SUDDIKSHANA KANNADA NEWS/ DAVANAGERE/ DATE:01-02-2024
ದಾವಣಗೆರೆ: 2023-24ನೇ ಸಾಲಿನಲ್ಲಿ ಭದ್ರಾ ಜಲಾಶಯದಿಂದ ನದಿಯ ಮೂಲಕ ಹಲವು ಜಿಲ್ಲೆಗಳಿಗೆ ನೀರು ಹರಿಸಲು ಉದ್ದೇಶಿಸಿರುವುದು ದಾವಣಗೆರೆ ಜಿಲ್ಲೆಯ ರೈತರನ್ನು ಕೆರಳಿಸಿದೆ. ದಾವಣಗೆರೆ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರುಣಿಸದೇ ಈಗ 12 ಸಾವಿರ ಕ್ಯೂಸೆಕ್ ನೀರನ್ನು ಹರಿಸಲು ಮುಂದಾಗಿರುವುದು ರೋಷಾಗ್ನಿ ಹೆಚ್ಚಾಗುವಂತೆ ಮಾಡಿದೆ.
ಹಾವೇರಿ, ಗದಗ ಮತ್ತು ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಗದಗ, ಬೆಟಗೇರಿ, ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ, ಕೂಡ್ಲಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ
ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಬಹುಗ್ರಾಮ ನದಿ ನೀರು ಯೋಜನೆಯಡಿ ಕುಡಿಯುವ ನೀರು ಒದಗಿಸಲು ಮತ್ತು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ ತುಂಗ-ಭದ್ರಾ ನದಿಗೆ ಫೆಬ್ರವರಿ 5ರ ರಾತ್ರಿ 10 ಗಂಟೆಯಿಂದ ಜನವರಿ 10 ರ ರಾತ್ರಿ 10 ಗಂಟೆಯವರೆಗೆ ಪ್ರತಿ ದಿನ 2000 ಕ್ಯೂಸೆಕ್ ನಂತೆ ಒಟ್ಟು 12000 ಕ್ಯೂಸೆಕ್ ನೀರನ್ನು
ಹರಿಸಲಾಗುವದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಅವಧಿಯಲ್ಲಿ ನದಿಯಲ್ಲಿ ಸಾರ್ವಜನಿಕರು ಮತ್ತು ರೈತರು ತಿರುಗಾಡುವುದು, ದನ ಕರುಗಳನ್ನು ಮೇಯಿಸುವುದು ಮತ್ತು ತೋಟಗಾರಿಕೆ ಸಂಬಂಧಿಸಿದ ಕೆಲಸ ಮಾಡುವುದು ಇತ್ಯಾದಿಗಳನ್ನು ನಿಷೇಧಿಸಲಾಗಿದೆ. ಸಾರ್ವಜನಿಕರು ಮತ್ತು ರೈತರು ನದಿ ದಂಡೆಯಲ್ಲಿ ಪಂಪ್ಸೆಟ್ ಅಳವಡಿಸುವುದು ಮತ್ತು ಅನಧಿಕೃತವಾಗಿ ನೀರೆತ್ತುವುದನ್ನು ನಿಷೇಧಿಸಲಾಗಿದೆ ಎಂದು ಕರ್ನಾಟಕ ನೀರಾವರಿ ನಿಗಮದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಭದ್ರಾ ನೀರು ಹರಿಸುವ ಅವೈಜ್ಞಾನಿಕ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಮಾತ್ರವಲ್ಲ, ರೈತರ ಬೇಡಿಕೆಗೆ ಮನ್ನಣೆ ಸಿಕ್ಕಿರಲಿಲ್ಲ. ನೀರು ಹರಿಸಿದ್ದರೂ ಕೊನೆಯ ಭಾಗಕ್ಕೆ ನೀರು ತಲುಪಿಲ್ಲ. ದಾವಣಗೆರೆ ಜಿಲ್ಲೆಯ ಕಡೆ ನೀರು ಬರುವ ಮುಖ್ಯ ನಾಲೆಯಲ್ಲಿ ನಿಗಧಿತ ಪ್ರಮಾಣದಲ್ಲಿ ನೀರು ಹರಿಸಿಲ್ಲ. ಮುಖ್ಯ ನಾಲೆಯಲ್ಲಿ 11 ಅಡಿ ಮಟ್ಟದಲ್ಲಿ ನೀರು ಹರಿಯಬೇಕು. ಆದರೆ ಕೇವಲ 8 ಅಡಿ ಮಟ್ಟದಲ್ಲಿ ನೀರು ಹರಿಸಲಾಗಿತ್ತು. ಆದ್ದರಿಂದ ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಕೊನೆ ಭಾಗಕ್ಕೆ ನೀರು ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ವ್ಯಕ್ತಪಡಿಸಿದ್ದರು. ಆದ್ರೆ, ಈಗ 12 ಸಾವಿರ ಕ್ಯೂಸೆಕ್ ನೀರು ಹರಿಸಲಾಗುತ್ತಿರುವುದು ದಾವಣಗೆರೆ ಜಿಲ್ಲೆಯ ರೈತರ ಆಕ್ರೋಶಕ್ಕೆ ಕಾರಣವಾಗಿದೆ.
