SUDDIKSHANA KANNADA NEWS/ DAVANAGERE/ DATE:10-01-2024
ದಾವಣಗೆರೆ: ಭದ್ರಾ ನದಿ (Bhadra River) ನೀರು ನಮ್ಮ ಹಕ್ಕು. ಭದ್ರಾ ನೀರಾವರಿ ಸಲಹಾ ಸಮಿತಿ ಸಭೆಯ ನಿರ್ಣಯ ರದ್ದುಗೊಳಿಸುವಂತೆ ಆಗ್ರಹಿಸಿ ಭಾರತೀಯ ರೈತ ಒಕ್ಕೂಟದ ರೈತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
Read Also This Story:
ಬಸವಣ್ಣ ಸಾಂಸ್ಕೃತಿಕ ನಾಯಕ, ರಾಯಭಾರಿಯನ್ನಾಗಿಸುವ ವಿಚಾರ: ಕ್ಯಾಬಿನೆಟ್ ನಲ್ಲಿ ಚರ್ಚಿಸಿ ತೀರ್ಮಾನ: ಲಿಂಗಾಯತ ವಿವಿಧ ಮಠಾಧೀಶರಿಗೆ ಸಿಎಂ ಭರವಸೆ
ನಗರದ ಪಿ. ಬಿ. ರಸ್ತೆಯಲ್ಲಿರುವ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಜಮಾವಣೆಗೊಂಡು, ದೇವರಿಗೆ ಪೂಜೆ ಸಲ್ಲಿಸಿ ಮೆರವಣಿಗೆಯ ಮೂಲಕ ಎಸಿ ಕಚೇರಿ ತಲುಪಿದರು. ಅಲ್ಲಿ ಪ್ರತಿಭಟಿಸಿ ಎಸಿ ಅವರ ಮೂಲಕ
ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಭದ್ರಾ ಸೂಪರಿಂಡೆಂಟ್ ಇಂಜಿನಿಯರ್ ಸುಜಾತಾ ಅವರು ಹೊಸ ವೇಳಾಪಟ್ಟಿ ಘೋಷಣೆ ಮಾಡಿದ್ದಾರೆ. ಇದರಿಂದ ಇದು ಒಂದು ರೀತಿಯಲ್ಲಿ ತುಘಲಕ್ ದರ್ಬಾರ್ ಆಗಿದೆ. ಮನಸ್ಸಿಗೆ ಬಂದಂತೆ ನೀರು ವೇಳಾಪಟ್ಟಿಯನ್ನು ಬದಲಾಯಿಸಿದ್ದಾರೆ. ದಾವಣಗೆರೆ ಜಿಲ್ಲೆಯ ರೈತರು ಏನಾದ್ರೂ ಕೇಳಿದ್ರೆ ಕಾನೂನು ಹೇಳುತ್ತಾರೆ. ಹೊಸ ವೇಳಾಪಟ್ಟಿ ಪ್ರಕಾರ ಭದ್ರಾ ಎಡದಂಡೆಗೆ ಅಂದ್ರೆ ಭದ್ರಾವತಿ-ತರಿಕೇರೆ ವಿಭಾಗಕ್ಕೆ ಜನವರಿ 10 ರಿಂದ 16 ದಿನ ನೀರು ಹರಿಸಿ 15 ದಿನ ನಿಲ್ಲಿಸಿ ಒಟ್ಟು 70 ದಿನಗಳ ಕಾಲ ನೀರು ಹರಿಸುವುದು. ಬಲದಂಡೆಗೆ ಅಂದ್ರೆ ದಾವಣಗೆರೆ-ಮಲೆಬೆನ್ನೂರು ವಿಭಾಗಕ್ಕೆ ಜನವರಿ 20ರ ಬದಲು ಜನವರಿ 15 ರಿಂದಲೇ 12 ದಿನ ನೀರು ಹರಿಸಿ, 20 ದಿನ ನಿಲ್ಲಿಸಿ ಒಟ್ಟು 53 ದಿನಗಳ ಕಾಲ ನೀರು ಹರಿಸುವುದು. ಅಂದ್ರೆ ಎಡದಂಡೆಗೆ 70 ದಿನ ಬಲದಂಡೆಗೆ ಕೇವಲ 53 ದಿನ ನೀರು ಹರಿಸುವ ಆದೇಶ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬ ರೀತಿಯಲ್ಲಿ ಇದೆ ಎಂದು ಆರೋಪಿಸಿದರು.
