Home ಕ್ರೈಂ ನ್ಯೂಸ್ ಇಬ್ಬರು ಪ್ರಿಯಕರರೊಂದಿಗೆ ಸೇರಿ ಪತಿಯ ಹತ್ಯೆಗೆ ಪತ್ನಿ ಸಂಚು: ಬಂದೂಕು ಖರೀದಿಸಲು ಮಾಂಗಲ್ಯ ಸರವನ್ನೇ ಅಡವಿಟ್ಟ ಕಿರಾತಕಿ!
ಕ್ರೈಂ ನ್ಯೂಸ್ದಾವಣಗೆರೆನವದೆಹಲಿಬೆಂಗಳೂರು

ಇಬ್ಬರು ಪ್ರಿಯಕರರೊಂದಿಗೆ ಸೇರಿ ಪತಿಯ ಹತ್ಯೆಗೆ ಪತ್ನಿ ಸಂಚು: ಬಂದೂಕು ಖರೀದಿಸಲು ಮಾಂಗಲ್ಯ ಸರವನ್ನೇ ಅಡವಿಟ್ಟ ಕಿರಾತಕಿ!

Share
ಪತ್ನಿ
Share

ಸುಬರ್ಣಪುರ (ಒಡಿಶಾ):ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು ಮುಗಿಸಲು ಪತ್ನಿಯೇ ತನ್ನ ಇಬ್ಬರು ಪ್ರಿಯಕರರೊಂದಿಗೆ ಸೇರಿ ಭೀಕರ ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಒಡಿಶಾದ ಸುಬರ್ಣಪುರ ಜಿಲ್ಲೆಯಲ್ಲಿ ನಡೆದಿದೆ.

ಹತ್ಯೆಗೆ ಬಳಸಲಾದ ನಾಡಬಂದೂಕು ಖರೀದಿಸಲು ಆರೋಪಿ ಪತ್ನಿ ತನ್ನ ಚಿನ್ನದ ಮಾಂಗಲ್ಯ ಸರವನ್ನೇ ಅಡವಿಟ್ಟಿದ್ದಾಳೆ ಎಂಬ ಬೆಚ್ಚಿಬೀಳಿಸುವ ಸಂಗತಿ ಪೊಲೀಸ್ ತನಿಖೆಯಿಂದ ಬಯಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ನಿ ಹಾಗೂ ಆಕೆಯ ಇಬ್ಬರು ಪ್ರಿಯಕರರನ್ನು ಒಡಿಶಾ ಪೊಲೀಸರು ಬಂಧಿಸಿದ್ದಾರೆ.

ಮೃತ ದುರ್ದೈವಿಯನ್ನು ಬ್ರಹ್ಮಣಿಪಾಲಿ ಗ್ರಾಮದ ಸುದಾಮ್ ನಾಗ್ (42) ಎಂದು ಗುರುತಿಸಲಾಗಿದೆ. ಸುದಾಮ್ ಪತ್ನಿ ಕವಿತಾ ನಾಗ್‌ಗೆ ಕಳೆದ ಒಂದು ವರ್ಷದಿಂದ ತ್ರಿಲೋಚನ್ ಬಾಗ್ (ಅಲಿಯಾಸ್ ಟಿಂಕು) ಎಂಬಾತನೊಂದಿಗೆ ಅನೈತಿಕ ಸಂಬಂಧವಿತ್ತು. ಅಲ್ಲದೆ, ಮತ್ತೊಬ್ಬ ಆರೋಪಿ ಯುವರಾಜ್ ಸಾಹು (42) ಎಂಬಾತನೊಂದಿಗೂ ಕಳೆದ ಸುಮಾರು 12 ವರ್ಷಗಳಿಂದ ಕವಿತಾ ಸಂಬಂಧ ಹೊಂದಿದ್ದಳು ಎನ್ನಲಾಗಿದೆ.

ಪತ್ನಿಯ ಈ ಅನೈತಿಕ ಸಂಬಂಧಕ್ಕೆ ಪತಿ ಸುದಾಮ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ, ಮನೆಗೆ ಬರದಂತೆ ಮತ್ತು ಸಂಪರ್ಕ ಇಟ್ಟುಕೊಳ್ಳದಂತೆ ತ್ರಿಲೋಚನ್‌ಗೆ ಎಚ್ಚರಿಕೆ ನೀಡಿದ್ದರು. ಇದೇ ಕಾರಣಕ್ಕೆ ಮೂವರೂ ಸೇರಿ ಸುದಾಮ್ ಹತ್ಯೆಗೆ ಸಂಚು ರೂಪಿಸಿದ್ದರು.

