Home ದಾವಣಗೆರೆ 24ನೇ ವಯಸ್ಸಿಗೆ ವಿಧವೆಯಾದ ಸೊಸೆ: ರೆಸಾರ್ಟ್‌ನಲ್ಲಿ ಅದ್ಧೂರಿ ಮದುವೆ ಮಾಡಿ, ಕನ್ಯಾದಾನ ನೆರವೇರಿಸಿದ ಮಾವನ ಮಾನವೀಯತೆಯ ಕಥೆ!
ದಾವಣಗೆರೆನವದೆಹಲಿಬೆಂಗಳೂರು

24ನೇ ವಯಸ್ಸಿಗೆ ವಿಧವೆಯಾದ ಸೊಸೆ: ರೆಸಾರ್ಟ್‌ನಲ್ಲಿ ಅದ್ಧೂರಿ ಮದುವೆ ಮಾಡಿ, ಕನ್ಯಾದಾನ ನೆರವೇರಿಸಿದ ಮಾವನ ಮಾನವೀಯತೆಯ ಕಥೆ!

Share
ಮದುವೆ
Share

ಭೋಪಾಲ್: ಇಂದಿನ ಸಮಾಜದಲ್ಲಿ ಸೊಸೆಯ ಮೇಲಿನ ದೌರ್ಜನ್ಯ, ಕಿರುಕುಳ, ಅಥವಾ ಮಗ ಸತ್ತರೆ ಸೊಸೆಯನ್ನೇ ದೂಷಿಸುವ ಸುದ್ದಿಗಳೇ ಹೆಚ್ಚಾಗಿ ಕೇಳಿಬರುತ್ತವೆ. ಆದರೆ ಮಧ್ಯಪ್ರದೇಶದ ಭೋಪಾಲ್‌ನಲ್ಲಿ ನಡೆದ ಈ ಘಟನೆ ಸಮಾಜಕ್ಕೆ ಹೊಸ ಮತ್ತು ಅತ್ಯಂತ ಮಾನವೀಯ ಸಂದೇಶವೊಂದನ್ನು ನೀಡಿದೆ. ಮಗನನ್ನು ಕಳೆದುಕೊಂಡ ದುಃಖದ ನಡುವೆಯೂ ಮಾವನೊಬ್ಬರು ತನ್ನ ಸೊಸೆಯನ್ನು ಮಗಳಂತೆ ಭಾವಿಸಿ ಮರುಮದುವೆ ಮಾಡುವ ಮೂಲಕ ಮಾದರಿಯಾಗಿದ್ದಾರೆ.

ಕ್ಯಾನ್ಸರ್‌ಗೆ ಬಲಿಯಾಗಿದ್ದ ಪತಿ:

2018ರಲ್ಲಿ ಕೇವಲ 19ನೇ ವಯಸ್ಸಿನಲ್ಲಿ ಪ್ರಿಯಾಂಕಾ, ಜೈತಾಲ್ ಗ್ರಾಮದ ಕಪಿಲ್ ಬೈರಾಗಿಯನ್ನು ವಿವಾಹವಾಗಿದ್ದರು. ಅವರ ದಾಂಪತ್ಯ ಜೀವನ ಸಂತೋಷದಿಂದ ಸಾಗುತ್ತಿತ್ತು. ಆದರೆ ವಿಧಿಯಾಟ ಬೇರೆ ಇತ್ತು. ಭೀಕರ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದ ಕಪಿಲ್, ಸುಮಾರು ಒಂದು ವರ್ಷದ ಕಾಲ ಕಠಿಣ ಚಿಕಿತ್ಸೆ ಪಡೆದರೂ ಫಲಕಾರಿಯಾಗದೇ 2023ರಲ್ಲಿ ಕೊನೆಯುಸಿರೆಳೆದರು. ಇದರಿಂದಾಗಿ ಕೇವಲ 24ನೇ ವಯಸ್ಸಿನಲ್ಲೇ ಪ್ರಿಯಾಂಕಾ ವಿಧವೆಯಾಗಬೇಕಾಯಿತು.