ಹೊಸ ವೇಳಾಪಟ್ಟಿಯಂತೆ ಬಲದಂಡೆಗೆ ಜನವರಿ 15 ರಿಂದ 12 ದಿನ ನೀರು ಹರಿಸುವುದು ಮತ್ತು 20 ದಿನ ನಿಲ್ಲಿಸಿದ್ರೆ, ದಾವಣಗೆರೆ ಜಿಲ್ಲೆಯ ರೈತರಿಗೆ ಬಹಳ ಅನ್ಯಾಯವಾಗುತ್ತದೆ. ಏಕೆಂದರೆ 12 ದಿನ ನೀರು ಹರಿಸಿದ್ರೆ ದಾವಣಗೆರೆ-ಮಲೆಬೆನ್ನೂರು ಭಾಗದ ಜಮೀನುಗಳಿಗೆ ನೀರು ತಲುಪುವುದಿಲ್ಲ. ಅಧಿಕಾರಿಗಳು ಹೇಳುವ ಪ್ರಕಾರ ಪ್ರತಿ ದಿನ ಎಡ ಮತ್ತು ಬಲದಂಡೆಗಳಿಗೆ ನೀರು ಬಿಡಲು 0.29 ಟಿ.ಎಂ.ಸಿ ನೀರು ಬೇಕಾಗುತ್ತದೆ. ಈಗ ಡ್ಯಾಂನಲ್ಲಿ ಬಳಕೆಗೆ ಬಾರದ ಡೆಡ್ ಸ್ಟೋರೇಜ್ 13.83 ಟಿಎಂಸಿ ನೀರು ತೆಗೆದು ಬಳಕೆಗೆ ಬರುವ ನೀರು 21.54 ಟಿ.ಎಂ.ಸಿ ನೀರು ಇದೆ. ಇದನ್ನು ಪ್ರತಿ ದಿನ 0.29 ರಂತೆ 74 ದಿನ ಹರಿಸಬಹುದು ಎಂದು ಹೇಳಿದರು.
ದಾವಣಗೆರೆ ರೈತರ ಲೆಕ್ಕಾಚಾರ ಹೇಗಿದೆ…?
21.54 ಟಿಎಂಸಿ ನೀರನ್ನು 0.29 ಟಿಎಂಸಿಯಿಂದ ಭಾಗಿಸಿದರೆ 74.27 ದಿನಗಳು ಆಗುತ್ತದೆ. ಇಷ್ಟು ದಿನಗಳ ಕಾಲ ನೀರು ಹರಿಸಿದರೆ ಯಾವುದೇ ತೊಂದರೆ ಆಗದು. ಆದರೆ ಅಧಿಕಾರಿಗಳು 6.90 ಟಿ.ಎಂ.ಸಿ ನೀರನ್ನು ಕುಡಿಯುವ ನೀರು, ಕೈಗಾರಿಕೆಗಳಿಗೆಂದು ಮತ್ತು ಅವಿಯಾಗುವ ನೀರು 1.91 ಟಿ.ಎಂ.ಸಿ ಎಂದು ಮೀಸಲಿಟ್ಟು ಲೆಕ್ಕ ಮಾಡುತ್ತಿದ್ದಾರೆ. ಕುಡಿಯುವ ನೀರಿಗಾಗಿ ಪ್ರತ್ಯೇಕ ನಾಲೆಯಲ್ಲಿ ನೀರು ಬಿಟ್ಟ ಉದಾಹರಣೆ ಡ್ಯಾಂ ಇತಿಹಾಸದಲ್ಲೇ ಇಲ್ಲ. ನಾಲೆಗೆ ನೀರು ಹರಿಸಿದಾಗ ಕುಡಿಯುವ ನೀರಿಗಾಗಿ ಸೂಳೆಕೆರೆ, ದಾವಣಗೆರೆಯ ಟಿವಿ ಸ್ಟೇಷನ್ ಕೆರೆ, ಕುಂದುವಾಡದ ಕೆರೆ ಇನ್ನಿತರ ಕೆರೆಗಳಿಗೆ ತುಂಬಿಸಿಕೊಳ್ಳಬಹುದು. ಆದ್ದರಿಂದ ಕುಡಿಯುವ ನೀರಿಗಾಗಿ ಪ್ರತ್ಯೇಕವಾಗಿ ನೀರು ಮೀಸಲಿಡುವ ಅವಶ್ಯಕತೆ ಇಲ್ಲ ಎಂದು ಪ್ರತಿಪಾದಿಸಿದರು.
