ದಾವಣಗೆರೆ: ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ತೀವ್ರಗೊಂಡಿದ್ದು, ಬರದ ಛಾಯೆ ಆವರಿಸಿದೆ. ಜಿಲ್ಲೆಯ ಕೃಷಿ ಚಟುವಟಿಕೆಗಳ ಅಂಕಿ-ಅಂಶಗಳ ಪ್ರಕಾರ, ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದ ಕಾರಣ ಬಿತ್ತನೆ ಕಾರ್ಯವು ತೀವ್ರ ಕುಂಠಿತಗೊಂಡಿದೆ. ಈ ಹಿನ್ನೆಲೆಯಲ್ಲಿ ರೈತರು ಪರಿಸ್ಥಿತಿಗೆ ತಕ್ಕಂತೆ ಪರ್ಯಾಯ ಬೆಳೆಗಳ ಕಡೆಗೆ ಗಮನಹರಿಸಬೇಕೆಂದು ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ.ಕೆ ತಿಳಿಸಿದ್ದಾರೆ.
ಶೇ. 49 ರಷ್ಟು ಮಳೆ ಕೊರತೆ:
ಜಿಲ್ಲೆಯಲ್ಲಿ ಜೂನ್ 1 ರಿಂದ ಜುಲೈ 15 ರವರೆಗಿನ ಅವಧಿಯ ವಾಡಿಕೆ 127.7 ಮಿ.ಮೀ ಮಳೆಗೆ, 65.6 ಮಿ.ಮೀ ನಷ್ಟು ಮಾತ್ರ ಮಳೆಯಾಗಿದೆ. ಅಂದರೆ ಜಿಲ್ಲೆಯಲ್ಲಿ ಒಟ್ಟಾರೆ ಶೇ.49 ರಷ್ಟು ಮಳೆ ಕೊರತೆ ದಾಖಲಾಗಿದೆ.
ತಾಲ್ಲೂಕುವಾರು ಮುಂಗಾರು ಮಳೆ ಕೊರತೆಯ ವಿವರ:
ಹೊನ್ನಾಳಿ: ಶೇ.59 ರಷ್ಟು ತೀವ್ರ ಕೊರತೆ. ನ್ಯಾಮತಿ: ಶೇ.57 ರಷ್ಟು ಕೊರತೆ. ಚನ್ನಗಿರಿ: ಶೇ.56 ರಷ್ಟು ಕೊರತೆ. ದಾವಣಗೆರೆ: ಶೇ.48 ರಷ್ಟು ಕೊರತೆ. ಜಗಳೂರು ಹಾಗೂ ಹರಿಹರ: ಕ್ರಮವಾಗಿ ಶೇ.38 ರಷ್ಟು ಮಳೆ ಕೊರತೆ ಎದುರಿಸುತ್ತಿವೆ.
ಮಳೆಯ ತೀವ್ರ ಅಭಾವದಿಂದಾಗಿ ಜಿಲ್ಲೆಯ ಪ್ರಮುಖ ಮುಂಗಾರು ಬೆಳೆಗಳ ಬಿತ್ತನೆ ಗುರಿಯಲ್ಲಿ ಭಾರೀ ಹಿನ್ನಡೆಯಾಗಿದೆ. ಪ್ರಸಕ್ತ ಸಾಲಿನಲ್ಲಿ ಒಟ್ಟು 2,15,238 ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿತ್ತು, ಆದರೆ ಜುಲೈ 15ರ ವರೆಗೆ ಕೇವಲ 38,374 ಹೆಕ್ಟೇರ್ (ಶೇ. 17.83) ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ.
ಪ್ರಮುಖ ಬೆಳೆವಾರು ಬಿತ್ತನೆ ವಿವರ:
ಭತ್ತ: 63,800 ಹೆಕ್ಟೇರ್ ಗುರಿ ಇತ್ತಾದರೂ, ಮಳೆ ಮತ್ತು ನೀರಾವರಿ ಇಲ್ಲದ ಕಾರಣ ಬಿತ್ತನೆ ಶೂನ್ಯ ದಾಖಲಾಗಿದೆ. ಜಿಲ್ಲೆಯ ಪ್ರಮುಖ ಬೆಳೆಯಾದ ಮೆಕ್ಕೆಜೋಳ 1,27,245 ಹೆಕ್ಟೇರ್ ಗುರಿಗೆ ಕೇವಲ 31,218 ಹೆಕ್ಟೇರ್ (ಶೇ. 24.53) ಮಾತ್ರ ಬಿತ್ತನೆಯಾಗಿದೆ. ರಾಗಿ: 13,659 ಹೆಕ್ಟೇರ್ ಗುರಿಗೆ ಕೇವಲ 972 ಹೆಕ್ಟೇರ್ (ಶೇ. 7.12) ಬಿತ್ತನೆಯಾಗಿದೆ. ಶೇಂಗಾ: 3,315 ಹೆಕ್ಟೇರ್ ಗುರಿಗೆ ಕೇವಲ 412 ಹೆಕ್ಟೇರ್ (ಶೇ. 12.43) ಪ್ರಗತಿ ಕಂಡಿದೆ. ತೊಗರಿ ಬೆಳೆಯು 2,500 ಹೆಕ್ಟೇರ್ ಗುರಿಗೆ ಎದುರಾಗಿ 2,880 ಹೆಕ್ಟೇರ್ ಅಂದರೆ ಶೇ. 115.20 ರಷ್ಟು̧ ಸೂರ್ಯಕಾಂತಿ ಬೆಳೆಯು 1285 ಹೆಕ್ಟೇರ್ ಗುರಿಗೆ ಎದುರಾಗಿ 450 ಹೆಕ್ಟೇರ್ (ಶೇ.35.02), ಹತ್ತಿ ಬೆಳೆಯು 1120 ಹೆಕ್ಟೇರ್ ಗುರಿಗೆ ಎದುರಾಗಿ 775 ಹೆಕ್ಟೇರ್ (ಶೇ.69.20), ಸೊಯಾಬೀನ್ 75 ಹೆಕ್ಟೇರ್ ಗುರಿಗೆ ಎದುರಾಗಿ 605 ಹೆಕ್ಟೇರ್ (ಶೇ.806.678) ಹಾಗೂ ಇತರೆ 2239 ಹೆಕ್ಟೇರ್ ಗುರಿಗೆ ಎದುರಾಗಿ 1062 ಹೆಕ್ಟೇರ್ (ಶೇ.47.43) ಬಿತ್ತನೆ ಕಂಡಿದೆ.
