Home ದಾವಣಗೆರೆ ಬಯಲುಸೀಮೆಯ ಕನಸು ನನಸು: ಚಿತ್ರದುರ್ಗ ಶಾಖಾ ಕಾಲುವೆಗೆ ಹರಿದ ಭದ್ರಾ ನೀರು: ಎಷ್ಟೇ ಹೋರಾಡಿದ್ರೂ ದಾವಣಗೆರೆಗೆ ಬರಲಿಲ್ಲ ಭದ್ರೆ!
ದಾವಣಗೆರೆಬೆಂಗಳೂರು

ಬಯಲುಸೀಮೆಯ ಕನಸು ನನಸು: ಚಿತ್ರದುರ್ಗ ಶಾಖಾ ಕಾಲುವೆಗೆ ಹರಿದ ಭದ್ರಾ ನೀರು: ಎಷ್ಟೇ ಹೋರಾಡಿದ್ರೂ ದಾವಣಗೆರೆಗೆ ಬರಲಿಲ್ಲ ಭದ್ರೆ!

Share
ದಾವಣಗೆರೆ
Share

ದಾವಣಗೆರೆ/ಚಿತ್ರದುರ್ಗ: ದೀರ್ಘಕಾಲದ ಬಯಲುಸೀಮೆಯ ಜನರ ಕನಸಾಗಿರುವ ಮಹತ್ವಾಪೇಕ್ಷೆಯ ‘ಭದ್ರಾ ಮೇಲ್ದಂಡೆ ಯೋಜನೆ’ಯಡಿ ಪ್ರಸಕ್ತ ಸಾಲಿನ ಸೆಪ್ಟೆಂಬರ್ 6 ರಿಂದ ಮುಖ್ಯ ಕಾಲುವೆ ಮುಖಾಂತರ ಚಿತ್ರದುರ್ಗ ಶಾಖಾ ಕಾಲುವೆಗೆ ಪ್ರಾಯೋಗಿಕವಾಗಿ ನೀರನ್ನು ಹರಿಸಲಾಗಿದೆ. ಆದರೆ ದಾವಣಗೆರೆ ಜಿಲ್ಲೆಯ ಜನರು ನೀರು ಹರಿಸುವಂತೆ ಒತ್ತಾಯಿಸಿದರೂ ಪ್ರಯೋಜನ ಮಾತ್ರ ಶೂನ್ಯ.

ದಶಕಗಳಿಂದ ಮಳೆ ಇಲ್ಲದೆ ಬರಗಾಲದಿಂದ ಬಳಲುತ್ತಿದ್ದ ಚಿತ್ರದುರ್ಗ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಮಗಳೂರು ಜಿಲ್ಲೆಗಳ ರೈತರ ಬಾಳಿನಲ್ಲಿ ಭದ್ರಾ ಮೇಲ್ದಂಡೆ ಯೋಜನೆಯು ಹೊಸ ಆಶಾಕಿರಣ ಮೂಡಿಸಿದೆ. ತುಂಗಾ ಮತ್ತು ಭದ್ರಾ ನದಿಗಳಿಂದ ನೀರನ್ನು ಎತ್ತಿ ಬಯಲುಸೀಮೆಯ ಹನ್ನೆರಡು ತಾಲ್ಲೂಕುಗಳ ಕೆರೆ-ಕಟ್ಟೆಗಳನ್ನು ತುಂಬಿಸುವ ಈ ಬೃಹತ್ ಯೋಜನೆಗೆ ಹಲವು ನಾಯಕರು, ಹೋರಾಟಗಾರರು ನಿರಂತರ ಶ್ರಮಿಸಿದ್ದಾರೆ.

