SUDDIKSHANA KANNADA NEWS/ DAVANAGERE/ DATE:20-03-2024
ದಾವಣಗೆರೆ: ನಗರದ ಶಕ್ತಿದೇವತೆ ದುರ್ಗಾಂಬಿಕೆ ತಾಯಿಯ ಜಾತ್ರಾ ಮಹೋತ್ಸವದ ರಂಗು ಜೋರಾಗಿದೆ. ಎಲ್ಲೆಲ್ಲೂ ಬಾಡೂಟದ ಘಮಲು.. ಘಮಲು.. ದುರ್ಗಾಂಬಿಕಾ ದೇವಸ್ಥಾನದಲ್ಲಂತೂ ಜನಜಂಗುಳಿಯೇ ನೆರೆದಿತ್ತು. ತಾಯಿಯ ದರ್ಶನಕ್ಕೆ ಸಾವಿರಾರು ಮಂದಿ ಸರತಿ ಸಾಲಿನಲ್ಲಿ ನಿಂತಿದ್ದರು.
ಬಿಸಿಲಿನ ಝಳ ಹೆಚ್ಚಾದರೂ ದೇವಿಯ ದರ್ಶನಕ್ಕೆ ಭಕ್ತರು ನಿಂತಿದ್ದರು. ಅಲ್ಲಲ್ಲಿ ಕುಡಿಯುವ ನೀರು, ಮಜ್ಜಿಗೆ ವ್ಯವಸ್ಥೆ ಮಾಡಲಾಗಿತ್ತು. ದಾವಣಗೆರೆಯ ಹಳೇಪೇಟೆಯಂತೂ ದುರ್ಗಾಂಬಿಕಾ ತಾಯಿಯ ಜಾತ್ರಾ ಮಹೋತ್ಸವದ ಸಂಭ್ರಮ ಮುಗಿಲು ಮುಟ್ಟಿತ್ತು.
ಎರಡು ವರ್ಷಕ್ಕೊಮ್ಮೆ ನಡೆಯುವ ಜಾತ್ರಾ ಮಹೋತ್ಸವಕ್ಕೆ ಮಂಗಳವಾರ ಚಾಲನೆ ಸಿಕ್ಕಿದ್ದು, ಇಂದು ಅಂದಾಜಿನ ಪ್ರಕಾರ ಸುಮಾರು 60 ಸಾವಿರಕ್ಕೂ ಹೆಚ್ಚು ಕುರಿಗಳನ್ನು ಕಡಿದು ಬಾಡೂಟ ಮಾಡಲಾತು. ಸಂಬಂಧಿಕರು, ನೆಂಟರಿಸ್ಟರು, ಸ್ನೇಹಿತರು ಬಾಡೂಟ ಸವಿದು ಖುಷಿಪಟ್ಟರು.
ಅಂದಾಜಿನ ಪ್ರಕಾರ ಜಾತ್ರಾ ಮಹೋತ್ಸವಕ್ಕೆ 12 ಲಕ್ಷಕ್ಕೂ ಅಧಿಕ ಹೆಚ್ಚು ಮಂದಿ ಜಾತ್ರಾ ಪಾಲ್ಗೊಳ್ಳಲಿದ್ದಾರೆ. ದಾವಣಗೆರೆಯ ಹಳೇಪೇಟೆಯಲ್ಲಿ ಎಲ್ಲಿ ನೋಡಿದರೂ ಪೆಂಡಾಲ್ ಹಾಕಿರುವುದು ಕಂಡು ಬರುತ್ತಿದೆ. ಕುರಿಗಳನ್ನು ಈಗಾಗಲೇ ಕಡಿದು ಬಾಡೂಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದ ದೃಶ್ಯ ಸಾಮಾನ್ಯವಾಗಿ ಕಂಡು ಬಂತು. ಕುರಿ ಊಟಕ್ಕಂತೂ ತಾ ಮುಂದು ನಾ ಮುಂದು ಅಂತಾ ಹೋಗುತ್ತಿದ್ದದ್ದು ಕಂಡು ಬಂತು.