ಕಾಡಾ ಅವೈಜ್ಞಾನಿಕ ನಿರ್ಧಾರದಿಂದ ದಾವಣಗೆರೆ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಮತ್ತು ಮಲೆಬೆನ್ನೂರು ವಿಭಾಗಗಳ ವ್ಯಾಪ್ತಿಯಲ್ಲಿನ ಹಳ್ಳಿಗಳಲ್ಲಿ ಬೆಳೆದು ನಿಂತಿರುವ ತೋಟಗಳನ್ನು ಸಂರಕ್ಷಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ವುದಿಲ್ಲ. ನೀರು ಕೊನೆ ಭಾಗಕ್ಕೆ ತಿಂಗಳಿಗೆ ಒಮ್ಮೆಯಾದ್ರೂ ತಲುಪದಿದ್ದರೆ ಅಂತರ್ಜಲ ಮಟ್ಟ ಕುಸಿದು, ಕೊಳವೆ ಬಾವಿಗಳಲ್ಲಿ ನೀರು ಇಲ್ಲದೆ ಫೇಲ್ ಆಗುತ್ತವೆ. ಈ ಪರಿಸ್ಥಿತಿಯಿಂದ ದಾವಣಗೆರೆ ಜಿಲ್ಲೆಯ ರೈತರಿಗೆ ಘನಘೋರ ಅನ್ಯಾಯವಾಗುತ್ತದೆ. ಮುಂದಿನ ದಿನಗಳಲ್ಲಿ
ಕುಡಿಯುವ ನೀರಿಗೂ ಸಹ ಹಾಹಾಕಾರ ಆಗಬಹುದು ಎಂದು ಮನವಿ ಸಲ್ಲಿಸಿದ್ದರೂ, ತಿಳಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಎಂದು ಆರೋಪಿಸಿದ್ದಾರೆ.
12 ದಿನ ನೀರು ಹರಿಸುವ ಅವೈಜ್ಞಾನಿಕ ವೇಳಾಪಟ್ಟಿಯ ಬದಲು 20 ದಿನ ನೀರು ಹರಿಸಿ, 20 ದಿನ ನೀರು ನಿಲ್ಲಿಸುವ ವೇಳಾಪಟ್ಟಿ ಪ್ರಕಟಣೆ ಮಾಡಬೇಕು ಎಂಬ ಒತ್ತಾಯ ಮಾಡಿದ್ದರೂ ಮನ್ನಣೆ ನೀಡಿರಲಿಲ್ಲ. ಆದ್ರೆ, ಈಗ ನೀರು ಹರಿಸುವುದಕ್ಕೆ ಮುಂದಾಗಿರುವುದು ಭಾರತ ರೈತ ಒಕ್ಕೂಟ ಕೆರಳುವಂತೆ ಮಾಡಿದೆ.
ಅವೈಜ್ಞಾನಿಕ ವೇಳಾಪಟ್ಟಿ ರದ್ದುಗೊಳಿಸಬೇಕು. 20 ದಿನ ನೀರು ಹರಿಸಿ, 20 ದಿನ ನೀರು ನಿಲ್ಲಿಸುವ ವೇಳಾಪಟ್ಟಿಯನ್ನು ಘೋಷಣೆ ಮಾಡಬೇಕು. ದಾವಣಗೆರೆ ಜಿಲ್ಲೆಗೆ ನೀರು ಹರಿದು ಬರುವ ಮುಖ್ಯ ಕಾಲುವೆಯಲ್ಲಿ ನಿಗಧಿತ ಪ್ರಮಾಣದಲ್ಲಿ ನೀರು ಹರಿಸಬೇಕು ಎಂಬ ಬೇಡಿಕೆ ಇಟ್ಟಿದ್ದರೂ ಪ್ರಯೋಜನವಾಗಿರಲಿಲ್ಲ.