1.91 ಟಿ.ಎಂ.ಸಿ ನೀರು ಅವಿಯಾಗುತ್ತದೆ ಎಂದು ಲೆಕ್ಕ ಹಾಕಿರುವುದು ತಲೆ ಬುಡವಿಲ್ಲದ ಲೆಕ್ಕಾಚಾರ. ಇದು ರೈತರನ್ನು ಮೂರ್ಖರನ್ನಾಗಿಸುವ ಕುತಂತ್ರ. ಆವಿಯಾಗುವ ನೀರನ್ನು ಲೆಕ್ಕ ಹಾಕುವ ಅಧಿಕಾರಿಗಳು ಡಿಸೆಂಬರ್ ತಿಂಗಳಿನಿಂದ ಮೇ ತಿಂಗಳವರೆಗೆ ಡ್ಯಾಂಗೆ ಬರುವ ಒಳಹರಿವಿನ ಪ್ರಮಾಣ ಲೆಕ್ಕ ಮಾಡಿಲ್ಲ. ಇದನ್ನು ಮುಚ್ಚಿಡಲಾಗಿದೆ ಎಂದು ಆರೋಪಿಸಿದರಲ್ಲದೇ, ದಾವಣಗೆರೆ ಜಿಲ್ಲೆಯ ಕೊನೆ ಭಾಗಕ್ಕೆ ತಿಂಗಳಿಗೆ ಒಂದು ಸಲವಾದರೂ ನೀರು ತಲುಪದಿದ್ದರೆ ಜಿಲ್ಲೆಯ ಬೋರ್ ವೆಲ್ ಗಳು ಸಂಪೂರ್ಣ ಫೇಲ್ ಆಗುತ್ತವೆ. ಇದರಿಂದ ತೋಟಗಳು ನಾಶವಾಗುತ್ತವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ ಆಗಬಹುದು. ಭದ್ರಾ ನೀರು ನಮ್ಮ ಹಕ್ಕು. ಡ್ಯಾಂನಲ್ಲಿ ನೀರು ಇದೆ ನೀರು ಕೊಡಿ ಎಂದು ಕೇಳುತ್ತಿದ್ದೇವೆ ಎಂದು ಹೇಳಿದರು.
ಬೇಡಿಕೆಗಳು ಏನು…?