ಈಗಾಗಲೇ ದುರ್ಗಾಂಬಿಕೆ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿದೆ. ದೇವಿಯ ದರ್ಶನಕ್ಕೆ ಸಾಲುಗಟ್ಟಲೇ ಜನರು ನಿಂತಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜನರು ಮಂಗಳವಾರದಿಂದಲೇ ತಾಯಿ ದರುಶನಕ್ಕೆ ಸರತಿ ಸಾಲಿನಲ್ಲಿ ನಿಂತಿರುವುದು ಸಾಮಾನ್ಯವಾಗಿದೆ. ರಾಜ್ಯ ಮಾತ್ರವಲ್ಲ ವಿದೇಶಗಳಿಂದಲೂ ದುರ್ಗಾಂಬಿಕಾ ತಾಯಿ ದರ್ಶನಕ್ಕೆ ಭಕ್ತರು ಆಗಮಿಸಿದ್ದು ವಿಶೇಷ. ಇಡೀ ದಾವಣಗರೆಯಲ್ಲಿ ಹಬ್ಬದ ಸಂಭ್ರಮ ಕಂಡಹ ಬರುತ್ತಿದೆ.
ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕೋಟ್ಯಂತರ ರೂಪಾಯಿ ವಹಿವಾಟು ನಡೆಯುತ್ತಿದೆ. ಕುರಿ, ಕೋಳಿ, ಮಸಾಲೆ ಪದಾರ್ಥ ಸೇರಿದಂತೆ ಕೋಟ್ಯಂತರ ರೂಪಾಯಿ ವ್ಯಾಪಾರ ನಡೆದಿದೆ. ಒಂದು ಅಂದಾಜಿನ ಪ್ರಕಾರ ಹಬ್ಬ ಮುಗಿಯುವಷ್ಟರಲ್ಲಿ 50 ಕೋಟಿ ರೂಪಾಯಿಗೂ ಹೆಚ್ಚು ವಹಿವಾಟು ನಡೆಯುತ್ತದೆ ಎಂದು ಅಂದಾಜಿಸಲಾಗಿದೆ.
ಒಟ್ಟಿನಲ್ಲಿ ದಾವಣಗೆರೆಯಲ್ಲಿ ಮಟನ್ ಘಮ ಘಮ ಎಲ್ಲೆಡೆ ಪಸರಿಸಿತ್ತು. ಬೆಳಿಗ್ಗೆಯಿಂದ ರಾತ್ರಿಯಾದರೂ ಸಹ ದುರ್ಗಾಂಬಿಕಾ ತಾಯಿಯ ದರ್ಶನಕ್ಕೆ ಜನರು ಸರತಿ ಸಾಲಿನಲ್ಲಿ ಕಂಡು ಬಂತು. ಕಳೆದ ಎರಡು ವರ್ಷಗಳ ಹಿಂದೆ ಕೊರೊನಾ ಸೋಂಕಿನ ಭಯ ಕಾಡಿತ್ತು. ಆದ್ರೆ, ಈ ವರ್ಷ ಯಾವ ಭಯವೂ ಇಲ್ಲದೇ ಜನರು ನಿರಾಳರಾಗಿ ಸಂಭ್ರಮದಿಂದ ಹಬ್ಬ ಆಚರಿಸಿದರು.
ವಿಶೇಷ ಪೂಜೆ: ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ರಾತ್ರಿ ವಿದ್ಯುದೀಪಾಲಂಕಾರ ಮಾಡಲಾಗಿದ್ದು. ದೇವಸ್ಥಾನವು ಬಣ್ಣ ಬಣ್ಣದ ಬೆಳಕಿನಿಂದ ಕಂಗೊಳಿಸುತ್ತಿದೆ.
ದಾವಣಗೆರೆ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕಾಂಗ್ರೆಸ್ ಹಿರಿಯ ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವ ಎಸ್. ಎಸ್. ಮಲ್ಲಿಕಾರ್ಜುನ್, ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ದುರ್ಗಾಂಬಿಕಾ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ದೇವಿಯ ದರ್ಶನ ಪಡೆದರು.