SUDDIKSHANA KANNADA NEWS/ DAVANAGERE/ DATE:28-06-2024
ದಾವಣಗೆರೆ: ಭದ್ರಾ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ಒಳಹರಿವು ಬರುತ್ತಿದೆ. ಇದರಿಂದಾಗಿ ಒಂದೇ ದಿನದಲ್ಲಿ ಎರಡು ಅಡಿ ನೀರು ಡ್ಯಾಂಗೆ ಹರಿದು ಬಂದಿದೆ.
ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ನಿನ್ನೆಗೆ ಹೋಲಿಸಿದರೆ ಇಂದು ಡಬಲ್ ಅಂದರೆ ನಾಲ್ಕು ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹೆಚ್ಚಾಗಿ ಹರಿದು ಬರುತ್ತಿದೆ.
ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಹಲವೆಡೆ ಭಾರೀ ಮಳೆಯಾಗಿದೆ. ಇನ್ನು ಭದ್ರಾ ಡ್ಯಾಂಗೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. 2276 ಕ್ಯೂಸೆಕ್ ಒಳಹರಿವು ಬುಧವಾರ ಇತ್ತು. ಗುರುವಾರದ ಬೆಳಿಗ್ಗೆಯೊತ್ತಿಗೆ 4082 ಕ್ಯೂಸೆಕ್ ಗೆ ಏರಿದೆ. ಆದ್ರೆ, ಇಂದು ಒಳ ಹರಿವು 8655 ಕ್ಯೂಸೆಕ್ ಹರಿದು ಬಂದಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ 122.3 ಅಡಿಗೆ ಏರಿಕೆ ಆಗಿದೆ. ಕಳೆದ ವರ್ಷ ಇದೇ ದಿನ 135 ಅಡಿ ನೀರು ಸಂಗ್ರಹ ಇತ್ತು. ಭದ್ರಾ ಜಲಾನಯನ ಪ್ರದೇಶದಲ್ಲಿ ಕಳೆದ ನಾಲ್ಕು ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಬರುತ್ತಿರುವ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಮಳೆಯು ಮುಂದುವರಿದಿದ್ದು, ಒಳಹರಿವಿನ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆ ಇದೆ. ಮಾತ್ರವಲ್ಲ, ಕಳಸಾ ಸೇರಿದಂತೆ ಚಿಕ್ಕಮಗಳೂರು ಜಿಲ್ಲೆಯ ವಿವಿಧೆಡೆ ಮಳೆ ಮುಂದುವರಿದಿದ್ದು, ನಾಳೆಯೊತ್ತಿಗೆ ಜಲಾಶಯದ ನೀರಿನ ಮಟ್ಟ 125 ಅಡಿಗೆ ಏರಿಕೆಯಾಗಬಹುದು ಎಂದು ಅಂದಾಜಿಸಲಾಗಿದೆ.
ಭದ್ರಾ ಜಲಾಶಯದ ನೀರಿನ ಮಟ್ಟ ಕಳೆದ ವರ್ಷಕ್ಕೆ ಹೋಲಿಸಿದರೆ ಕಡಿಮೆಯಾಗಿದೆ. ಬರೋಬ್ಬರಿ 15 ಅಡಿ ನೀರು ಕಡಿಮೆ ಸಂಗ್ರಹ ಇದ್ದು. ಇದು ಭದ್ರಾ ಅಚ್ಚುಕಟ್ಟುಪ್ರದೇಶ, ಶಿವಮೊಗ್ಗ ಹಾಗೂ ಚಿತ್ರದುರ್ಗದ ರೈತರು ಹಾಗೂ ಜನರಿಗೆ ಆತಂಕ ತಂದೊಡ್ಡಿತ್ತು. ಈಗ ಮಳೆಯಾಗುತ್ತಿರುವ ಕಾರಣ ರೈತರಲ್ಲಿ ಸ್ವಲ್ಪ ಮಟ್ಟಿಗೆ ನಿಟ್ಟುಸಿರುಬಿಡುವಂತಾಗಿದೆ. ಮಳೆ ಬಾರದೇ ಇದ್ದರೆ ಜಲಾಶಯದಲ್ಲಿ ಗರಿಷ್ಠ ನೀರಿನ ಮಟ್ಟ ಮುಟ್ಟುವುದು ಕಷ್ಟ ಎಂದು ಹೇಳಲಾಗುತ್ತಿದೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಈ ತಿಂಗಳ ಕೊನೆಯ ವಾರ ಭಾರೀ ಮಳೆಯಾಗಲಿದ್ದು, ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗುವ ಸಾಧ್ಯತೆ ಇದೆ. ಇದೇ ರೀತಿಯಲ್ಲಿ ಮಳೆ ಮುಂದುವರಿದರೆ ಜಲಾಶಯದ ನೀರಿನ ಮಟ್ಟ ಹೆಚ್ಚಳವಾಗಲಿದೆ.
ಭದ್ರಾ ಡ್ಯಾಂ ನೀರಿನ ಮಟ್ಟ
- ಭದ್ರಾ ಡ್ಯಾಂ ನೀರಿನ ಒಟ್ಟು ಸಂಗ್ರಹ: 186 ಅಡಿ
- ದಿನಾಂಕ: 28- 06-2024
- ಭದ್ರಾ ಡ್ಯಾಂ ಇಂದಿನ ನೀರಿನ ಮಟ್ಟ: 122. 3 ಅಡಿ
- ಎಂಎಸ್ ಎಲ್ : 2094.25 Ft
- ಕೆಪಾಸಿಟಿ: 16.587 Tmc
- ಒಳಹರಿವು: 8655 ಕ್ಯೂಸೆಕ್
- ಒಟ್ಟು ಹೊರಹರಿವು: 300 ಕ್ಯೂಸೆಕ್
- ಕಳೆದ ವರ್ಷ ಇದೇ ದಿನ: 137ಅಡಿ
- ಕೆಪಾಸಿಟಿ: 24.888 ಟಿಎಂಸಿ
ಮುಂದುವರಿದ ಮಳೆ:
ಕಾಫಿನಾಡಿನ ಪಶ್ಚಿಮಘಟ್ಟಗಳ ಸಾಲಲ್ಲಿ ಭಾರೀ ಮಳೆಯಾಗುತ್ತಿದ್ದು, ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗುವ ಭೀತಿ ಎದುರಾಗಿದೆ.
ಕುದುರೆಮುಖ ಘಟ್ಟ ಪ್ರದೇಶದಲ್ಲಿಯೂ ಧಾರಾಕಾರ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಭದ್ರಾ ನದಿ ಹರಿವಿನ ಮಟ್ಟದಲ್ಲಿ ಭಾರೀ ಏರಿಕೆಯಾಗಿದೆ.ಹೆಬ್ಬಾಳೆ ಸೇತುವೆ ಮುಳುಗಡೆಗೆ 4-5 ಅಡಿಯಷ್ಟೇ ಬಾಕಿ ಉಳಿದಿದೆ. ಹೆಬ್ಬಾಳೆ ಸೇತುವೆ ಮುಳುಗಡೆಯಾದರೆ ಹತ್ತಾರು ಹಳ್ಳಿಗಳ ಸಂಪರ್ಕ ಬಂದ್ ಆಗಲಿದೆ. ಕಳಸ-ಹೊರನಾಡು ಅನ್ನಪೂರ್ಣೇಶ್ವರಿ ದೇಗುಲ ಸಂಪರ್ಕವೂ ಸ್ಥಗಿತಗೊಳ್ಳಲಿದೆ. ಶೃಂಗೇರಿ ತಾಲೂಕಿನ ಕೆರೆಕಟ್ಟೆ ಭಾಗದಲ್ಲೂ ಭಾರೀ ಮಳೆಯಾಗುತ್ತಿದೆ. ತುಂಗಾ ನದಿಯ ಒಳ ಹರಿವಿನ ಪ್ರಮಾಣದಲ್ಲೂ ಏರಿಕೆಯಾಗಿದೆ.ನಿರಂತರ ಮಳೆಯಿಂದ ನಾಡಿನ ಜೀವನದಿಗಳ ಒಳಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆ. ಇದೇ ರೀತಿ ಮಳೆ ಮುಂದುವರಿದರೆ ಸೇತುವೆ ಮುಳುಗಡೆಯಾಗಲಿದ್ದು, ಜನರಿಗೆ ತೊಂದರೆಯಾಗಲಿದೆ.