ಭದ್ರಾ ಸೂಪರ್ ಇಂಟೆಂಡೆಂಟ್ ಇಂಜಿನಿಯರ್ ಸುಜಾತ ಅವರು ಘೋಷಿಸಿರುವ ಹೊಸ ವೇಳಾಪಟ್ಟಿ ಮತ್ತು ದಿನಾಂಕ:06.01.2024ರ ಭದ್ರಾ ನೀರಾವರಿ ಸಲಹಾ ಸಮಿತಿ ನಿರ್ಣಯವನ್ನು ತಕ್ಷಣ ರದ್ದುಗೊಳಿಸಬೇಕು. ಪ್ರಸ್ತುತ ಡ್ಯಾಂನಲ್ಲಿ 151 ಅಡಿ 4 ಇಂಚು ನೀರು ಇದ್ದು, ಡೆಡ್ ಸ್ಟೋರೇಜ್ 13.38 ಟಿಎಂಸಿ ತೆಗೆದು, 21.54 ಟಿಎಂಸಿ ನೀರು ಬಳಸಬಹುದಾಗಿದೆ. ಇದನ್ನು ಪ್ರತಿ ದಿನ 0.29 ಟಿಎಂಸಿಯಂತೆ 74 ದಿನ ಎಡ ಮತ್ತು ಬಲದಂಡೆ ನಾಲೆಗಳಲ್ಲಿ ಹರಿಸಬಹುದು. ಭದ್ರಾ ನೀರು ನಮ್ಮ ಹಕ್ಕು. ನೀರು ಇದೆ ನೀರು ಕೊಡಿ. ಆದ್ದರಿಂದ ಫೆಬ್ರವರಿ 1 ರಿಂದ 20 ದಿನ ನೀರು ಹರಿಸಿ, 10 ದಿನ ನಿಲ್ಲಿಸಬೇಕು. ಮಾರ್ಚ್ ತಿಂಗಳಲ್ಲಿ 20 ದಿನ ಮತ್ತು ಎಪ್ರಿಲ್ ತಿಂಗಳಲ್ಲಿ 20 ದಿನ ನೀರು ಹರಿಸುವ ವೇಳಾಪಟ್ಟಿ ಪ್ರಕಟಣೆ ಮಾಡಬೇಕು.
ದಾವಣಗೆರೆ ಜಿಲ್ಲೆಯಲ್ಲಿ ಶೇಕಡ 70 ರಷ್ಟು ಭದ್ರಾ ಅಚ್ಚುಕಟ್ಟು ಪ್ರದೇಶ ಇರುವುದರಿಂದ ಭದ್ರಾ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರು ದಾವಣಗೆರೆ ಜಿಲ್ಲೆಯವರಾಗಬೇಕು ಮತ್ತು ಐಸಿಸಿ ಸಭೆ ಕಡ್ಡಾಯವಾಗಿ ದಾವಣಗೆರೆಯಲ್ಲಿ ನಡೆಸಬೇಕು.
ನಾಲೆಯಲ್ಲಿ ನೀರು ಹರಿಸಿದಾಗ ಹಿರೇಕೋಗಲೂರು ಬಳಿ ಮತ್ತು ಬೆಳ್ಳಿಗನೂಡು ಬಳಿ ಕಾಲುವೆಗೆ ಅಡ್ಡಲಾಗಿ ನಿರ್ಮಿಸಿರುವ ಸೂಪರ್ ಪ್ಯಾಸೇಜ್ ಹೊಡೆದು ಅಧಿಕ ಪ್ರಮಾಣದ ನೀರು ರಸ್ತೆಯಲ್ಲಿ ಹರಿದು ಹೋಗಿ ಪೋಲಾಗುತ್ತಿದೆ. ಅದೇ ರೀತಿ ಕಾಲುವೆಗಳಿಗೆ ಅಡ್ಡಲಾಗಿ ರಸ್ತೆಯಲ್ಲಿ ನಿರ್ಮಿಸಿರುವ ಡಕ್ ಗಳು (ಸೇತುವೆಗಳು) ಶಿಥಿಲಗೊಂಡು ನೀರು ಸೋರಿಕೆಯಾಗಿ ಹರಿದು ಪೋಲಾಗುತ್ತಿದೆ. ತಕ್ಷಣ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕ್ರಮವಹಿಸಿ, ದುರಸ್ಥಿ ಕಾರ್ಯ ಕೈಗೊಳ್ಳಬೇಕು. ನೀರು ಹರಿದು ಪೋಲಾಗುವುದನ್ನು ನಿಯಂತ್ರಿಸಬೇಕು. ನೀರಾವರಿ ನಿಗಮದ ಅಧಿಕಾರಿಗಳು ಸೌಡಿಗಳನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡು ಸಮರ್ಪಕವಾಗಿ ನೀರು ನಿರ್ವಹಣೆ ಮಾಡಿ, ಕೊನೆ ಭಾಗಕ್ಕೆ ನೀರು ತಲುಪಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಹರಿಹರ ಶಾಸಕಬಿ. ಪಿ. ಹರೀಶ್, ಎಪಿಎಂಸಿ ಮಾಜಿ ಅಧ್ಯಕ್ಷ ಬಿ. ಎಂ. ಸತೀಶ್ ಕೊಳೇನಹಳ್ಳಿ, ಎ. ಕೆ. ಫೌಂಡೇಶನ್ ಅಧ್ಯಕ್ಷರೂ ಆದ ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆ. ಬಿ. ಕೊಟ್ರೇಶ್, ಬಿಜೆಪಿ ಮುಖಂಡ ಧನಂಜಯ ಕಡ್ಲೆಬಾಳ್, ಜಿಲ್ಲಾ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಲಿಂಗರಾಜು, ಬೆಳವನೂರು ನಾಗೇಶ್ವರರಾವ್, ಎಲ್. ಎನ್. ಕಲ್ಲೇಶ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ, ಬಲ್ಲೂರು ಬಸವರಾಜ , ಶಾಗಲೆ ದೇವೇಂದ್ರಪ್ಪ , ಲೋಕಿಕೆರೆ ನಾಗರಾಜ್, ಬೇತೂರು ಸಂಗಪ್ಪ, ಆರನೇ ಕಲ್ಲು ವಿಜಯಕುಮಾರ, ಮಹಾನಗರ ಪಾಲಿಕೆ ಮಾಜಿ ಮೇಯರ್ ಹೆಚ್. ಎನ್. ಗುರುನಾಥ್, ಕುಂದುವಾಡದ ಗಣೇಶಪ್ಪ, ಜಿಮ್ಮಿ ಹನುಮಂತಪ್ಪ, ಮಹೇಶಪ್ಪ, ಅವರಗೊಳ್ಳ ಷಣ್ಮುಖಯ್ಯ, ಕೃಷ್ಣಮೂರ್ತಿ ಪವಾರ್, ಕಕ್ಕರಗೊಳ್ಳ ಕಲ್ಲಿಂಗಪ್ಪ, ಪ್ರದೀಪ್, ಶಾಗಲೆ ಜಗದೀಶಗೌಡ್ರು, ಗೋಪನಾಳ್ ಮಲ್ಲಿಕಾರ್ಜುನಯ್ಯ, ಕಲ್ಪನಹಳ್ಳಿ ಸತೀಶ್, ಬಾತಿ ವಿರೇಶ್ ದೊಗ್ಗಳ್ಳಿ, ಅಣಬೇರು ಶಿವಪ್ರಕಾಶ್, ಮಳಲ್ಕೆರೆ ಕಲ್ಲಪ್ಪಗುಡ್ಡದ್ರ, ಸದಾನಂದ, ನಾಗರಸನಹಳ್ಳಿ ರುದ್ರೇಶ, ಕೈದಾಳೆ ಗುರುಪ್ರಸಾದ್, ಗೋಣಿವಾಡ ನಾಗರಾಜಪ್ಪ, ಹೊಸಹಳ್ಳಿ ಶಿವಮೂರ್ತಿ, ಕುಶಾಲ್, ಪ್ರವೀಣ್ ಮತ್ತಿತರರು ಪಾಲ್ಗೊಂಡಿದ್ದರು.