ಬಾಂಗ್ಲಾ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ದೇಶಭ್ರಷ್ಟರಾಗಿ ತೆರಳುವ ದೃಶ್ಯಾವಳಿಗಳನ್ನು ಸೆರೆಹಿಡಿದು ಹಂಚಿಕೊಂಡಿದ್ದಾರೆನ್ನಲಾದ ಮಾಜಿ ವಾಯುಪಡೆ ಅಧಿಕಾರಿ ಕೆ.ಎಂ. ತಹ್ಸಿಫ್ ಸೌರಿ (28) ಅವರ ಶವವು ಢಾಕಾದ ತುರಾಗ್ ನದಿಯಲ್ಲಿ ಪತ್ತೆಯಾಗಿದೆ. ಮೃತ ಅಧಿಕಾರಿ ಕಳೆದ ಮಂಗಳವಾರದಿಂದ ನಾಪತ್ತೆಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆಗಸ್ಟ್ 5, 2024 ರಂದು ಶೇಖ್ ಹಸೀನಾ ಅವರು ಮಿಲಿಟರಿ ವಿಮಾನದಲ್ಲಿ ದೇಶಬಿಟ್ಟು ಪರಾರಿಯಾದ ವೀಡಿಯೊವನ್ನು ಹಂಚಿಕೊಂಡಿದ್ದಕ್ಕಾಗಿ ಸೌರಿ ತೀವ್ರ ಮಾನಸಿಕ ಕಿರುಕುಳ ಮತ್ತು ಬೆದರಿಕೆಗಳನ್ನು ಎದುರಿಸುತ್ತಿದ್ದರು ಎಂದು ಅವರ ಕುಟುಂಬ ಗಂಭೀರ ಆರೋಪ ಮಾಡಿದೆ. ಈ ಸಾವು ಆತ್ಮಹತ್ಯೆಯೋ, ಅಪಘಾತವೋ ಅಥವಾ ಕೊಲೆಯೋ ಎಂಬುದು ಮರಣೋತ್ತರ ಪರೀಕ್ಷೆಯ ವರದಿಯ ಬಳಿಕವಷ್ಟೇ ತಿಳಿಯಲಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಕುಟುಂಬದಿಂದ ಕೊಲೆ ಆರೋಪ: ಶೇಖ್ ಹಸೀನಾ ಅವರ ಪಲಾಯನ ವೀಡಿಯೊವನ್ನು ಶೇರ್ ಮಾಡಿದ್ದೇ ತಹ್ಸಿಫ್ ಸೌರಿ ಮಾಡಿದ ಅಪರಾಧವೇ? ಅವರನ್ನು ವ್ಯವಸ್ಥಿತವಾಗಿ ಕೊಲೆ ಮಾಡಲಾಗಿದೆ ಎಂದು ಸೌರಿಯ ಸೋದರ ಸಂಬಂಧಿ ಮೊಶ್ಫೆಕಾ ಜಹಾನ್ ಫೇಸ್ಬುಕ್ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.
ಶವ ಪತ್ತೆ ಮತ್ತು ಗುರುತು: ಢಾಕಾದ ತುರಾಗ್ ನದಿಯಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಮೃತರ ಜೇಬಿನಲ್ಲಿದ್ದ ಐಫೋನ್ ಮೂಲಕ ಅವರ ಗುರುತನ್ನು ಪತ್ತೆ ಹಚ್ಚಿ ಶಾಹೀದ್ ಸುಹ್ರಾವರ್ದಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದೆ.
ಸ್ವಯಂ ನಿವೃತ್ತಿ ವಿವಾದ: ಕಳೆದ ವರ್ಷ ಆಗಸ್ಟ್ 2025 ರಲ್ಲಿ ಸೌರಿಯವರನ್ನು ವಾಯುಪಡೆಯಿಂದ ನಿಯಮಾನುಸಾರ ಬಿಡುಗಡೆಗೊಳಿಸಲಾಗಿದೆ ಎಂದು ಐಎಸ್ಪಿಆರ್ ತಿಳಿಸಿದ್ದರೂ, ಈ ಘಟನೆಗೂ ಹಸೀನಾ ವೀಡಿಯೊ ಲೀಕ್ ವಿವಾದಕ್ಕೂ ನಂಟಿದೆ ಎಂದು ಶಂಕಿಸಲಾಗಿದೆ.
ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಭಾರತದಿಂದ ಬಾಂಗ್ಲಾದೇಶಕ್ಕೆ ಮರಳಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಈ ನಿಗೂಢ ಸಾವು ಸಂಭವಿಸಿರುವುದು ದೇಶದಲ್ಲಿ ಭಾರೀ ರಾಜಕೀಯ ಸಂಚಲನ ಸೃಷ್ಟಿಸಿದೆ.





Leave a comment