ರೈತರಿಗೆ ಕೃಷಿ ಇಲಾಖೆ ಸಲಹೆಗಳು, ಪರ್ಯಾಯ ಬೆಳೆಗಳತ್ತ ಗಮನಹರಿಸಿ:
ಭತ್ತದ ನಾಟಿಗೆ ಜಲಾಶಯದ ನೀರಿನ ಸಂಗ್ರಹವನ್ನು ಆಧರಿಸಿದೆ. ಮತ್ತು ಮೆಕ್ಕೆಜೋಳದ ಬಿತ್ತನೆ ಅವಧಿ ಮುಗಿಯುತ್ತಾ ಬಂದಿರುವುದರಿಂದ ಮತ್ತು ಮಳೆ ಕೊರತೆ ಇರುವುದರಿಂದ, ರೈತರು ಕಡಿಮೆ ನೀರು ಬೇಡುವ ಪರ್ಯಾಯ ಬೆಳೆಗಳಾದ ಸೂರ್ಯಕಾಂತಿ, ಇದರ ಬಿತ್ತನೆ ಅವಧಿ ಆಗಸ್ಟ್ 1 ರಿಂದ ಆಗಸ್ಟ್ 31 ಹಾಗೂ ಕಡಿಮೆ ಅವಧಿಯ ಇತರೆ ದ್ವಿದಳ ಧಾನ್ಯಗಳು, ಸಿರಿಧಾನ್ಯಗಳತ್ತ ಗಮನಹರಿಸುವುದು ಸೂಕ್ತ.
ಬಿತ್ತನೆ ಬೀಜ ಮತ್ತು ಗೊಬ್ಬರ ಲಭ್ಯತೆ: ಜಿಲ್ಲೆಯ ರೈತ ಸಂಪರ್ಕ ಕೇಂದ್ರಗಳು ಹಾಗೂ ಖಾಸಗಿ ವಿತರಕರಲ್ಲಿ ಬಿತ್ತನೆ ಬೀಜ ಹಾಗೂ ರಸಗೊಬ್ಬರಗಳ ದಾಸ್ತಾನು ಸಮರ್ಪಕವಾಗಿದೆ. ಪ್ರಸ್ತುತ ವಿವಿಧ ರೈತ ಸಂಪರ್ಕ ಕೇಂದ್ರಗಳ ಮೂಲಕ 2,942.97 ಕ್ವಿಂಟಾಲ್ ಬಿತ್ತನೆ ಬೀಜ ದಾಸ್ತಾನಿದ್ದು, ಜಿಲ್ಲೆಯಲ್ಲಿ ಒಟ್ಟು 61,177.86 ಮೆಟ್ರಿಕ್ ಟನ್ ವಿವಿಧ ಗ್ರೇಡ್ಗಳ ರಸಗೊಬ್ಬರ ಲಭ್ಯವಿದೆ.
ದರ ನಿಯಂತ್ರಣ:
ಕೃಷಿ ಇಲಾಖೆಯು ರಸಗೊಬ್ಬರಗಳ ಗರಿಷ್ಠ ಮಾರಾಟ ದರವನ್ನು ನಿಗದಿಪಡಿಸಿದೆ. ಇದನ್ನು ಹೊರತುಪಡಿಸಿ ಅಧಿಕ ದರ ವಸೂಲಿ ಮಾಡುವ ಮಾರಾಟಗಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು. ರೈತರು ಪ್ರಸ್ತುತ ಹವಾಮಾನ ಪರಿಸ್ಥಿತಿಗೆ ಅನುಗುಣವಾಗಿ ಕೃಷಿ ಅಧಿಕಾರಿಗಳ ಸಲಹೆ ಪಡೆದು ಪರ್ಯಾಯ ಬೆಳೆ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕಾಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
- Davanagere Agriculture News
- Davanagere alternative crops
- Davanagere rain deficit
- Davanagere seed and fertilizer availability
- Kharif sowing Davanagere
- Maize sowing progress Karnataka
- Monsoon failure Davanagere
- ದಾವಣಗೆರೆ ಕೃಷಿ ಇಲಾಖೆ ಸಲಹೆ
- ದಾವಣಗೆರೆ ಬರಗಾಲ ಭೀತಿ
- ದಾವಣಗೆರೆ ಮಳೆ ಕೊರತೆ
- ಪರ್ಯಾಯ ಬೆಳೆಗಳು
- ಮುಂಗಾರು ಬಿತ್ತನೆ ಹಿನ್ನಡೆ
- ಮೆಕ್ಕೆಜೋಳ ಬಿತ್ತನೆ ಕುಂಠಿತ
- ರಸಗೊಬ್ಬರ ಲಭ್ಯತೆ ದಾವಣಗೆರೆ
- ಸೂರ್ಯಕಾಂತಿ ಬಿತ್ತನೆ ಅವಧಿ





Leave a comment