SUDDIKSHANA KANNADA NEWS/ DAVANAGERE/ DATE:13-08-2024
ಹಿರೇಕೆರೂರು/ ದಾವಣಗೆರೆ: ಸಿರಿಗೆರೆ ಮಠದ ಏಕವ್ಯಕ್ತಿ ಟ್ರಸ್ಟ್ ಡಿಡ್ ರದ್ದಾಗಬೇಕು. ಸಿರಿಗೆರೆಯ ಶ್ರೀಮದ್ ಸಾಧು ಸದ್ಧರ್ಮ ಪೀಠಕ್ಕೆ ನೂತನ ಪೀಠಾಧಿಕಾರಿಗಳ ನೇಮಕ ಆಗುವವರೆಗೂ ನಮ್ಮ ಹೋರಾಟ ನಿಲ್ಲದು ಎಂದು ಮಾಜಿ ಸಚಿವ ಬಿ. ಸಿ. ಪಾಟೀಲ್ ಘೋಷಿಸಿದರು.
ಹಿರೇಕೆರೂರ ಪಟ್ಟಣದ ತನ್ನ ನಿವಾಸದಲ್ಲಿ ನಡೆದ ಸಾಧು ಸದ್ಧರ್ಮ ವೀರಶೈವ ಸಮಾಜ ಸಭೆಯಲ್ಲಿ ಸಮಸ್ತ ಭಕ್ತರನ್ನು ಕುರಿತು ಮಾತನಾಡಿದರು.
ವಿಶ್ವ ಬಂದು ಮರುಳುಸಿದ್ದರು ಸ್ಥಾಪಿಸಿದ ಶ್ರೀಮದ್ ಸಾಧು ಸದ್ಧರ್ಮ ಸಮಾಜಕ್ಕೆ ಭವ್ಯವಾದ ಪರಂಪರೆ ಇದೆ. ಲಕ್ಷಾಂತರ ಭಕ್ತರ ಸಮುದಾಯ ಹೊಂದಿದ ಈ ಮಠ ರಾಜ್ಯದಲ್ಲಷ್ಟೇ ಅಲ್ಲದೆ ರಾಷ್ಟ್ರದಲ್ಲಿಯೂ ತನ್ನ ಸಮಯ ಪ್ರಜ್ಞೆ ಹಾಗೂ
ಶಿಸ್ತಿಗೆ ಹೆಸರುವಾಸಿಯಾದ ಮಠವಾಗಿತ್ತು. ಲಿಂಗೈಕ್ಯ ಗುರುಗಳಾದ ಶಿವಕುಮಾರ ಮಹಾಸ್ವಾಮಿಗಳು ಈ ದುಗ್ಗಾಣಿ ಮಠವನ್ನು ಸುಜ್ಞಾನಿ ಮಠವಾಗಿರಿಸಲು ಮೂರು ಶತಮಾನಗಳ ಕಾಲ ಜಗ್ಗದೆ ಬಗ್ಗದೆ ಬಡತನದ ಸಮಾಜದಲ್ಲಿ ನೊಂದು ಬೆಂದು
ಈ ಸಮಾಜವನ್ನು ಕಟ್ಟಿ ಬೆಳೆಸಿದರು ಎಂದರು.
ಶರಣರು ಕಂಡ ಈ ಸಮಾಜವನ್ನು ಮತ್ತೆ ಕಟ್ಟಬೇಕೆಂದು ಶ್ರಮಿಸಿದವರು ಲಿಂಗೈಕ್ಯ ಶ್ರೀಗಳು. ಆದರೆ ಈ ಮಠ ಇಂದು ಓರ್ವ ಏಕವ್ಯಕ್ತಿಯ ಕೈಯಲ್ಲಿ ಸಿಕ್ಕು ನಲುಗಿದೆ. ಅದರಿಂದ ಪಾರು ಮಾಡಬೇಕೆಂಬುದೇ ನಮ್ಮ ಸಮಾಜದ ಸದ್ಭಕ್ತರ ಆಶಯವಾಗಿದೆ
ಎಂದು ಸಭೆಯಲ್ಲಿ ಅಭಿಪ್ರಾಯಪಟ್ಟರು.