ಬಂದೂಕು ಖರೀದಿಗೆ ಮಾಂಗಲ್ಯ ಅಡಮಾನ: ಹತ್ಯೆಗೆ ಆಯುಧ ಹೊಂದಿಸಲು ಕವಿತಾ ತನ್ನ ಚಿನ್ನದ ಮಾಂಗಲ್ಯ ಸರವನ್ನು ತ್ರಿಲೋಚನ್‌ಗೆ ನೀಡಿದ್ದಳು. ಆತ ಸ್ಥಳೀಯ ಅಕ್ಕಸಾಲಿಗರ ಬಳಿ ಮಾಂಗಲ್ಯವನ್ನು ಅಡವಿಟ್ಟು 45,000 ರೂ. ಹಣ ಪಡೆದಿದ್ದನು. ಈ ಹಣದ ಜೊತೆಗೆ ಹೆಚ್ಚುವರಿ ನಗದು ಮತ್ತು ಫೋನ್‌ಪೇ ಮೂಲಕ ಹಣ ಪಾವತಿಸಿ ರೂರ್ಕೆಲಾದ ವ್ಯಕ್ತಿಯೊಬ್ಬನಿಂದ ನಾಡಬಂದೂಕು ಮತ್ತು ಮದ್ದುಗುಂಡುಗಳನ್ನು ಖರೀದಿಸಲಾಗಿತ್ತು.

ಲೊಕೇಶನ್ ಟ್ರ್ಯಾಕ್ ಮಾಡಿ ಗುಂಡಿನ ದಾಳಿ: ನವೆಂಬರ್ 17ರ ಸಂಜೆ ಸುದಾಮ್ ಡುಂಗುರಿಪಾಲಿಯ ಗ್ಯಾರೇಜ್‌ನಿಂದ ದುರಸ್ತಿಯಾಗಿದ್ದ ತಮ್ಮ ಬೈಕ್ ತೆಗೆದುಕೊಂಡು ಮರಳುತ್ತಿದ್ದರು. ಈ ವೇಳೆ ಯುವರಾಜ್ ಕರೆಗಳ ಮೂಲಕ ಸುದಾಮ್ ಚಲನವಲನಗಳ ಮೇಲೆ ನಿಗಾ ಇಟ್ಟು ಕವಿತಾಗೆ ಮಾಹಿತಿ ನೀಡುತ್ತಿದ್ದನು. ಕವಿತಾ ವಾಟ್ಸಾಪ್ ಕರೆಗಳ ಮೂಲಕ ತ್ರಿಲೋಚನ್‌ಗೆ ಪತಿಯ ಲೊಕೇಶನ್ ಅಪ್‌ಡೇಟ್ ಮಾಡಿದ್ದಳು. ಪಂಕೆಲ್ ಚೌಕದ ಬಳಿ ಸುದಾಮ್ ಬೈಕ್ ಅಡ್ಡಗಟ್ಟಿದ ತ್ರಿಲೋಚನ್, ಮೊದಲು ಎರಡು ಸುತ್ತು ಗುಂಡು ಹಾರಿಸಿ, ಸುದಾಮ್ ನೆಲಕ್ಕೆ ಬಿದ್ದ ನಂತರ ಹತ್ತಿರದಿಂದ ಮತ್ತೆರಡು ಗುಂಡು ಹಾರಿಸಿ ಸ್ಥಳದಲ್ಲೇ ಹತ್ಯೆ ಮಾಡಿದ್ದಾನೆ.

ಪೊಲೀಸರ ದಾರಿ ತಪ್ಪಿಸಲು ನಾಟಕ: ಹತ್ಯೆಯ ಬಳಿಕ ಏನೂ ಅರಿಯದವಳಂತೆ ನಟಿಸಿದ ಕವಿತಾ, ಯಾರೋ ಅಪರಿಚಿತರು ತನ್ನ ಪತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ತಾಂತ್ರಿಕ ಸಾಕ್ಷ್ಯಗಳು ಮತ್ತು ಸಾಕ್ಷಿದಾರರ ಹೇಳಿಕೆಗಳ ಆಧಾರದ ಮೇಲೆ ತ್ರಿಲೋಚನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಇಡೀ ಸಂಚು ಬಯಲಾಗಿದೆ.

ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಕೃತ್ಯಕ್ಕೆ ಬಳಸಲಾದ ನಾಡಬಂದೂಕು, ನಾಲ್ಕು ಖಾಲಿ ಕಾಟ್ರಿಡ್ಜ್‌ಗಳು, ಮೃತ ಸುದಾಮ್ ಮೊಬೈಲ್ ಸೇರಿದಂತೆ ಆರು ಮೊಬೈಲ್ ಫೋನ್‌ಗಳು ಹಾಗೂ ಎರಡು ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

Share