SUDDIKSHANA KANNADA NEWS/ DAVANAGERE/ DATE:09-08-2024
ದಾವಣಗೆರೆ: ಭದ್ರಾ ನಾಲೆಗಳಿಗೆ ಭದ್ರಾ ನೀರು ಹರಿಸಲು ಪ್ರಾರಂಭಿಸಿ ಇಂದಿಗೆ 11 ದಿನಗಳಾದ್ರೂ ನಾಲೆಗಳಲ್ಲಿ ನೀರು ರಭಸವಾಗಿ ಮತ್ತು ನಿಗಧಿತ ಪ್ರಮಾಣದಲ್ಲಿ ಹರಿಯುತ್ತಿಲ್ಲ. ಈ 11 ದಿನಗಳ ಅವಧಿಯಲ್ಲಿ ಎಡ ಮತ್ತು ಬಲ ನಾಲೆಗಳಿಗೆ ಒಟ್ಟು 26309 ಕ್ಯೂಸೆಕ್ ನೀರು ಹರಿಸಲಾಗಿದೆ. ಆದರೆ ನದಿಗೆ ಒಟ್ಟು 270777 ಕ್ಯೂಸೆಕ್ ನೀರು ಹರಿಸಲಾಗಿದೆ. ಇಷ್ಟೊಂದು ಪ್ರಮಾಣದ ನೀರು ಬಲದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶಕ್ಕೆ 102 ದಿನಗಳವರೆಗೆ ಹರಿಸಬಹುದಾದ ನೀರಿನ ಪ್ರಮಾಣ.
ದಾವಣಗೆರೆ ಜಿಲ್ಲೆಯ ಯಾವ ಕೆರೆಗೂ ಇಂದಿಗೂ ಒಂದು ಹನಿ ನೀರು ಬಂದಿಲ್ಲ. ನೀರು ನಿರ್ವಹಣೆ ಸಮರ್ಪಕವಾಗಿ ಆಗುತ್ತಿಲ್ಲ. ಎತ್ತು ಈಯಿತು ಕೊಟ್ಟಿಗಿಗೆ ಕಟ್ಟಿ ಎಂಬ ಗಾದೆಯಂತೆ ಮಳೆ ಬಂತು ಡ್ಯಾಂ ತುಂಬಿತ್ತು ನೀರು ಬಿಟ್ವಿ ಎಂಬ ರೀತಿಯಲ್ಲಿ ಹುಚ್ಚಾಟ ಮಾಡಿದಂತಾಗಿದೆ ಎಂದು ಆರೋಪಿಸಿ ಜಿಲ್ಲಾ ಬಿಜೆಪಿ ರೈತ ಮೋರ್ಚಾವು ಜಿಲ್ಲಾಧಿಕಾರಿ ಗಂಗಾಧರ ಸ್ವಾಮಿ ಅವರಿಗೆ ಮನವಿ ಸಲ್ಲಿಸಿದೆ.
ಮನವಿಯಲ್ಲೇನಿದೆ…?
ಜುಲೈ 15 ರಿಂದಲೇ ನೀರು ಹರಿಸಿ ಎಂದು ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದರೂ ಕ್ಯಾರೇ ಎನ್ನಲಿಲ್ಲ. ಅಂದು ನೀರು ಹರಿಸಿದ್ದರೆ ಕೆರೆ ಕಟ್ಟೆಗಳು ಹಳ್ಳ ಕೊಳ್ಳಗಳು ತುಂಬುತ್ತಿದ್ದವು. ರೈತರು ಭತ್ತದ ನಾಟಿಗೆ ಬೀಜ ಚೆಲ್ಲಿಕೊಳ್ಳಲು
ಅನುಕೂಲವಾಗುತ್ತಿತ್ತು. ಇದ್ಯಾವುದರ ಪರಿವೆಯೇ ಇಲ್ಲದೆ ಡ್ಯಾಂ ಪೂರ್ತಿ ತುಂಬಿಸಿ ಒಮ್ಮೆಲೆ ನದಿಗೆ ನೀರನ್ನು ವ್ಯರ್ಥವಾಗಿ ಹರಿಸಲಾಗುತ್ತಿದೆ. ಇದರಿಂದ ನದಿಯ ಆಸುಪಾಸಿನಲ್ಲಿರುವವರಿಗೆ ತೊಂದರೆಯಾಗುತ್ತದೆ ಎಂಬ ಕನಿಷ್ಠ ಜ್ಞಾನವೂ ಇಲ್ಲದಂತಾಗಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿರುವ ಕೆರೆ ಕಟ್ಟೆಗಳಿಗೆ ಇಂದಿಗೂ ಒಂದು ಹನಿ ನೀರು ಬಂದಿಲ್ಲ. ನೀರು ಇದ್ದಾಗ ಕೆರೆ ಕಟ್ಟೆಗಳನ್ನು ತುಂಬಿಸಿಕೊಂಡರೆ ಒಂದು ಸಣ್ಣ ಕೆರೆ ಕನಿಷ್ಟ 300 ಎಕರೆ ಜಮೀನಿಗೆ ನೀರುಣಿಸುತ್ತದೆ ಮತ್ತು ಕೆರೆಯ ಸುತ್ತ ಏಳೆಂಟು ಕಿ.ಮೀ ದೂರ ಅಂತರ್ಜಲ ಮಟ್ಟ ಕುಸಿಯುವುದಿಲ್ಲ. ಇಂತಹ ಪರೋಕ್ಷ ನೀರಾವರಿ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಎಸ್ ಮಲ್ಲಿಕಾರ್ಜುನರವರು ಮತ್ತು ಜಿಲ್ಲಾಡಳಿತ ಚಿಂತನೆ ನಡೆಸಬೇಕು. ರೈತರ ಹಿತಾಸಕ್ತಿಯ ಕಾಳಜಿ ಇಲ್ಲವಾಗಿದೆ.
