SUDDIKSHANA KANNADA NEWS/ DAVANAGERE/ DATE:12-12-2024
ಬೆಂಗಳೂರು: ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್ ಆತ್ಮಹತ್ಯೆ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಉತ್ತರ ಪ್ರದೇಶದಲ್ಲಿರುವ ಅತುಲ್ ಸುಭಾಷ್ ಪತ್ನಿ, ಅತ್ತೆ, ಮಾವ ವಿರುದ್ಧ ಪ್ರಕರಣ ದಾಖಲಾಗಿದೆ. ಬೆಂಗಳೂರು ಪೊಲೀಸರು ವಶಕ್ಕೆ ಪಡೆಯಲು ತೆರಳಿದಾಗ ಅತುಲ್ ಸುಭಾಷ್ ಪತ್ನಿ ನಿಖಿತಾ, ಅತ್ತೆ ಮಾವ ಮನೆಯಿಂದ ಓಡಿ ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಸುಭಾಷ್ ಸಾವಿನ ನಂತರ ಅವರ ಪತ್ನಿ ನಿಕಿತಾ ಸಿಂಘಾನಿಯಾ, ಆಕೆಯ ತಾಯಿ ನಿಶಾ, ತಂದೆ ಅನುರಾಗ್ ಮತ್ತು ಚಿಕ್ಕಪ್ಪ ಸುಶೀಲ್ ವಿರುದ್ಧ ಮಂಗಳವಾರ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಏತನ್ಮಧ್ಯೆ, ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸ್ ತಂಡ ಉತ್ತರ ಪ್ರದೇಶಕ್ಕೆ ತಲುಪಿದೆ. ತನಿಖೆಯ ಭಾಗವಾಗಿ ತಂಡವು ಮೃತ ಟೆಕ್ಕಿಯ ಪತ್ನಿ ಮತ್ತು ಅವರ ಕುಟುಂಬ ಸದಸ್ಯರನ್ನು ವಿಚಾರಣೆ ನಡೆಸಲಿದೆ. “ನಾವು ಎಲ್ಲಾ ಆರೋಪಗಳನ್ನು ಪರಿಶೀಲಿಸುತ್ತಿದ್ದೇವೆ ಮತ್ತು ಈ ವಿಷಯವನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡಲಾಗುತ್ತಿದೆ” ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪಿಟಿಐ ಜೊತೆ ಮಾತನಾಡಿದ ಸುಭಾಷ್ ಅವರ ಸಹೋದರ ಬಿಕಾಸ್, “ನನ್ನ ಸಹೋದರನಿಗೆ ನ್ಯಾಯ ಸಿಗಬೇಕು. ಈ ದೇಶದಲ್ಲಿ ಪುರುಷರಿಗೂ ನ್ಯಾಯ ಸಿಗುವ ಕಾನೂನು ಪ್ರಕ್ರಿಯೆ ನಡೆಯಬೇಕೆಂದು ನಾನು ಬಯಸುತ್ತೇನೆ. ಭ್ರಷ್ಟಾಚಾರ ಮುಕ್ತವಾದಾಗ ಮಾತ್ರ ನ್ಯಾಯವನ್ನು ನಿರೀಕ್ಷಿಸಲು ಸಾಧ್ಯ ಎಂದರು.
ಸತ್ಯಗಳ ಆಧಾರದ ಮೇಲೆ ನಿರ್ಧಾರಗಳನ್ನು ಮಾಡಿದಾಗ ಮಾತ್ರ ನ್ಯಾಯವನ್ನು ನಿರೀಕ್ಷಿಸಬಹುದು. ಅದು ಸಂಭವಿಸದಿದ್ದರೆ, ಜನರು ನಿಧಾನವಾಗಿ ನ್ಯಾಯಾಂಗ ವ್ಯವಸ್ಥೆಯ ಮೇಲಿನ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆ. ಇದು ಜನರು ಮದುವೆಯಾಗಲು ಭಯಪಡುವ ಪರಿಸ್ಥಿತಿಗೆ ಕಾರಣವಾಗಬಹುದು. ಗಂಡಸರು ಮದುವೆಯಾದರೆ ಹಣ ಮಾರುವ ಎಟಿಎಂ ಆಗಿಬಿಡುತ್ತೇವೆ ಎಂಬ ಭಾವನೆ ಬರಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಮಾರತ್ತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮಂಜುನಾಥ ಲೇಔಟ್ನಲ್ಲಿರುವ ಅವರ ನಿವಾಸದಲ್ಲಿ ಸೋಮವಾರ ಸುಭಾಷ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸಾವಿಗೆ ಮುನ್ನ 80 ನಿಮಿಷಗಳ ವಿಡಿಯೋ ಮಾಡಿ ಉಸಿರು ಚೆಲ್ಲಿದ್ದರು.
