ಬೆಂಗಳೂರು: ಮೆಟ್ರೋ ಸಿಟಿ ಜೀವನ ಎಂದರೆ ಉತ್ತಮ ಕೆಲಸ, ಆಕರ್ಷಕ ವೇತನ, ಮನರಂಜನೆ ಹಾಗೂ ಆಧುನಿಕ ಮೂಲಸೌಕರ್ಯಗಳು ನಿಜ. ಆದರೆ, ಇದರ ಜೊತೆಗೆ ದೈನಂದಿನ ಟ್ರಾಫಿಕ್ ಜಾಮ್, ಸುದೀರ್ಘ ಪ್ರಯಾಣ ಹಾಗೂ ಬ್ಯುಸಿ ಶೆಡ್ಯೂಲ್ ಹುಟ್ಟಿಸುವ ಮಾನಸಿಕ ಒತ್ತಡ ಕಡಿಮೆ ಏನಲ್ಲ. ಬೆಂಗಳೂರಿನಲ್ಲಿದ್ದುಕೊಂಡು ಕೆಲಸ ಮಾಡುವ ವೈದ್ಯರೊಬ್ಬರು, ಮಹಾನಗರದ ಈ ಬ್ಯುಸಿ ಜೀವನ ಶೈಲಿಯನ್ನು ಉತ್ತರ ಕರ್ನಾಟಕದ ಸಣ್ಣ ನಗರವಾದ ಬೀದರ್ ಜೊತೆ ಹೋಲಿಸಿ ಬರೆದ ಸಾಮಾಜಿಕ ಜಾಲತಾಣದ ಪೋಸ್ಟ್ ಈಗ ನೆಟ್ಟಿಗರ ಗಮನ ಸೆಳೆದಿದೆ.
ಸಾಮಾಜಿಕ ಜಾಲತಾಣ ‘X’ (ಟ್ವಿಟರ್) ನಲ್ಲಿ ‘TheFitDoc’ (@Siddurp2) ಹೆಸರಿನ ಖಾತೆ ಹೊಂದಿರುವ ಬೆಂಗಳೂರಿನ ವೈದ್ಯರು ತಮ್ಮ ಇತ್ತೀಚಿನ ಬೀದರ್ ಭೇಟಿಯ ಅನುಭವವನ್ನು ಹಂಚಿಕೊಂಡಿದ್ದಾರೆ.
ಬೆಂಗಳೂರಿನಲ್ಲಿ 1 ದಿನದ ರಜೆಯೂ ಸಾಕಾಗುವುದಿಲ್ಲ!
ವೈದ್ಯರ ಪ್ರಕಾರ, ಬೆಂಗಳೂರಿನಲ್ಲಿ ವಾಸಿಸುವಾಗ ದೈನಂದಿನ ಕೆಲಸ ಮತ್ತು ಟ್ರಾಫಿಕ್‌ನಿಂದಾಗಿ ಸ್ವಂತಕ್ಕೆ ಸಮಯವೇ ಸಿಗುವುದಿಲ್ಲ. ವಾರಾಂತ್ಯದಲ್ಲಿ ಒಂದೇ ದಿನ ರಜೆ ಸಿಕ್ಕರೂ ಅದು ವಿಶ್ರಾಂತಿ ಪಡೆಯಲು ಅಥವಾ ವೈಯಕ್ತಿಕ ಕೆಲಸಗಳನ್ನು ಪೂರ್ಣಗೊಳಿಸಲು ಸಾಕಾಗುವುದಿಲ್ಲ ಎಂಬ ಭಾವನೆ ಮೂಡುತ್ತದೆ.
ಬೀದರ್‌ನಲ್ಲಿ ಸಮಯವೇ ನಿಂತಂತೆ ಭಾಸವಾಯಿತು!
ಆದರೆ, ಬೀದರ್‌ಗೆ ಹೋದಾಗ ಪರಿಸ್ಥಿತಿ ಸಂಪೂರ್ಣ ಬದಲಾಗಿತ್ತು. “ಬೀದರ್‌ನಲ್ಲಿ ಬೆಳಿಗ್ಗೆಯೇ ಸುದೀರ್ಘ ಓಟ (Run) ಮುಗಿಸಿ, ಉಪಹಾರ ಸೇವಿಸಿ, ಮಧ್ಯಾಹ್ನ ಸಣ್ಣ ನಿದ್ದೆಯನ್ನೂ ಮಾಡಿದೆ. ಆದರೂ ಸಮಯ ನೋಡಿದರೆ ಆಗಷ್ಟೇ ಮಧ್ಯಾಹ್ನ 2 ಗಂಟೆಯಾಗಿತ್ತು! ಸಂಜೆ ಮತ್ತೆ ಸಿನೆಮಾಗೆ ಹೋಗಲು ಸಹ ಸಮಯವಿತ್ತು” ಎಂದು ವೈದ್ಯರು ಬರೆದುಕೊಂಡಿದ್ದಾರೆ.
ಸಣ್ಣ ನಗರಗಳಲ್ಲಿ ಸುದೀರ್ಘ ಟ್ರಾಫಿಕ್ ಹಾಗೂ ಅನಗತ್ಯ ಪ್ರಯಾಣದ ಸಮಯ ಉಳಿಯುವುದರಿಂದ ದೈನಂದಿನ ದಿನಚರಿಯಲ್ಲಿ ವ್ಯಾಯಾಮ, ಆಹಾರ, ನಿದ್ದೆ ಮತ್ತು ಮನರಂಜನೆಗೆ ಸಾಕಷ್ಟು ಸಮಯ ಸಿಗುತ್ತದೆ ಎಂಬುದನ್ನು ಅವರ ಪೋಸ್ಟ್ ಬಿಂಬಿಸಿದೆ.
ನೆಟ್ಟಿಗರ ಪ್ರತಿಕ್ರಿಯೆ:
ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಅನೇಕರು ಸಣ್ಣ ನಗರಗಳು ಕಡಿಮೆ ಒತ್ತಡದ ಮತ್ತು ನೆಮ್ಮದಿಯ ಜೀವನವನ್ನು ನೀಡುತ್ತವೆ ಎಂದು ಒಪ್ಪಿಕೊಂಡಿದ್ದಾರೆ. ಇನ್ನು ಕೆಲವರು, ವೈದ್ಯರು ಬೆಳಿಗ್ಗೆ ಬೇಗ ಎದ್ದಿದ್ದರಿಂದ ಅವರಿಗೆ ಹೆಚ್ಚಿನ ಸಮಯ ಸಿಕ್ಕಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಟ್ಟಿನಲ್ಲಿ ಮಹಾನಗರ ಮತ್ತು ಸಣ್ಣ ನಗರಗಳ ಜೀವನಶೈಲಿಯ ನಡುವಿನ ವ್ಯತ್ಯಾಸವನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.





Leave a comment