ಬೆಂಗಳೂರು: ಕುಟುಂಬದ ವಿರೋಧ ಮೀರಿ ಪ್ರೇಮ ವಿವಾಹವಾಗಿದ್ದ 21 ವರ್ಷದ ಯುವತಿಯನ್ನು ಆಕೆಯ ಪೋಷಕರು ಕಳುಹಿಸಿದ ನಾಲ್ವರು ದುಷ್ಕರ್ಮಿಗಳು ಅಪಹರಿಸಲು ಯತ್ನಿಸಿದ್ದು, ಸಾರ್ವಜನಿಕರ ಚೇಸಿಂಗ್ ವೇಳೆ ಕಾರು ಸರಣಿ ಅಪಘಾತಕ್ಕೀಡಾಗಿ 6 ಜನರು ತೀವ್ರವಾಗಿ ಗಾಯಗೊಂಡಿರುವ ಆಘಾತಕಾರಿ ಘಟನೆ ಬೆಂಗಳೂರಿನ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದೆ.
ಘಟನೆಯ ವಿವರ:
ರಾಜಸ್ಥಾನ ಮೂಲದ ಪೂಜಾ (21) ಮತ್ತು ಓಂ ಪ್ರಕಾಶ್ (23) ಎಂಟು-ಒಂಬತ್ತು ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿದ್ದರು. ಇಬ್ಬರ ಕುಟುಂಬಸ್ಥರು ಈ ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ, ದಂಪತಿ ಬೆಂಗಳೂರಿಗೆ ಬಂದು ಅಗ್ರಹಾರ ದಾಸರಹಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು.
ಬುಧವಾರ ಸಂಜೆ ಪೂಜಾ ಅವರ ಕುಟುಂಬದವರು ಆಕೆಯನ್ನು ಬಲವಂತವಾಗಿ ರಾಜಸ್ಥಾನಕ್ಕೆ ಕರೆದೊಯ್ಯಲು ನಾಲ್ವರು ಯುವಕರನ್ನು ಕಳುಹಿಸಿದ್ದರು. ಹ್ಯುಂಡೈ ವೆನ್ಯೂ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮನೆಗೆ ನುಗ್ಗಿ ಪೂಜಾಳನ್ನು ಅಪಹರಿಸಿದ್ದಾರೆ. ಆಕೆಯ ಚೀರಾಟ ಕೇಳಿದ ಸ್ಥಳೀಯರು ಕಾರನ್ನು ತಡೆಯಲು ಯತ್ನಿಸಿದಾಗ, ಚಾಲಕ ಅತಿ ವೇಗವಾಗಿ ಕಾರನ್ನು ಚಲಾಯಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದಾನೆ.
ಸಿನಿಮೀಯ ಚೇಸಿಂಗ್ ಮತ್ತು ಅಪಘಾತ:
ಸ್ಥಳೀಯರು ಕಾರನ್ನು ಬೆನ್ನಟ್ಟಿದಾಗ, ಚಾಲಕ ಸದ್ದಾಂ ಇತರ ವಾಹನಗಳಿಗೆ ಹಾಗೂ ಹಾದಿಹೋಕರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಅಪಘಾತದಲ್ಲಿ ಆರು ಜನರು ಗಾಯಗೊಂಡಿದ್ದು, ಓರ್ವ ಮಹಿಳೆಯ ತಲೆಗೆ ತೀವ್ರ ಗಾಯವಾಗಿ ಐಸಿಯುನಲ್ಲಿ (ICU) ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಿಮವಾಗಿ ವಿಜಯನಗರ ಬಳಿ ಸ್ಥಳೀಯರು ಕಾರಿನ ಮೇಲೆ ಕಲ್ಲು ತೂರಿ ವಾಹನವನ್ನು ತಡೆದು, ಪೂಜಾಳನ್ನು ರಕ್ಷಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸ್ ಕಸ್ಟಡಿಯಲ್ಲಿ ಆರೋಪಿಗಳು:
ವಿಜಯನಗರ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಕೃತ್ಯದಲ್ಲಿ ಭಾಗಿಯಾಗಿದ್ದ ರಾಕೇಶ್ (31), ಕರಣ್ (25) ಮತ್ತು ಅಯಾನ್ (18) ಎಂಬ ಮೂವರು ಆರೋಪಿಗಳನ್ನು ಬಂಧಿಸಿದ್ದು, ಚಾಲಕ ಸದ್ದಾಂ ತಲೆಮರೆಸಿಕೊಂಡಿದ್ದಾನೆ. ಕೃತ್ಯಕ್ಕೆ ಬಳಸಿದ್ದ ಹ್ಯುಂಡೈ ವೆನ್ಯೂ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.





Leave a comment