ಸಭೆಯಲ್ಲಿ ಮಾತನಾಡಿದ ದಾವಣಗೆರೆಯ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ ವೈಚಾರಿಕ ಪರಂಪರೆಗೆ ನಾಂದಿ ಹಾಡಿದ ಹಾಗೂ ಬಸವೇಶ್ವರರು ಕಟ್ಟ ಬಯಸಿದ ನಮ್ಮ ಸಮಾಜ ಮತ್ತೆ ಮೊದಲಿನಂತಾಗಬೇಕು. ನಾವು ಈಗಿರುವ ಪೂಜ್ಯರ ಧೋರಣೆಯನ್ನ ಯಾವುದೇ ಕಾರಣಕ್ಕೂ ಒಪ್ಪುವುದಿಲ್ಲ ಒಪ್ಪುವುದಾದರೆ ಈಗಿರುವ ಪೂಜ್ಯರು ತಾವೇ ಸ್ವತಹ ರಚಿಸಿಕೊಂಡ ಡೀಡ್ ರದ್ದು ಪಡಿಸಬೇಕು ಬೃಹನ್ಮಠದ ಹಳೆಯ ಡೀಡ್ ಪ್ರಕಾರ ನೂತನ ಪೀಠಾಧಿಪತಿಯನ್ನು ಆಯ್ಕೆ ಮಾಡಬೇಕು ಹಾಗೂ ಪೂಜ್ಯರು ನಿವೃತ್ತಿ ಘೋಷಣೆ ಮಾಡಬೇಕು. ಇಲ್ಲವಾದಲ್ಲಿ ನಮ್ಮ ಹೋರಾಟ ಉಗ್ರವಾಗಿರುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಬ್ಯಾಡಗಿ ತಾಲೂಕಿನ ಮಾಜಿ ಶಾಸಕ ಸುರೇಶ್ ಗೌಡ ಪಾಟೀಲ್, ಶಿಕಾರಿಪುರ ತಾಲೂಕಿನ ಸಾಧು ಸಮಾಜದ ಅಧ್ಯಕ್ಷ ಚಂದ್ರಪ್ಪ ಜಂಬೂರ, ರಾಣೆಬೆನ್ನೂರು ತಾಲೂಕಿನ ಸಮಾಜದ ಮಾಜಿ ಅಧ್ಯಕ್ಷ ಮಲ್ಲೇಶಪ್ಪ ಅರಿಕೇರಿ, ರಟ್ಟಿಹಳ್ಳಿ ತಾಲೂಕಿನ ಸಮಾಜದ ಅಧ್ಯಕ್ಷ ಮಾಲತೇಶ್ ಗಂಗೋಳ್ಳ, ಸಮಾಜದ ಮುಖಂಡರಾದ ಎಸ್. ಬಿ. ತಿಪ್ಪಣ್ಣನವರ್, ಬಿ. ಎನ್. ಬಣಕಾರ್, ಜಟ್ಟಪ್ಪ ಕರೆಗೌಡ್ರು, ಕೆ. ಬಿ, ಬಾಳಿಕಾಯಿ, ಪ್ರಕಾಶ್ ಗೌಡ, ಗೌಡರ್ ಜಯಣ್ಣ, ಹೊಳೆ ಆನವೇರಿಯ ಆರ್. ಎನ್. ಗಂಗೋಳ್, ಆರ್.ಎನ್.ಬಾಳಿಕಾಯಿ, ದೊಡ್ಡ ಗೌಡ್ರು ಪಾಟೀಲ್ ಹಾಗೂ ಹಿರೇಕೆರೂರ್, ರಾಣೆಬೆನ್ನೂರು ಬ್ಯಾಡಗಿ ಶಿಕಾರಿಪುರ ಮುಂತಾದ ತಾಲೂಕುಗಳ ಮುಖಂಡರು ಸಭೆಯಲ್ಲಿ ಪಾಲ್ಗೊಂಡಿದ್ದರು.