SUDDIKSHANA KANNADA NEWS/ DAVANAGERE/ DATE:11-06-2024
ದಾವಣಗೆರೆ: ತಾಲ್ಲೂಕಿನ ಗುಡಾಳು ಗ್ರಾಮದ ಗೊಲ್ಲರಹಟ್ಟಿಯ ರೈತ ಹನುಮಂತಪ್ಪ ಅವರ ಆತ್ಮಹತ್ಯೆಗೆ ಸಂಬಂಧಿಸಿದಂತೆ ಕೆನರಾ ಬ್ಯಾಂಕಿನ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ರಾಜ್ಯ ರೈತ ಸಂಘ, ಹಸಿರು ಸೇನೆ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದಿಂದ ಆಂಜನೇಯ ಬಡಾವಣೆಯಲ್ಲಿರುವ ಬ್ಯಾಂಕಿನ ಎಜಿಎಂ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಲಾಯಿತು.
ನಂತರ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಡಾ. ಎಂ. ವಿ. ವೆಂಕಟೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮೃತ ಹನುಮಂತಪ್ಪ ಅವರ 8 ಲಕ್ಷ ರೂ ಸಾಲವನ್ನು ಮನ್ನಾ ಮಾಡಲು ಬ್ಯಾಂಕ್ ನಿರ್ಧರಿಸಿದೆ ಎಂದು ಬ್ಯಾಂಕ್ ಅಧಿಕಾರಿಗಳು ಸಭೆಗೆ ತಿಳಿಸಿದರು.
ಮನೆ ಸಾಲ ತುಂಬಲು ರೈತ ಹನುಮಂತಪ್ಪ ಮುಂದೆ ಬಂದಿದ್ದರೂ ಅದಕ್ಕೆ ಅವಕಾಶ ನೀಡದೇ ಒತ್ತಡ ಹೇರಿದ ಬ್ಯಾಂಕ್ ಅಧಿಕಾರಿಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು ಮಾನವೀಯತೆ ನೆಲೆಮೇಲೆ 2.10 ಲಕ್ಷ ರೂ ಸಾಲ ತುಂಬಿಸಿಕೊಂಡಿದ್ದರೆ ರೈತನ ಪ್ರಾಣ ಉಳಿಯುತಿತ್ತು. ಇದೀಗ ಆಗಿರುವ ಪ್ರಮಾದಕ್ಕೆ ನೀವೆ ಜವಾಬ್ದಾರರು ಎಂದು ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡರು.
ಇದೀಗ ಮನೆ ಮತ್ತು ಕುರಿ ಸಾಲ ಸೇರಿ 8 ಲಕ್ಷ ರೂ ಮನ್ನಾ ಮಾಡುವುದಾಗಿ ಬ್ಯಾಂಕ್ ಅಧಿಕಾರಿಗಳು ಸಭೆಯಲ್ಲಿ ತಿಳಿಸಿದರು. ಈ ವೇಳೆ ಸರ್ಕಾರದ ಪರಿಹಾರ ಧನ 5 ಲಕ್ಷ ರೂ, 20 ಸಾವಿರ ರೂ ರಾಷ್ಟ್ಕೀಯ ಕುಂಟುಂಬದ ಪರಿಹಾರ ಮತ್ತು ಅಂತ್ಯ ಸಂಸ್ಕಾರದ 5 ಸಾವಿರ ಒಟ್ಟಾರೆ 5. 25 ಲಕ್ಷ ರೂಗಳನ್ನು ವಾರದಲ್ಲಿ ಕೊಡಿಸುವುದಾಗಿ ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.
ಆದರೆ ರೈತ ಸಂಘದ ಮುಖಂಡರು ಇದಕ್ಕೆ ಸಮ್ಮತಿ ಸೂಚಿಸದೇ, ಸಿಎಸ್ಆರ್ ಅನುದಾನಡಿಯಲ್ಲಿ ಕೆನರಾಬ್ಯಾಂಕ್ ಅಧಿಕಾರಿಗಳು 50 ಲಕ್ಷ ರೂ ಪರಿಹಾರ ನೀಡಬೇಕೆಂದು ಪಟ್ಟು ಹಿಡಿದರು. ಈ ಸಂಬಂಧ ಬ್ಯಾಂಕಿನ ಮೇಲಾಧಿಕಾರಿಗಳಿಗೆ
ಪತ್ರ ಬರೆದು ಎಷ್ಟು ಸಾಧ್ಯವೋ ಅಷ್ಟು ಕೊಡಿಸುವ ಪ್ರಯತ್ನ ಮಾಡುವುದಾಗಿ ಬ್ಯಾಂಕ್ ಅಧಿಕಾರಿಗಳು ಒಪ್ಪಿಗೆ ಸೂಚಿಸಿದರು.
ಮೃತ ಹನುಮಂತಪ್ಪನ ಇಬ್ಬರು ಮಕ್ಕಳಿಗೆ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಪ್ರವೇಶ ಕಲ್ಪಿಸುವುದು ಮತ್ತು ಅಂಗವಿಕಲ ಪತ್ನಿಗೆ ಉದ್ಯೋಗ ನೀಡಬೇಕೆಂದು ರೈತ ಸಂಘದ ಬೇಡಿಕೆಗೆ ಸೂಕ್ತವಾಗಿ ಸ್ಪಂದಿಸುವುದಾಗಿ ಜಿಲ್ಲಾಧಿಕಾರಿ ಭರವಸೆ ನೀಡಿದ ಮೇರೆಗೆ ಮೃತ ಹನುಮಂತಪ್ಪ ಅವರ ಮರಣೋತ್ತರ ಪರೀಕ್ಷೆಗೆ ಅನುಮತಿ ನೀಡಿ ಅವರ ಶವವನ್ನು ಗ್ರಾಮಕ್ಕೆ ಕೊಂಡೊಯ್ದು ಅಂತ್ಯ ಸಂಸ್ಕಾರಕ್ಕೆ ಒಪ್ಪಿಗೆ ಸೂಚಿಸಲಾಯಿತು.
ಈ ಸಂದರ್ಭದಲ್ಲಿ ಹುಚ್ಚವ್ವನಹಳ್ಳಿ ಮಂಜುನಾಥ್, ಗುಮ್ಮನೂರು ಶಂಭುಲಿಂಗಪ್ಪ, ಲೋಕೇಶ್, ರುದ್ರೇಶ್, ಹೂವಿನಮಡು ನಾಗರಾಜ್, ರಾಜನಹಟ್ಟಿ ರಾಜು, ಎಲೋದಹಳ್ಳಿ ರವಿ, ಅಸ್ತಪನಹಳ್ಳಿ ಗಂಡುಗಲಿ, ಕೋಗಲೂರು ಕುಮಾರ, ಕುರ್ಕಿ ಹನುಮಂತ, ಚಿಕ್ಕಮಲ್ಲನ ಹೊಳೆ ಚಿರಂಜೀವಿ, ಹುಚ್ಚವ್ವನಹಳ್ಳಿ ಪ್ರಕಾಶ್, ಪೂಜಾರ ಅಂಜಿನಪ್ಪ ನಿಟುವಳ್ಳಿ, ಸಿರಗಾನಹಳ್ಳಿ ಪರಶುರಾಮ್ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.