ಡ್ಯಾಂ ತುಂಬಿದೆ ಎಂಬ ಸಂತಸದಲ್ಲೂ ನಾಲೆಯಲ್ಲಿ ನೀರಿನ ಕೊರತೆ ಕಾಡುತ್ತಿದೆ. ನಮ್ಮ ಮನವಿ ಸ್ವೀಕರಿಸುವ ಜಿಲ್ಲಾಧಿಕಾರಿಯವರು ತಕ್ಷಣ ರೈತರ ಸಂಕಷ್ಟಕ್ಕೆ ಧಾವಿಸಬೇಕು. ಕಳೆದ ಬೇಸಿಗೆ ಹಂಗಾಮಿನಲ್ಲಿ ರೈತರು ಭೀಕರ ಬರದಿಂದ ಬಸವಳಿದಿದ್ದಾರೆ. ಬಡಕಲು ರೈತರ ಸಹನೆಯ ಕಟ್ಟೆ ಒಡೆಯುವ ಮುನ್ನ ಜಿಲ್ಲಾಡಳಿತ ಎಚ್ಚೆತ್ತು ಕೊಂಡು, ನೀರು ನಿರ್ವಹಣೆ ಸಮರ್ಪಕವಾಗಿ ಮಾಡುವಂತೆ ಕ್ರಮ ಕೈಗೊಳ್ಳಬೇಕು . ಮಳೆಗಾಲದ ಹಂಗಾಮಿನ ಭತ್ತ ಬೆಳೆಗೆ ಸೂಕ್ತ ರೀತಿಯಲ್ಲಿ ನೀರು ಒದಗಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಬೇಡಿಕೆಗಳೇನು…?
ತಕ್ಷಣ ನೀರು ನಿರ್ವಹಣೆ ಸಮರ್ಪಕವಾಗಿ ಮಾಡಿ, ಕೊನೆ ಭಾಗಕ್ಕೆ ನೀರು ಹರಿಸಬೇಕು. ದಾವಣಗೆರೆ ಜಿಲ್ಲೆಯಲ್ಲಿರುವ ಎಲ್ಲಾ ಕೆರೆ ಕಟ್ಟೆಗಳನ್ನು ತುಂಬಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ರೈತರು ಹೊಲಗಳಲ್ಲಿ ನಿರ್ಮಿಸಿಕೊಂಡಿರುವ ಕೃಷಿ ಹೊಂಡಗಳನ್ನು ತುಂಬಿಸಲು ಕ್ರಮ ಕೈಗೊಳ್ಳಬೇಕು. ಇರುವ ನೀರನ್ನು ಸಮರ್ಥವಾಗಿ ಬಳಕೆ ಮಾಡಬೇಕು. ಡ್ಯಾಂ ತುಂಬಿದೆ ಎಂದು ನಿರ್ಲಕ್ಷ್ಯ ವಹಿಸಬಾರದು. ಹನಿ ನೀರು ಅಮೂಲ್ಯ ಎಂದು ಭಾವಿಸಿ, ಎಲ್ಲಿಯೂ ನೀರು ಪೋಲಾಗದಂತೆ ಎಚ್ಚರ ವಹಿಸಬೇಕು ಎಂದು ಒತ್ತಾಯಿಸಲಾಗಿದೆ.
ಮನವಿ ಸಲ್ಲಿಸುವ ಜಿಲ್ಲಾ ಬಿಜೆಪಿ ರೈತ ಮೋರ್ಚಾ ನಿಯೋಗದಲ್ಲಿ ಜಿಲ್ಲಾ ಬಿಜೆಪಿ ವಕ್ತಾರ ಕೊಳೇನಹಳ್ಳಿ ಬಿ ಎಂ ಸತೀಶ್, ದೂಡ ಮಾಜಿ ಅಧ್ಯಕ್ಷ ಎ. ವೈ. ಪ್ರಕಾಶ್, ದಾವಣಗೆರೆ ಉತ್ತರ ಮಂಡಲ ಅಧ್ಯಕ್ಷ ಬೇತೂರು ಸಂಗನಗೌಡ್ರು, ಮಾಜಿ ಮೇಯರ್ ಹೆಚ್ ಎನ್ ಗುರುನಾಥ್, ವಸಂತ ಕುಮಾರ್, ಎಪಿಎಂಸಿ ಮಾಜಿ ಅಧ್ಯಕ್ಷ ಕುಂದುವಾಡದ ಗಣೇಶಪ್ಪ, ರೈತ ಮುಖಂಡರಾದ ಹೆಚ್. ಎನ್. ಶಿವಕುಮಾರ್, ಕಲ್ಪನಳ್ಳಿ ಕೆ ಜಿ ಉಜ್ಜಪ್ಪ, ಆನೆಕೊಂಡ ರೇವಣಸಿದ್ದಪ್ಪ, ರಮೇಶನಾಯ್ಕ್, ಶಿರಮನಳ್ಳಿ ಮಂಜುನಾಥ, ಈಶ್ವರಪ್ಪ ಮುಂತಾದವರು ಉಪಸ್ಥಿತರಿದ್ದರು.