SUDDIKSHANA KANNADA NEWS/ DAVANAGERE/ DATE:02-09-2024
ಬೆಂಗಳೂರು: ಕೆಪಿಎಸ್ಸಿ ಪರೀಕ್ಷೆಯಲ್ಲಿ ಆದ ಲೋಪದ ವಿರುದ್ಧ ಬಿಜೆಪಿ ಹೋರಾಟ ನಡೆಸಿತ್ತು. ಆಗ್ರಹಕ್ಕೆ ಮಣಿದು ಪರೀಕ್ಷಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಮರು ಪರೀಕ್ಷೆಗೆ ಆದೇಶಿಸಿರುವ ಸರ್ಕಾರದ ನಿರ್ಧಾರವನ್ನು ಸ್ವಾಗತಿಸುತ್ತೇನೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಹೇಳಿದ್ದಾರೆ.
ಸಾವಿರಾರು ಪರೀಕ್ಷಾರ್ಥಿಗಳು ಧರಣಿ ನಡೆಸಿದರೂ ಧರಣಿ ನಿರತ ಉದ್ಯೋಗಾಕಾಂಕ್ಷಿಗಳನ್ನು ಬಂಧಿಸಿ ಹಾಗೂ ಬಿಡುಗಡೆಗೆ ಆಗ್ರಹಿಸಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಪೊಲೀಸ್ ದಂಡ ಪ್ರಯೋಗಿಸಿದ್ದಲ್ಲದೇ ಹಠಕ್ಕೆ ಬಿದ್ದವರಂತೆ ಪರೀಕ್ಷೆ ನಡೆಸುವ ಮುನ್ನವೇ ಈ ನಿರ್ಧಾರ ಕೈಗೊಳ್ಳಬಹುದಾಗಿತ್ತು ಎಂದು ಹೇಳಿದ್ದಾರೆ.
ಸರ್ಕಾರವು ನಡೆಸುವ ಪರೀಕ್ಷಾ ವ್ಯವಸ್ಥೆಯಲ್ಲಿ ಉದ್ಯೋಗವನ್ನು ಅರಸಿ ಪರೀಕ್ಷೆಗಳನ್ನು ಎದುರಿಸುವ ನಿರುದ್ಯೋಗಿಗಳನ್ನು ಸಂಕಷ್ಟಕ್ಕೀಡು ಮಾಡುವ ವ್ಯವಸ್ಥೆ ಇನ್ಯಾವ ಸಂದರ್ಭದಲ್ಲಿಯೂ ಉದ್ಭವಿಸದಂತೆ ಸರ್ಕಾರ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲಿ. ಉದ್ಯೋಗಾಕಾಂಕ್ಷಿಗಳೊಂದಿಗೆ ಚೆಲ್ಲಾಟದ ಪ್ರಕರಣಗಳು ಮತ್ತೆ ಮರುಕಳಿಸದಿರಲಿ ಎಂಬುದು ಭಾರತೀಯ ಜನತಾ ಪಾರ್ಟಿಯ ಪ್ರಾಮಾಣಿಕ ಕಾಳಜಿಯಾಗಿದೆ ಎಂದು ಹೇಳಿದ್ದಾರೆ.