ಆದ್ರೆ, ಈಗ ಹಾವೇರಿ, ಗದಗ ಮತ್ತು ವಿಜಯನಗರ ಜಿಲ್ಲೆಯ ವ್ಯಾಪ್ತಿಗೆ ಬರುವ ಗದಗ, ಬೆಟಗೇರಿ, ಹಾವೇರಿ, ರಾಣೇಬೆನ್ನೂರು, ಬ್ಯಾಡಗಿ, ಕೂಡ್ಲಗಿ, ಕೊಟ್ಟೂರು, ಹಗರಿಬೊಮ್ಮನಹಳ್ಳಿ ಮತ್ತು ಹಿರೇಕೆರೂರು ಪಟ್ಟಣಗಳಿಗೆ ಅಲ್ಲದೇ ನದಿಯ ಪಕ್ಕದಲ್ಲಿ ಬರುವ ಗ್ರಾಮಗಳಿಗೆ ಬಹುಗ್ರಾಮ ನದಿ ನೀರು ಯೋಜನೆಯಡಿ ಕುಡಿಯುವ ನೀರು ಒದಗಿಸಲು ಮತ್ತು ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲ್ಲೂಕಿನ ಮೈಲಾರ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ವಾರ್ಷಿಕ ಕಾರ್ಣಿಕೋತ್ಸವ ಪ್ರಯುಕ್ತ 12 ಸಾವಿರ ಹರಿಸಲು ಮುಂದಾಗಿರುವುದು ಸರಿಯಲ್ಲ. ಮೊದಲು ಶೇಕಡಾ 70ರಷ್ಟಿರುವ ದಾವಣಗೆರೆ ಜಿಲ್ಲೆಯ ರೈತರ ಹಿತ ಕಾಪಾಡಬೇಕು. ಕುಡಿಯುವ ನೀರು ಪೂರೈಸಬೇಕು. ಆನಂತರ ಬೇಕಾದರೆ ನೀರು ಹರಿಸಲಿ. ಇಲ್ಲಿಗೆ ಸಾಕಾಗುವಷ್ಟು ನೀರಿಲ್ಲ ಎನ್ನುವ
ಅಧಿಕಾರಿಗಳು ಈಗ ಯಾವ ಮಾನದಂಡದ ಆಧಾರದ ಮೇಲೆ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದ್ದಾರೆ.
12 ಸಾವಿರ ಕ್ಯೂಸೆಕ್ ನೀರು ಹರಿಸಲು ತೆಗೆದುಕೊಂಡಿರುವ ನಿರ್ಧಾರ ರೈತ ವಿರೋಧಿಯಾಗಿದೆ. ರೈತರಿಗೆ ಮಂಕಬೂದಿ ಎರಚುವ ತೀರ್ಮಾನವಾಗಿದೆ. ಭದ್ರಾ ಅಚ್ಚುಕಟ್ಟುದಾರರ ಹಿತ ಮರೆತು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಹಾಗಾಗಿ, ಈ ನಿರ್ಧಾರ ವಾಪಸ್ ಪಡೆಯಬೇಕು ಎಂದು ರೈತ ಒಕ್ಕೂಟದ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಸತೀಶ್ ಕೊಳೇನಹಳ್ಳಿ ಸೇರಿದಂತೆ ರೈತ ಮುಖಂಡರು ಆಗ್ರಹಿಸಿದ್ದಾರೆ.
ಶ್ರೀ ಮೈಲಾರಿಂಗೇಶ್ವರ ಸ್ವಾಮಿ ವಾರ್ಷಿಕೋತ್ಸವದ ಪ್ರಯುಕ್ತ ಎಂದು ಹೇಳಿದ್ದಾರೆ. ಈ ಹಿಂದೆ ಹೊಳೆ ನೀರನ್ನು ಭಕ್ತರು, ಜನರು ಸೇವನೆ ಮಾಡುತ್ತಿದ್ದರು. ಈಗ ಬಾಟಲಿಯಲ್ಲಿ ನೀರು ತೆಗೆದುಕೊಂಡು ಹೋಗುತ್ತಾರೆ. ರಾಜ್ಯ ಸರ್ಕಾರವು ಸ್ಥಳದಲ್ಲಿಯೇ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು. ಆದ್ರೆ, ಇಂಥ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.