ಮಗಳಾಗಿ ಬೀಳ್ಕೊಟ್ಟ ಮಾವ:

ಮಗನನ್ನು ಕಳೆದುಕೊಂಡ ತೀವ್ರ ನೋವಿನಲ್ಲಿದ್ದ ಮಾವ ದಿನೇಶ್ ಬೈರಾಗಿ, ಸಮಾಜದ ರೂಢಿಗತ ಪದ್ಧತಿಗಳಂತೆ ಸೊಸೆಯನ್ನು ಮೂಲೆಗುಂಪು ಮಾಡುವ ಅಥವಾ ದೂರ ತಳ್ಳುವ ಕೆಲಸ ಮಾಡಲಿಲ್ಲ. ಬದಲಿಗೆ, “ಅವಳನ್ನು ನಾನು ಸೊಸೆಯಾಗಿ ಮನೆಗೆ ಕರೆತಂದಿದ್ದೆ… ಆದರೆ ಈಗ ನನ್ನ ಸ್ವಂತ ಮಗಳಾಗಿ ಘನತೆಯಿಂದ ಹೊಸ ಮನೆಗೆ ಕಳುಹಿಸಿಕೊಡುತ್ತೇನೆ” ಎಂದು ದೃಢ ಸಂಕಲ್ಪ ಮಾಡಿದರು.

ರೆಸಾರ್ಟ್‌ನಲ್ಲಿ ಅದ್ಧೂರಿ ವಿವಾಹ, ಕನ್ಯಾದಾನ:

ಅಂದುಕೊಂಡಂತೆ ದಿನೇಶ್ ಬೈರಾಗಿ ಅವರು ಸುಮಾರು ಎರಡು ವರ್ಷಗಳ ಕಾಲ ಪ್ರಿಯಾಂಕಾಳಿಗೆ ಸೂಕ್ತ ಬಾಳ ಸಂಗಾತಿಗಾಗಿ ಹುಡುಕಾಟ ನಡೆಸಿದರು. ಅನೇಕ ಕುಟುಂಬಗಳನ್ನು ಭೇಟಿಯಾಗಿ ಪರಿಶೀಲಿಸಿದ ಬಳಿಕ ಗೋವಿಂದ್ ಎಂಬ ಯುವಕ ಹಾಗೂ ಅವರ ಕುಟುಂಬವನ್ನು ಆಯ್ಕೆ ಮಾಡಿದರು. ಎರಡೂ ಕುಟುಂಬಗಳ ಒಪ್ಪಿಗೆಯೊಂದಿಗೆ ಮದುವೆ ನಿಶ್ಚಯವಾಯಿತು.

ಇತ್ತೀಚೆಗೆ ಭೋಪಾಲ್‌ನ ಐಷಾರಾಮಿ ರೆಸಾರ್ಟ್‌ನಲ್ಲಿ ಸುಮಾರು 350 ಅತಿಥಿಗಳ ಸಮ್ಮುಖದಲ್ಲಿ ಈ ಅದ್ಧೂರಿ ವಿವಾಹ ನೆರವೇರಿತು. ವಿಶೇಷವೆಂದರೆ, ಮದುವೆಯ ಸಂಪೂರ್ಣ ವೆಚ್ಚವನ್ನು ಮಾವ ದಿನೇಶ್ ಬೈರಾಗಿಯವರೇ ಭರಿಸಿದ್ದಲ್ಲದೆ, ಸ್ವತಃ ತಂದೆಯ ಸ್ಥಾನದಲ್ಲಿ ನಿಂತು ಕನ್ಯಾದಾನ ಕೂಡ ನೆರವೇರಿಸಿ ಎಲ್ಲರ ಕಣ್ಣಾಲಿಗಳು ಒದ್ದೆಯಾಗುವಂತೆ ಮಾಡಿದರು.

ಈ ಘಟನೆ ಕೇವಲ ಒಂದು ಮದುವೆಯ ಕಥೆಯಲ್ಲ… ಸಂಬಂಧಗಳು ಕೇವಲ ರಕ್ತದಿಂದ ಮಾತ್ರವಲ್ಲ, ಪ್ರೀತಿ, ಕಾಳಜಿ ಮತ್ತು ಮಾನವೀಯತೆಯಿಂದ ಕಟ್ಟಲ್ಪಡುತ್ತವೆ ಎಂಬುದನ್ನು ಸಾಬೀತುಪಡಿಸಿದ ಬದುಕಿನ ದೊಡ್ಡ ಪಾಠವಾಗಿದೆ. ಸಮಾಜದಲ್ಲಿ ಇಂತಹ ವ್ಯಕ್ತಿಗಳು ಹೆಚ್ಚಾದರೆ ಎಷ್ಟೋ ಹೆಣ್ಣುಮಕ್ಕಳ ಬದುಕಿಗೆ ಹೊಸ ಆಶಾಕಿರಣ ಮೂಡುವುದರಲ್ಲಿ ಸಂಶಯವಿಲ್ಲ.

Share

Leave a comment

Leave a Reply

Your email address will not be published. Required fields are marked *