಟಿರುವುದಾಗಿ ವೈದ್ಯರು ಧಢಪಡಿಸಿದ್ದಾರೆ.
ಪೊಲೀಸರಿಂದ ತನಿಖೆ ಆರಂಭ: ಈಂಖೇಡಿ ಪೊಲೀಸ್ ಠಾಣೆಯ ಪ್ರಭಾರಿ ಆಶಿಶ್ ಸಪ್ರೆ ನೀಡಿರುವ ಮಾಹಿತಿಯಂತೆ, ಪತಿ-ಪತ್ನಿ ನಡುವಿನ ಕೌಟುಂಬಿಕ ಕಲಹವೇ ಈ ದುರ್ಘಟನೆಗೆ ಕಾರಣ ಎಂಬ ಶಂಕೆ ವ್ಯಕ್ತಪಡಿಸಲಾಗಿದೆ. ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದು, ಕುಟುಂಬಸ್ಥರ ಹೇಳಿಕೆಗಳನ್ನು ದಾಖಲಿಸಿಕೊಂಡು ಸಮಗ್ರ ತನಿಖೆ ಮುಂದುವರಿಸಿದ್ದಾರೆ.