ಪ್ರಸ್ತುತ ಸೆಪ್ಟೆಂಬರ್ ತಿಂಗಳಲ್ಲಿ ಆರಂಭವಾಗಿರುವ ಈ ಪ್ರಾಯೋಗಿಕ ನೀರು ಹರಿವಿನಿಂದ ಕಾಲುವೆಯ ಸಾಮರ್ಥ್ಯ ಮತ್ತು ತಾಂತ್ರಿಕ ಅಂಶಗಳನ್ನು ಪರಿಶೀಲಿಸಲಾಗುತ್ತಿದೆ. ಗೋನೂರು ಕೆರೆಯ ಕಡೆಗೆ ನೀರು ಹರಿಯುತ್ತಿರುವುದನ್ನು ಕಂಡು ಸ್ಥಳೀಯ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ. ಮುಮುಂದಿನ ದಿನಗಳಲ್ಲಿ ಈ ಪ್ರದೇಶದ ಕೃಷಿ ಭೂಮಿಗೆ ಹನಿ ನೀರಾವರಿ ಸೌಲಭ್ಯ ಹಾಗೂ ಕುಡಿಯುವ ನೀರಿನ ಶಾಶ್ವತ ಸಮಸ್ಯೆಗೆ ಮುಕ್ತಿ ಸಿಗುವ ವಿಶ್ವಾಸವನ್ನು ಜನಪ್ರತಿನಿಧಿಗಳು ವ್ಯಕ್ತಪಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ಹಾಗೂ ಅಜ್ಜಂಪುರ ಮೂಲಕ ಹರಿಯುವ ಈ ಚಿತ್ರದುರ್ಗ ಶಾಖಾ ಕಾಲುವೆಯು (ಚೈ.0.00 ಕಿಮೀ ನಿಂದ ಚೈ.114.142 ಕಿಮೀ ವರೆಗೆ) ಅಜ್ಜಂಪುರ, ಕಡೂರು, ಹೊಸದುರ್ಗ, ಹೊಳಲ್ಕೆರೆ, ಹಿರಿಯೂರು, ಚಿತ್ರದುರ್ಗ ಹಾಗೂ ಚಳ್ಳಕೆರೆ ತಾಲ್ಲೂಕುಗಳ ವಿವಿಧ ಗ್ರಾಮಾಂತರ ಪ್ರದೇಶಗಳ ಮೂಲಕ ಸಾಗಿ ಅಂತಿಮವಾಗಿ ಗೋನೂರು ಕೆರೆಗೆ ತಲುಪಲಿದೆ. ಈ ಪ್ರಾಯೋಗಿಕ ಹಂತದಲ್ಲಿ ಸುಮಾರು 3 ಟಿಎಂಸಿ ಅಡಿ ನೀರನ್ನು ಹರಿಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಈ ಭಾಗದ ನೂರಾರು ಕೆರೆಗಳನ್ನು ತುಂಬಿಸಲು ಹಾಗೂ ಕೃಷಿಗೆ ಅನುಕೂಲವಾಗಲಿದೆ.

ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಮುಂಜಾಗ್ರತಾ ಎಚ್ಚರಿಕೆ:

ಕಾಲುವೆಗೆ ಹೊಸದಾಗಿ ನೀರು ಹರಿಸುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ಮತ್ತು ರೈತರು ಮುಂಜಾಗ್ರತಾ ಕ್ರಮವಾಗಿ ಕಾಲುವೆ ಹಾಗೂ ಹಳ್ಳಗಳ ಪಾತ್ರದ ಹತ್ತಿರ ತೆರಳದಂತೆ ವಿಶ್ವೇಶ್ವರಯ್ಯ ಜಲನಿಗಮದ ಸೂಪರಿಂಟೆಂಡಿಂಗ್ ಇಂಜಿನಿಯರ್ ಮನವಿ ಮಾಡಿದ್ದಾರೆ.

ಈ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ನೀರಾವರಿ ಕಾಯ್ದೆ ಹಾಗೂ ಕಾನೂನು ರೀತ್ಯಾ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Share

Leave a comment

Leave a Reply

Your email address will not be published. Required fields are marked *