ಆರಂಭದಲ್ಲಿ ತಿಂಗಳಿಗೆ ರೂ. 40,000 ಬೇಡಿಕೆ ಇಟ್ಟಿದ್ದ ಕುಟುಂಬ, ನಂತರ ಅದನ್ನು ದುಪ್ಪಟ್ಟು ಮಾಡಿ, ನಂತರ 1 ಲಕ್ಷ ನೀಡುವಂತೆ ಕೋರಿದ್ದರು. ಸುಭಾಷ್ ಅವರ ಪತ್ನಿ ಮತ್ತು ಅವರ ಕುಟುಂಬವು ದಂಪತಿಯ ನಾಲ್ಕು ವರ್ಷದ ಮಗನ ನಿರ್ವಹಣೆಗೂ ಹಣ ಕೇಳಲಾಗಿತ್ತು. ನಾಲ್ಕು ವರ್ಷದ ಮಗು ಬೆಳೆಸಲು ಎಷ್ಟು ಹಣ ಬೇಕು ಎಂದು ಕುಮಾರ್ ಪ್ರಶ್ನಿಸಿದರು.
ಸುಭಾಷ್ಗೆ ಕಿರುಕುಳ ನೀಡಿದವರನ್ನು ಶಿಕ್ಷಿಸಬೇಕು, ಇದರಿಂದ ಅವರಿಗೆ ನ್ಯಾಯ ದೊರಕಿಸಿಕೊಡಬೇಕು ಮತ್ತು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಗ್ರಹಿಸಿದರು. ಏತನ್ಮಧ್ಯೆ, ನಿಕಿತಾ ಅವರ ಚಿಕ್ಕಪ್ಪ ಸುಶೀಲ್ ಕುಮಾರ್ ಅವರು ತಾವು ನಿರಪರಾಧಿ ಎಂದು ಹೇಳಿಕೊಂಡರು ಮತ್ತು ಘಟನೆಯ ಸ್ಥಳದಲ್ಲಿ ನಾನು ಅಥವಾ ಅವರ ಕುಟುಂಬದ ಯಾವುದೇ ಸದಸ್ಯರು ಇರಲಿಲ್ಲ ಎಂದು ಹೇಳಿದರು.
ಎಫ್ಐಆರ್ನಲ್ಲಿ ನನ್ನ ಹೆಸರೂ ಇದೆ ಎಂದು ತಿಳಿದು ಬಂದಿದೆ, ನಾನು ನಿರಪರಾಧಿ, ನಾನು ಅಲ್ಲಿಯೂ ಇರಲಿಲ್ಲ, ಅವರ ಆತ್ಮಹತ್ಯೆಯ ಬಗ್ಗೆ ಮಾಧ್ಯಮಗಳ ಮೂಲಕ ನಮಗೆ ತಿಳಿಯಿತು, ಘಟನೆ ನಡೆದ ಸ್ಥಳದಲ್ಲಿ ನಮ್ಮ ಕುಟುಂಬ ಸದಸ್ಯರು ಯಾರೂ ಇರಲಿಲ್ಲ. ಕಳೆದ ಮೂರು ವರ್ಷಗಳಿಂದ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದ್ದು, ಈ ಅವಧಿಯಲ್ಲಿ ಆತನೊಂದಿಗೆ ಅಥವಾ ಆತನ ಕುಟುಂಬದವರೊಂದಿಗೆ ಯಾವುದೇ ರೀತಿಯ ಸಂವಹನ ನಡೆಸಿಲ್ಲ ಎಂದು ತಿಳಿಸಿದರು.
ಪೊಲೀಸರ ಪ್ರಕಾರ, ಪ್ರಾಥಮಿಕ ತನಿಖೆಯ ಪ್ರಕಾರ ಸುಭಾಷ್ ತನ್ನ ಪತ್ನಿಯೊಂದಿಗೆ ವೈವಾಹಿಕ ಭಿನ್ನಾಭಿಪ್ರಾಯವನ್ನು ಎದುರಿಸುತ್ತಿದ್ದು, ಉತ್ತರ ಪ್ರದೇಶದಲ್ಲಿ ಆತನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಅವರು ತಮ್ಮ ಡೆತ್ ನೋಟ್ ಅನ್ನು ಹಲವಾರು ಜನರಿಗೆ ಇಮೇಲ್ ಮೂಲಕ ಕಳುಹಿಸಿದ್ದರು.